Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’

    December 31, 2025

    ರಿಶಲ್ ಬ್ರಿಟ್ನಿ ಫೆರ್ನಾಂಡಿಸ್‌ಗೆ ‘ದೇಶ್ ರತ್ನಾ’ ಪ್ರಶಸ್ತಿ

    December 31, 2025

    ‘ಕಾವ್ಯಾಂ ವ್ಹಾಳೊ- 10’ ಕೊಂಕಣಿ ಕವಿಗೋಷ್ಠಿ | ಜನವರಿ 03

    December 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’
    Article

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’

    December 31, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಲಿತ – ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸುವ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದವು. ಹಿರಿಯ ಕವಯತ್ರಿ ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’ (1999) ಅದಕ್ಕೆ ಒಂದು ನಿದರ್ಶನವಾಗಿದೆ. “ಕ್ಷೋಭೆಗೊಂಡು ಉರಿದುರಿದ ಮನವು ತನ್ನ ಆತ್ಮಬಲವನ್ನು ಪ್ರಜ್ವಲಿಸಿಕೊಳ್ಳುತ್ತ, ಇಷ್ಟು ವರ್ಷಗಳ, ಶತಮಾನಗಳ ಶೋಷಣೆ, ಕ್ರೌರ್ಯ, ಅನ್ಯಾಯಗಳಿಗೆ ಸಂಯಮ ತೋರುತ್ತ, ಆತ್ಮಹನನ ಮಾಡಿಕೊಳ್ಳುತ್ತ ಬಂದುದರ ತಿಳಿವಿನ ಸೂರ್ಯ ಈಗ ಮೂಡಿ ಮೌನ ಕರಗುವ ಹೊತ್ತಿನತ್ತ ಬೆರಳು ಮಾಡುವ ಕವಿತೆಗಳು ಇಲ್ಲಿವೆ” ಎಂದು ಕವಯತ್ರಿಯು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಂದು ಹೆಣ್ಣಿನ ಶೋಷಣೆಯ ವಿರುದ್ಧ ದನಿಯಾಗುವ, ಲಿಂಗ ಸಮಾನತೆಯನ್ನು ಪ್ರತಿಪಾದಿಸುವ, ಸಾಮಾಜಿಕ ಅನ್ಯಾಯಗಳನ್ನು ಸಂಯಮದಿಂದ ಮಂಡಿಸುವ ರೀತಿಯು ಮುಖ್ಯವಾಗುತ್ತದೆ. ಹೆಚ್ಚಿನ ಲೇಖಕಿಯರು ಪುರುಷ ನಿಂದೆಯಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುತ್ತಿರುವ ಹೊತ್ತಿನಲ್ಲಿ ಸಮಸ್ಯೆಯನ್ನು ಸಮಚಿತ್ತದಿಂದ ಗ್ರಹಿಸಿ, ಆರೋಗ್ಯಪೂರ್ಣ ಧೋರಣೆಯನ್ನು ಕಂಡುಕೊಳ್ಳುವ ಕವಿತೆಗಳು ಅನನ್ಯವೆನಿಸುತ್ತವೆ.

    ಕವಯತ್ರಿಯ ಪ್ರತಿಭೆಯು ವೈಯಕ್ತಿಕ ನೋವು, ಅವಮಾನಗಳನ್ನು ಹಳಹಳಿಕೆ ಮತ್ತು ಹಳವಂಡಗಳಲ್ಲಿ ಕಳೆದು ಹೋಗದೆ, ಅವುಗಳನ್ನು ಸ್ತ್ರೀಯರ ಸಾರ್ವತ್ರಿಕ ಸಮಸ್ಯೆಗಳೆಂಬಂತೆ ಪರಿಭಾವಿಸಿದ್ದರಿಂದ ಅವರ ಕಾವ್ಯವು ತಾತ್ವಿಕತೆಯನ್ನು ಪಡೆದುಕೊಂಡಿದೆ. ಬದುಕು ಮತ್ತು ಕಾವ್ಯಕ್ಕೆ ಸಂಬಂಧಿಸಿದಂತೆ ಅವರ ವೈಚಾರಿಕ ನಿಲುವು ವ್ಯಕ್ತವಾಗುತ್ತದೆ. “ಸೀಮಿತ ಖಾಸಗಿ ಬಾಳಿನ ಕಹಿ ಒಗರುಗಳನ್ನು ಭಾವವಿಚಾರಗಳ ಅಡಿಯಲ್ಲಿ ನೀಗಿಸಿ, ಅವುಗಳಿಗೆ ಸಾರ್ವತ್ರಿಕ ಪ್ರಯೋಜನದ ಕಲಾತ್ಮಕ ಸವಿ ಸುವಾಸನೆಗಳ ಆಯಾಮ ಲಭ್ಯವಾಗುವಂತೆ ಮಾತುಗಳಲ್ಲಿ ಪಡಿಮೂಡಿಸುತ್ತಾರೆ. ಈ ದೃಷ್ಟಿಯಿಂದ ಮಾಲತಿಯವರದು ಬೆಂಕಿಯಿಂದ ಅರಳಿದ ಬೆಳಕಿನ ಕಾವ್ಯ” ಎಂದ ನಿಸಾರ್ ಅಹಮದ್ ಅವರ ಮುನ್ನುಡಿಯ ಮಾತುಗಳು ಅರ್ಥಪೂರ್ಣವಾಗಿವೆ.

    ಯಾರ ಹಂಗೂ ಇಲ್ಲದೆ ಕಲರವವನ್ನು ಮಾಡುತ್ತಾ ಬಾನಿನ ಉದ್ದಕ್ಕೂ ಸ್ವತಂತ್ರವಾಗಿ ಹಾರಾಡಬೇಕಿದ್ದ ಹಕ್ಕಿಯು ಮೌನವಾಗಿದೆ. ಹೆಣ್ಣೊಬ್ಬಳು ಅದರ ಪರಿಸ್ಥಿತಿಗೆ ಕಾರಣಗಳನ್ನು ವಿಚಾರಿಸುತ್ತಲೇ ಆಕೆಯ ಬದುಕಿನ ಕಷ್ಟಗಳನ್ನು ತೋಡಿಕೊಳ್ಳುತ್ತಾ ಅದು ಹೆಣ್ಣಿನ ಬದುಕಿನ ಪ್ರತೀಕವಾಗುವ ವಿಶೇಷತೆಯನ್ನು ಇಲ್ಲಿ ಕಾಣುತ್ತೇವೆ. ಹಕ್ಕಿಯ ಸಂಕೇತವು ಹೆಣ್ಣಿನ ಸ್ಥಾನಮಾನಗಳನ್ನು ಧ್ವನಿಸುತ್ತದೆ. ದಬ್ಬಾಳಿಕೆಯು ಅಸಹನೀಯವೆನಿಸಿದಾಗ ಅದರ ವಿರುದ್ಧ ಸಿಡಿದೇಳಬೇಕಾದ ಅಗತ್ಯವನ್ನು ವಿವರಿಸುವ ‘ಮೌನ ಕರಗುವ ಹೊತ್ತು’ ಕವಿತೆಯ ಸಾಲುಗಳು ಹೀಗಿವೆ.

    ಗೂಳಿಹಾಂಗ ನುಗ್ಗೇದ ನೋಡ
    ಹೊಸಯುಗಾ ಚಾಚಿಕೊಂಡ ಕೋಡ
    ತನ್ನ ಗೆಜ್ಜೆಕಟ್ಟಿ ಸಜ್ಜುಗೊಳ್ಳುವಾಗ
    ನಮ್ಮ ಹೆಜ್ಜೆ ಇದಿರಾಗಬೇಕ
    ನಕ್ಷತ್ರಲೋಕ ಅದುರುವಾಂಗ
    ಕೂಗಬೇಕ ಕುಣಿಯಬೇಕ
    ಹೂತ ದನಿ ಮುಗಿಲ ಮುಟ್ಟಬೇಕ
    ಹೂತ ಹೋದವರಾತ್ಮ ತಟ್ಟಬೇಕ
    ಮೊಳೆತ ಅರಿವು ತೆನಿಗಟ್ಟಬೇಕ
    ಪಡೆದ ಜಲುಮಾ ಎತ್ತಿಕಟ್ಟಬೇಕ (ಪುಟ 3)

    ಇದರ ವಿರುದ್ಧ ನೆಲೆಯಲ್ಲಿರುವ ‘ಚಂದ್ರಬಿಂಬ’ವು ಹೆಣ್ಣಿನ ಸ್ಥಾನಮಾನಗಳಿಗಾಗಿ ಭಾಷಣ ಬಿಗಿದರೂ, ಒಳಗೊಳಗೆ ವ್ಯವಸ್ಥೆಯ ಕೈಗೊಂಬೆಗಳಾಗಿರುವ ಕೆಲವು ಮಹಿಳಾ ಹೋರಾಟಗಾರ್ತಿಯರ ಪರಿಸ್ಥಿತಿಯ ವಿರೋಧಾಭಾಸಗಳನ್ನು ಹರಿತ ವ್ಯಂಗ್ಯದ ಮೊನೆಯಿಂದ ತಿವಿಯುತ್ತದೆ.

    ತುಟಿ ಬಣ್ಣ ಮಾಸದಂತೆ ಕೂಗಿದರು
    ಹೆಣ್ಣು ಜನ್ಮಕ್ಕೆ ಇರಬೇಕೆ ಇಷ್ಟು ಕುತ್ತು
    ತುತ್ತೂ ನೀಡದ ಕಣ್ಣೆತ್ತಿಯೂ ನೊಡದ
    ಈ ತಾಯಂದಿರು ಸರಕಾರಿ ಹಿತವಂತರು
    ಮಾತು ಮಾತಿಗೆ ಎದೆಬಗೆದು ತೋರುವ ಭಾವ
    ಭಂಗಿಯ ನಮ್ಮ ನಟಿ ನಾರಾಯಣಿಯರು
    ಮಸ್ಕಿರಾ ಎವೆಗಳಲ್ಲಿ ತೂಗಿಟ್ಟರು
    ಮೊಸಳೆ ಕಣ್ಣ ಹನಿ ಮುತ್ತುಗಳನ್ನು (ಪುಟ 35)

    ವಿಜಯಾ ದಬ್ಬೆಯವರ ‘ಪ್ರಗತಿ’ ಎಂಬ ಕವನವು ವೇದಿಕೆಯಲ್ಲಿ ಪ್ರಗತಿಪರರಂತೆ ತೋರ್ಪಡಿಸಿಕೊಳ್ಳುವ ಗಂಡಸರ ಗೋಸುಂಬೆತನವನ್ನು ಅನಾವರಣಗೊಳಿಸುತ್ತದೆ. ಮಹಿಳೆಯರ ಬಗ್ಗೆ ತೋರಿಕೆಯ ಸಹಾನುಭೂತಿಯನ್ನು ತೋರಿಸುವವರ ಆಷಾಢಭೂತಿತನವನ್ನು ವಿಡಂಬಿಸುತ್ತದೆ. ಸ್ವಯಂಘೋಷಿತ ಪ್ರಗತಿಪರರ ವೈಯಕ್ತಿಕ ಬದುಕಿನ ಸೋಗಲಾಡಿತನವನ್ನು ಬಯಲಿಗೆಳೆಯುತ್ತದೆ. ಆ ಸಾಲಿಗೆ ಮಹಿಳಾ ಹೋರಾಟಗಾರ್ತಿಯರೂ ಸೇರುತ್ತಾರೆ ಎಂಬ ವಸ್ತುಸ್ಥಿತಿಯ ಇನ್ನೊಂದು ಮಗ್ಗುಲನ್ನು ಮಾಲತಿ ಪಟ್ಟಣಶೆಟ್ಟಿಯವರ ‘ಚಂದ್ರಬಿಂಬ’ ತೆರೆದಿಡುತ್ತದೆ.

    ಮಹಿಳೆಯರ ಹೋರಾಟಕ್ಕೆ ನೂರಾರು ಅಡ್ಡಿಗಳಿವೆ. ಬೇರೆ ಬೇರೆ ವಾದಗಳಲ್ಲಿ ವೈರಿಯ ಸ್ಥಾನ ನಿರ್ದಿಷ್ಟ ಮತ್ತು ಸ್ಪಷ್ಟ. ಸ್ತ್ರೀ ವಾದದಲ್ಲಿ ಗಂಡ, ತಂದೆ, ಧರ್ಮ ದೇವರುಗಳು ಆ ಸಾನದಲ್ಲಿದ್ದಾರೆ. ಭಾಗೀರಥಿ ಹೆಗಡೆ, ಮಲ್ಲಿಕಾ ಘಂಟಿ, ಮಾಧವಿ ಭಂಡಾರಿಯವರು ಆ ನಿಲುವಿಗೆ ಬದ್ಧವಾಗಿ ಬರೆದರೆ ಮಾಲತಿ ಪಟ್ಟಣಶೆಟ್ಟಿಯವರು ಅವರಿಂದ ಭಿನ್ನವಾಗುತ್ತಾರೆ. ಬೆಳೆದು ಯುವಕನಾದ ಮಗನ ಮೇಲಿನ ಅಭಿಮಾನ, ಹೆಮ್ಮೆ, ಅಕ್ಕರೆ, ತಾಯ್ತನ ಸಾರ್ಥಕ್ಯ ಭಾವವನ್ನು ‘ಶ್ರೀಗಂಧ’ ಕವಿತೆಯು ದಾಖಲಿಸುತ್ತದೆ.

    ಒಳಗೊಳಗೆ
    ಮನದ ತಳದೊಳಗೆ
    ತಳತಳಗೊಂಡು
    ತಲೆ ಇಟ್ಟ ಆಸೆ
    ಅಂಗಳದಲ್ಲೀಗ ಕಂಗಳರಳಿ
    ಪಕ್ಕನೆ ನಕ್ಕಂತೆ ನಕ್ಷತ್ರ
    ಬೆಳಗಿನಾಗಸಕೆ ಗಂಧದಾರತಿ
    ಬೆಳಗುವ ನೆಲಸಂಪಿಗೆ ಹೂವ ಕಂಪಾಗಿ
    ನೆಲದ ಸೊಂಪಾಗಿ
    ಎತ್ತೆತ್ತಲೂ ಹೊಮ್ಮಿ ನಿಂತಿದ್ದಾನೆ. (ಪುಟ 4)

    ಎನ್ನುವಲ್ಲಿ ಮಗನನ್ನು ಸಾಕಿ ಬೆಳೆಸಿದ್ದರ ಬಗೆಗಿನ ಹೆಮ್ಮೆ ವ್ಯಕ್ತವಾಗುತ್ತದೆ. ಇವರು ಸ್ತ್ರೀ ಸಂವೇದನೆಯ ನೆಲೆಯಿಂದ ಹೊರಟರೂ ಸುತ್ತುಮುತ್ತಲ ದೈನಂದಿನ ವಿವರಗಳಿಂದ, ಕುಟುಂಬದ ಆಪ್ತ ಸಂಬಂಧಗಳ ಮೂಲಕ ವಿಶಿಷ್ಟ ಸಂವೇದನೆಯನ್ನು ರೂಪಿಸಿಕೊಳ್ಳುತ್ತಾರೆ. ವಾದಗಳು ಅನುಭವದ ಪ್ರಾಮಾಣಿಕ ಭಾವಗಳಾಗಿ ಬರುವುದರಿಂದ ಕವಿತೆಗಳಿಗೆ ಕಲಾತ್ಮಕತೆಯು ದಕ್ಕುತ್ತದೆ.

    ರಣಗುಡುವ ಬಿಸಿಲ
    ಭಸ್ಮವ ಧರಿಸಿದ ಸಂಜೆ ನಾ
    ಕಡುಗೆಂಪಿನಲಿ ಕಪ್ಪು
    ಕುಪ್ಪಸವ ತೊಟ್ಟವಳು
    ಕತ್ತಲೆಗೆ ಹೆಪ್ಪಾಗಿ
    ಗಪ್ಪಾಗಿ ಹೊರಟವಳು
    ಕತ್ತಲೆಯ ನನ್ನ ಚಂದ್ರ
    ಕಾಳಿಯ ಮಾಸಿದ ಕಸೂತಿ
    ಸೆರಗಿನಲಿ ಹಚ್ಚನೆಯ ಗಿಳಿ
    ಯಾಗಿ ಏಕೆ ಹಾರಿ ಬಂದೆ
    ಎದೆಯ ದಾವಾನಲಕೇಕೆ
    ಸುರಿವ ಮಳೆ
    ಯಾಗ ಬಂದೆ? (ಅಪರೂಪದ ಪ್ರೀತಿಯೆ, ಪುಟ 13)

    ಎನ್ನುವಲ್ಲಿ ಅಮೂರ್ತವಾಗಿದ್ದ ಪ್ರೀತಿಯು ಮೂರ್ತರೂಪವನ್ನು ಪಡೆಯುತ್ತಾ ಅರ್ಥಪೂರ್ಣ ಚಿತ್ರಕವಿತೆಯಾಗುವಲ್ಲಿ ಆಸಕ್ತಿಯನ್ನು ತಾಳುತ್ತದೆ. ಪ್ರಕೃತಿಯ ಚಿತ್ರಣಕ್ಕೆ ಸೀಮಿತವಾಗದೆ ಅದರೊಳಗಿನ ತಾತ್ವಿಕತೆಯಿಂದಾಗಿ ಮುಖ್ಯವೆನಿಸಿಕೊಳ್ಳುವ ‘ಆ ಒಂದು ಗೂಡಿಗೆ’ ಬಾನು ಮತ್ತು ಸೃಷ್ಟಿಯ ವಿಸ್ತಾರವನ್ನು ಬೆರಗುಗಣ್ಣನಿಂದ ನೋಡುತ್ತಾ, ಬಾಯಿಯಲ್ಲಿ ಕಚ್ಚಿಕೊಂಡ ಹುಲ್ಲಿನಲ್ಲಿ ಪ್ರೀತಿಯ ಗೂಡನ್ನು ವ್ಯಕ್ತಪಡಿಸುತ್ತಾ ಹಾರುವ ಹಕ್ಕಿಯು ಮಾನವ ಹೃದಯದ ಪ್ರತೀಕವೆನಿಸಿಕೊಳ್ಳುತ್ತದೆ.

    ಅಂತರಿಕ್ಷದ ಮಹಾಮನೆಯ ಮರೆತು
    ಕಣ್ಣ ಬಾಗಿಲ ಮುಚ್ಚಿ
    ಆಸೆ ದೀಪವ ಹಚ್ಚಿ
    ಹುಡುಕುತ್ತೇನೆ ಒದ್ದೆಗಣ್ಣುಗಳಿಂದ
    ಒಳಗೆ ನನ್ನೊಳಗೆ ಒಂದು ಗೂಡು
    ಗೂಡುಗಟ್ಟಿದ ಲಕ್ಷೋಪಲಕ್ಷ ಹಾಡಲ್ಲಿ
    ಹಕ್ಕಿಯ ಎದೆ ತುಡಿವ ಹುಲ್ಲುಗರಿಯಲ್ಲಿ ಮಿಡಿವ ಆ ಗೂಡನ್ನು
    ತಡಕಾಡುತ್ತೇನೆ ತವಕಗಣ್ಣುಗಳಿಂದ
    ಎದೆ ತುಂಬಿ ಅರಳಿಕೊಳ್ಳುವ
    ಸೃಷ್ಟಿಯ ಆ ಜಾಡನ್ನು (ಪುಟ 40)

    ಕಾವ್ಯದಲ್ಲಿ ಸಾಮಾಜಿಕತೆಯ ಬಗ್ಗೆ ಮಾತನಾಡುವವರು, ಯಾವುದೋ ಕಾವ್ಯದಲ್ಲಿ ಸಾಮಾಜಿಕತೆ ಇಲ್ಲವೆಂದು ಆಕ್ಷೇಪಿಸುವವರು ಕಾವ್ಯದ ಬಾಹ್ಯ ವಿವರಗಳನ್ನಷ್ಟೇ ನೋಡುತ್ತಾರೆ. ಸಮಕಾಲೀನ ವ್ಯಕ್ತಿ, ಉತ್ಪನ್ನ, ಭಾಷಾರೂಪಗಳ ಬಳಕೆಯಿಂದ ಮಾತ್ರ ಕೃತಿಯು ಸಾಮಾಜಿಕ ಪ್ರಸ್ತುತತೆಯನ್ನು ಪಡೆಯುವುದಿಲ್ಲ. ಕವಿತೆಯೊಳಗಿನ ಮಿಡಿತ ಎತ್ತ ಕಡೆಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಕವಿತೆಯ ವ್ಯಾಪ್ತಿ ಮಾನವ ಸಮಾಜಕ್ಕಷ್ಟೇ ಸೀಮಿತವಲ್ಲ. ಸೃಷ್ಟಿಯನ್ನು ಕುರಿತ ಪ್ರೀತಿಯಲ್ಲೇ ಕವಿತೆಯ ನೆಲೆಯಿದೆ. ಮನುಷ್ಯ ಅದರ ಒಂದು ಅಂಶ ಮಾತ್ರ.

    ತೀವ್ರಗೊಳ್ಳುತ್ತಿರುವ ಸಾಮಾಜಿಕ ಕೋಲಾಹಲಗಳ ನಡುವೆ ಹೆಚ್ಚು ಅಬ್ಬರಿಸದೆ, ತಮ್ಮೊಳಗಿನ ಪ್ರತಿಭಟನೆಯ ಕಾವನ್ನು ಆರಲೂ ಬಿಡದೆ ಮೆಲುನುಡಿಗಳ ಅಲಗಿನ ಮೇಲೆ ಕವಿತೆಗಳನ್ನು ರಚಿಸಿರುವ ಮಾಲತಿ ಪಟ್ಟಣಶೆಟ್ಟಿಯವರಿಗೆ ತಾವು ಎಚ್ಚರ ತಪ್ಪಿದರೆ ಕವಿತೆಗಳು ಬೀದಿ ಬದಿಯ ಭಾಷಣಗಳಾಗುವ, ಆತ್ಮಪ್ರತ್ಯಯದ ರಚನೆಗಳಾಗುವ ಅಪಾಯವಿದೆ ಎಂದು ತಿಳಿದಿದೆ. ಸಾಮಾಜಿಕ ಮತ್ತು ಧಾರ್ಮಿಕ ಅಸಹನೆಗಳು ಯಾವ ಸಭ್ಯತೆಯೂ ಇಲ್ಲದೆ ಬಹಿರಂಗವಾಗಿ ವ್ಯಕ್ತಗೊಳ್ಳುವ ನಂಜು ಮುಸುಕಿದ ಈ ವಾತಾವರಣದಲ್ಲಿ ಉಗ್ರವಾದಿಗಳಂತೆ ಅಥವಾ ಧರ್ಮಭೀರುಗಳಂತೆ ಎಲ್ಲವನ್ನೂ ಸರಳಗೊಳಿಸಿ ಪರಿಹಾರವನ್ನು ಸೂಚಿಸುವ ಕವಿತೆಗಳನ್ನು ಬರೆಯುವುದು ಸುಲಭ. ಇಂಥ ಕವಿತೆಗಳಲ್ಲಿ ಕನ್ನಡವೂ ಬಳಲುತ್ತಿರುವುದನ್ನು ಕಾಣಬಹುದು. ಈ ತೊಡಕುಗಳ ಬಗ್ಗೆ ಎಚ್ಚರವಿರುವ ‘ಮೌನ ಕರಗುವ ಹೊತ್ತು’ ಸಂಕಲನದ ಕವಿತೆಗಳು ಹೆಚ್ಚು ಸಂಯಮದಿಂದ ತಮ್ಮನ್ನು ತಾವು ಪ್ರಕಟಪಡಿಸಿಕೊಂಡಿವೆ. ಭಾವನಾತ್ಮಕತೆಯ ನಿಟ್ಟಿನಲ್ಲಿ ಯಶಸ್ವಿಯಾದ ಕವಿತೆಗಳೊಂದಿಗೆ ಸಾಮಾಜಿಕ, ರಾಜಕೀಯ ಮತ್ತು ರಾಷ್ಟ್ರ ಸಂಬಂಧಿ ವಿಚಾರಗಳನ್ನು ಕವಿತೆಯನ್ನಾಗಿಸುವಾಗ ಭಾವಗಾರಿಕೆಗೆ ಕುಂದು ಬಂದಿರುವುದನ್ನು ಕಾಣುತ್ತೇವೆ. ಸ್ವಾನುಭವ, ನಿರಂತರ ಅಧ್ಯಯನ ಮತ್ತು ಸತತ ಪರಿಶ್ರಮಗಳ ಮೂಲಕ ಹೊಚ್ಚ ಹೊಸ ಪ್ರತಿಮೆ ರೂಪಕಗಳನ್ನು ಕಲ್ಪಿಸಿ ಸ್ವೋಪಜ್ಞತೆಯನ್ನು ಮೆರೆದಿದ್ದರೂ ವಿವಿಧ ಲಯ ವಿನ್ಯಾಸಗಳನ್ನು ತಮ್ಮದಾಗಿಸಿಕೊಂಡಿದ್ದರೆ ಲಯ – ಛಂದೋಬದ್ಧತೆಗಳ ಏಕತಾನತೆಯಿಂದ ಪಾರಾಗಬಹುದಿತ್ತು. ಏನೇ ಇದ್ದರೂ ನೋವಿನ ಕಾವು ಆರದೆ ಅರಿವಿನ ಬೆಳಕಾಗಿ ಪ್ರಜ್ವಲಿಸಿದ ಈ ಸಂಕಲನವು ಸ್ವೋಪಜ್ಞತೆಯಿಂದ ಕಂಗೊಳಿಸುತ್ತದೆ.

    ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿ : ಮಾಲತಿ ಪಟ್ಟಣಶೆಟ್ಟಿ

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು), ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ), ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ), ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ), ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು, ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleರಿಶಲ್ ಬ್ರಿಟ್ನಿ ಫೆರ್ನಾಂಡಿಸ್‌ಗೆ ‘ದೇಶ್ ರತ್ನಾ’ ಪ್ರಶಸ್ತಿ
    roovari

    Add Comment Cancel Reply


    Related Posts

    ರಿಶಲ್ ಬ್ರಿಟ್ನಿ ಫೆರ್ನಾಂಡಿಸ್‌ಗೆ ‘ದೇಶ್ ರತ್ನಾ’ ಪ್ರಶಸ್ತಿ

    December 31, 2025

    ‘ಕಾವ್ಯಾಂ ವ್ಹಾಳೊ- 10’ ಕೊಂಕಣಿ ಕವಿಗೋಷ್ಠಿ | ಜನವರಿ 03

    December 31, 2025

    ‘ಕಡೆಂಗೋಡ್ಲು ಪ್ರಶಸ್ತಿ’ಗೆ ಕವನ ಸಂಕಲನಗಳ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 15

    December 31, 2025

    ಕನ್ನಡದ ಖ್ಯಾತ ಲೇಖಕಿ, ಅನುವಾದಕಿ, ಕವಯತ್ರಿ ಸರಿತಾ ಜ್ಞಾನಾನಂದ ಇನ್ನಿಲ್ಲ

    December 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.