ನೃತ್ಯಕ್ಷೇತ್ರದೊಳಗೆ ಇಂದು ಅನೇಕ ಆವಿಷ್ಕಾರಗಳು ನಡೆಯುತ್ತಿದ್ದು, ಹೊಸ ವಿಚಾರಗಳನ್ನು ಹೊತ್ತು ತರುವ ಕೆಲಸವನ್ನು ಅದೆಷ್ಟೋ ಕಲಾವಿದರು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಾಯೋಗಿಕವಾಗಿ ಮಂಡಿಸುವ ವಿಚಾರಗಳನ್ನು ಈ ರೀತಿಯಲ್ಲೂ ತಿಳಿಸಬಹುದಾ?! ಎಂದು ಕಲಾ ರಸಿಕರಲ್ಲಿ ಹೊಸದೊಂದು ಕಲ್ಪನೆ ಮೂಡುವ ರೀತಿಯಲ್ಲಿ ನೃತ್ಯ ಕಲಾಲೋಕ ಸಾಗುತ್ತಿದೆ. ಹೊಸ ವಿಚಾರಗಳನ್ನು ಪ್ರಾಯೋಗಿಕವಾಗಿ ಮುನ್ನಡೆಸುವಾಗ ಸೈದ್ಧಾಂತಿಕ ಜ್ಞಾನ ಮತ್ತು ಅದರ ಒಳಹರಿವು ನಮ್ಮಲ್ಲಿ ಉಂಟಾಗಲೇಬೇಕು. ಇದರಿಂದಲೇ ನೃತ್ಯ ಪ್ರದರ್ಶನಗಳು ಕಲಾ ರಸಿಕರ ಮನ ಮುಟ್ಟುವ ಮೂಲಕ ವೇದಿಕೆಯಲ್ಲಿ ಗೆದ್ದು ಬೀಗುತ್ತವೆ.
ನಿರಂತರ ಓದು, ಕ್ರಿಯಾಶೀಲ ಚಿಂತನೆ ಮತ್ತು ಆಳವಾದ ಅಧ್ಯಯನಶೀಲ ಮನಸ್ಥಿತಿಯ ಗುರುಗಳು ಹಲವರಿದ್ದಾರೆ. ಈ ಸಾಲಿನಲ್ಲಿ ಗುರುತಿಸಿಕೊಂಡಿರುವ ಅಗ್ರಪಂಕ್ತಿಯ ನೃತ್ಯಗುರು ಕಲೈಮಾಮಣಿ ಡಾ. ಲಕ್ಷ್ಮೀ ರಾಮಸ್ವಾಮಿ. ಭರತನೃತ್ಯದ ಮೂಲ ನೆಲೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಇವರು ಹುಟ್ಟು ಹಾಕಿದ ನೃತ್ಯಸಂಸ್ಥೆ ಶ್ರೀ ಮುದ್ರಾಲಯವು 35 ವರುಷಗಳಿಂದ ಹಲವಾರು ನೃತ್ಯರೂಪಕಗಳನ್ನು, ಮಾರ್ಗಂ ಚೌಕಟ್ಟುಗಳನ್ನು ಕಲಾ ರಸಿಕರಿಗೆ ನೀಡಿರುತ್ತದೆ. ಶ್ರೀ ಮುದ್ರಾಲಯದ ಹೊಸ ಪ್ರಯತ್ನ ‘ಐಕ್ಯಂ’ ಎನ್ನುವ ಮನೋಚಿಂತನೆಯ ಅನಾವರಣ ಭಾರತ್ ಕಲಾಚಾರ್, ಚೆನ್ನೈಯಲ್ಲಿ 29 ಡಿಸೆಂಬರ್ 2025ರಂದು ನಡೆದಿದ್ದು, ಹಲವಾರು ಕಲಾ ರಸಿಕರ ಮನ ಸೆಳೆಯಿತು.

‘ಐಕ್ಯಂ’ ಎಂದರೆ ಹೆಸರೇ ಹೇಳುವಂತೆ ಐಕ್ಯತೆ. ಎಲ್ಲರೊಳಗೆ ಒಂದು ಎನ್ನುವ ಒಗ್ಗಟ್ಟಿನ ಮೂಲ ಮಂತ್ರ. ಒಂದು ಗಂಟೆಗಳ ಕಾಲ ನಿರಂತರವಾಗಿ ಸಾಗುವ ಈ ಗ್ರೂಪ್ ಪ್ರೊಡಕ್ಷನ್ನಲ್ಲಿ ಹದಿನೈದು ನೃತ್ಯ ಕಲಾವಿದರಿದ್ದರು. ತಮಿಳು ಸಾಹಿತ್ಯದಲ್ಲಿ ಆಳವಾದ ಚಿಂತನೆಯನ್ನು ಬಿತ್ತುವ ಮೂಲಕ ಇದರ ಮೂಲ ಮಂತ್ರವು (ಘೋಷವು) ಪ್ರತಿ ಜನರನ್ನು ಮುಟ್ಟಿತು. ತಮಿಳು ಸಾಹಿತ್ಯದ ಪರಿಪೂರ್ಣ ಹರಿವನ್ನು ಪ್ರಥಮ ನೃತ್ಯದಲ್ಲಿ ವರ್ಣಿಸಿದರು. ನೃತ್ಯ ಕಲಾವಿದೆಯರು ಘನವಾದ ತಮಿಳು ಸಾಹಿತ್ಯ ಮತ್ತು ಸಾಮಾನ್ಯ ಸೊಲ್ಲುಕಟ್ಟುಗಳ ಚೌಕಟ್ಟನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರದರ್ಶಿಸಿದರು. ಇದು ರಾಗಮಾಲಿಕೆ ಮತ್ತು ತಾಳಮಾಲಿಕೆಯಲ್ಲಿ ರೂಪುಗೊಂಡಿತ್ತು. ತಮಿಳು ಸಾಹಿತ್ಯವುಳ್ಳ ಈ ಹಾಡಿನ ರಚನೆ ಮಹಾಕವಿಗಳಾದ ಶ್ರೀ ಸುಬ್ರಮಣ್ಯ ಭಾರತಿ ಅವರದ್ದಾಗಿತ್ತು.
ಎರಡನೇ ನೃತ್ಯಬಂಧವಾಗಿ ‘ಸೂರ್ಯ ಮೂರ್ತೆ’. ಕ್ಲಿಷ್ಟಕರ ಜತಿಗಳ ಜೋಡಣೆಯೊಂದಿಗೆ, ಸೌರಾಷ್ಟ್ರ ರಾಗದಲ್ಲಿ, ಚತುರಶ್ರ ಜಾತಿ ಧ್ರುವ ತಾಳದಲ್ಲಿ ಸಂಯೋಜಿತವಾದ ಈ ಬಂಧವು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರಿಂದ ರಚಿತವಾಗಿದೆ. ಸೂರ್ಯನೊಂದಿಗೆ ಜನರ ಒಡನಾಟ, ವಿಭಿನ್ನ ರಾಶಿಗೆ ಸೂರ್ಯ ಸಂಬಂಧ ಮತ್ತು ಸೂರ್ಯನು ಭೂಮಿಯ ಜೀವಜಂತುಗಳಿಗೆ ಹೇಗೆ ಹೊಂದಿಕೊಂಡಿದ್ದಾನೆ ಎನ್ನುವ ವಿಭಿನ್ನ ಕಥಾಹಂದರವು ಇದರಲ್ಲಿದ್ದು, ಸೂರ್ಯದೇವ ರಕ್ಷಕನೂ ಹೌದು, ದುಷ್ಟರ ಶಿಕ್ಷಕನೂ ಹೌದು. ಐಕ್ಯತೆಯ ಮಹಾಭೋದಕನಾಗಿ ಸೂರ್ಯ ಎಂಬ ಅಂಶವನ್ನು ಅಚ್ಚುಕಟ್ಟಾಗಿ ಶಾಸ್ತ್ರಿಯ ನೆಲೆಗಟ್ಟಿನೊಳಗೆ ತೋರಿಸಿಕೊಟ್ಟರು. ಸೂರ್ಯ ಮತ್ತು ಅಷ್ಟ ಗ್ರಹಗಳ ನಡುವೆ ಬೆಸೆದಿರುವ ಭಾವ ಸಂಬಂಧ ಐಕ್ಯತೆಯ ಪರಮ ಸೂಚಕ ಎಂಬುದು ಇದರ ಇನ್ನೊಂದು ದೃಷ್ಟಿಕೋನವೂ ಹೌದು. ನೃತ್ಯದಲ್ಲಿ ಕಲಾವಿದೆಯರ ಅಭ್ಯಾಸ, ಶ್ರದ್ಧೆ ಮತ್ತು ಭಕ್ತಿ ಎದ್ದು ಕಾಣುತ್ತಿತ್ತು.

ಮುಂದೆ ನೃತ್ಯದಲ್ಲಿ ಐಕ್ಯತೆಯ ಸಾರ ಸಾರಿದ ಗೀತೆ ತಿರುಕ್ಕುರಲ್. ಇದು ರಾಗಮಾಲಿಕೆ ಮತ್ತು ತಾಳಮಾಲಿಕೆಯಲ್ಲಿ ರೂಪುಗೊಂಡಿತ್ತು. ಇದರಲ್ಲಿ ಗಂಡ ಹೆಂಡತಿಯ ಮಧ್ಯೆ ಐಕ್ಯತೆ ಸಾಧಿಸುವ ಬಗೆಯನ್ನು ಶಾಸ್ತ್ರೀಯ ಚೌಕಟ್ಟಿನೊಳಗೆ ವಿವರಿಸಲಾಯಿತು. ಹೆಂಡತಿಯು ಗಂಡನ ಪ್ರತಿ ಕ್ರಿಯೆಯಲ್ಲೂ ತಪ್ಪನ್ನೇ ಹುಡುಕುತ್ತಾಳೆ. ಯಾವುದರಲ್ಲೂ ಖುಷಿಯನ್ನು ಪಡೆಯುವುದಿಲ್ಲ. ಹೀಗಿರುವಾಗ ಗಂಡನೇ ಎಲ್ಲವನ್ನೂ ನಿಭಾಯಿಸಿ, ಬದುಕಿನಲ್ಲಿ ಮತ್ತು ಸಂಬಂಧದಲ್ಲಿ ಹೇಗೆ ಐಕ್ಯತೆ ಸಾಧ್ಯ ಎಂಬುದನ್ನು ಸಾಧಿಸುತ್ತಾನೆ. ಐಕ್ಯತೆಯೇ ಬದುಕಿನ ಮೂಲ ಮಂತ್ರ ಎಂಬ ಸಾಕಾರ ಈ ಪರಿಕಲ್ಪನೆಯಲ್ಲಿ ಅಚ್ಚುಕಟ್ಟಾಗಿ ನೆರವೇರಿದೆ ಎಂಬುದು ನನ್ನ ಅಭಿಪ್ರಾಯ. ಎಲ್ಲರೂ, ಎಲ್ಲವೂ ಒಂದೇ ಆದರೆ ಅದರ ಅಭಿವ್ಯಕ್ತಿ ಮಾತ್ರ ವಿಭಿನ್ನ. ಈ ಸಾಲಿಗೆ ಸೇರಿದ ನೃತ್ಯ ಐಕ್ಯಮತ್ಯ ಸೂಕ್ತ. ಇದರಲ್ಲಿ ತಮಿಳು ವರ್ಣಮಾಲೆಯ ಜೊತೆಗೆ ಸಂಗೀತ ಸ್ವರಗಳ ಸಂಬಂಧ ಮತ್ತು ಐಕ್ಯಮತ್ಯ ಸೂಕ್ತದ ವಿಶೇಷತೆ ಸಾರಲಾಯಿತು. ಸೂಕ್ತವು ಐಕ್ಯತೆಯ ಸೂಚಕ ಎಂಬುದನ್ನು ವೇದಿಕೆಯಲ್ಲಿ ನಿರೂಪಿಸಿದ ರೀತಿ ಎಲ್ಲ ರಸಿಕರನ್ನು ಸೆಳೆಯಿತು. ಕಲ್ಯಾಣಿ ರಾಗ ಮತ್ತು ರೂಪಕ ತಾಳದಲ್ಲಿ ಸಂಯೋಜಿಸಲ್ಪಟ್ಟಿತು.
ಪ್ರೊಡಕ್ಷನ್ನಿನ ಸಂಪೂರ್ಣ ನೃತ್ಯ ಸಂಯೋಜನೆ, ವೇಷಭೂಷಣ ನಿರ್ವಹಣೆ ಗುರು ಡಾ. ಲಕ್ಷ್ಮೀ ರಾಮಸ್ವಾಮಿ ಅವರದಾಗಿದ್ದು, ಚೆನ್ನೈ ದಿಗ್ಗಜರು ಇದರ ಧ್ವನಿ ಮುದ್ರಣದಲ್ಲಿ ಜೊತೆಯಾಗಿದ್ದರು. ಸಂಗೀತ ಸಂಯೋಜನೆ ಮತ್ತು ನಿರ್ದೇಶನವನ್ನು ಡಾ. ರಾಜಕುಮಾರ ಭಾರತಿ ಅತ್ಯುತ್ತಮವಾಗಿ ನಿರ್ವಹಿಸಿದರು. ಭಾವಪೂರ್ಣ ಗಾಯನದಲ್ಲಿ ಶ್ರೀ ವೀರರಾಘವನ್ ಮತ್ತು ಪ್ರೀತಿ ಸೇತುರಾಮನ್, ಮೃದಂಗದಲ್ಲಿ ಶ್ರೀ ವೇದಕೃಷ್ಣ ರಾಮ್, ನಟ್ಟುವಾಂಗದಲ್ಲಿ ಶ್ರೀ ಗುರು ಭಾರಧ್ವಾಜ್, ವಯಲಿನ್ ಶ್ರೀ ಅನಂತಕೃಷ್ಣ, ಕೊಳಲಿನಲ್ಲಿ ಶ್ರುತಿಸಾಗರ್, ತಬಲಾದಲ್ಲಿ ಶ್ರೀ ಗಣಪತಿಯವರು ಸಾಥ್ ನೀಡಿದರು.

ಐಕ್ಯದ ನರ್ತಕಿಯರಾಗಿ ಡಾ. ಜಾಗ್ಯಸೇನಿ ಚಟರ್ಜಿ, ವಿದ್ಯಾಲಕ್ಷ್ಮಿ ಗೋಪಿನಾಥ್, ವಿಭಾ ಬಾಲಾಜಿ, ರೇಷ್ಮಾ ರಾಜೀವ್, ಪ್ರಜ್ಞಾ ಡಿ.ಎಸ್., ಅನನ್ಯ ವಿಜಯಕುಮಾರ್, ಅನನ್ಯ ವೆಂಕಟೇಶ್, ಅಕ್ಷರ ಎ.ಕೆ., ಅನುಪ್ರೀತಿ, ದಿಯಾ, ಅಭಿಘ್ನ, ವೈಷ್ಣವಿ, ಹರ್ಷಿಣಿ, ನಿರಲ್ಯ ಮತ್ತು ರೇವತಿ ಇವರುಗಳು ಅಧ್ಬುತವಾಗಿ ನರ್ತಿಸಿದರು.
ಐಕ್ಯದ ಇನ್ನೊಂದು ವಿಶೇಷ ಆಕರ್ಷಣೆ ಗುರುಗಳ ಬಗ್ಗೆ ಶಿಷ್ಯೆಗಿರುವ ಭಕ್ತಿಯ ಅನಾವರಣ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುರು ಚಿತ್ರಾ ವಿಶ್ವೇಶ್ವರನ್ ಇವರು ಐಕ್ಯಂ ಬಗ್ಗೆ ಅದ್ಬುತ ಮಾತುಗಳನ್ನಾಡಿದರು. ಗುರು – ಶಿಷ್ಯರ ನಡುವಿನ ಭಕ್ತಿ – ಪ್ರೀತಿಯನ್ನು ಎಷ್ಟು ವರ್ಷಗಳಾದರೂ ಒಂದೇ ರೀತಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದಕ್ಕೆ ಇದೇ ಉದಾಹರಣೆ. ನೃತ್ಯಕ್ಷೇತ್ರವು ಐಕ್ಯವಾಗಿ ವಿಭಿನ್ನ ಚಿಂತನೆಯಿಂದ ಸದಾಸಾಗಲಿ ಎಂಬುದೇ ನನ್ನ ಆಶಯ.

ನೃತ್ಯ ವಿಮರ್ಶಕರು – ವಿದ್ವಾನ್ ಮಂಜುನಾಥ್ ಎನ್. ಪುತ್ತೂರು
