ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಸಮೂಹ ಸಂಪನ್ಮೂಲ ಕೇಂದ್ರ ಅಂಗರಗುಂಡಿ ಕ್ಲಸ್ಟರ್ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಫಿಶರೀಶ್ ನಲ್ಲಿ ದಿನಾಂಕ 31 ಡಿಸೆಂಬರ್ 2025ರಂದು ಎಫ್.ಎಲ್.ಎನ್. ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಫಿಶರೀಶ್ ನ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ ಪಿ. “ಪ್ರತಿಯೊಬ್ಬ ವಿದ್ಯಾರ್ಥಿಗೂ ಬಲವಾದ ಶೈಕ್ಷಣಿಕ ಅಡಿಪಾಯವನ್ನು ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ರೂಪಿಸಿ ಕೊಡಬೇಕು. ಬರವಣಿಗೆ, ಓದುವಿಕೆ ಮತ್ತು ಗಣಿತದ ಅರಿವಿನ ಸಾಮರ್ಥ್ಯವನ್ನು ವಿದ್ಯಾರ್ಥಿ ಪಡೆದುಕೊಳ್ಳುವ ಅವಕಾಶ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತರಾಗಿದ್ದು ಅವರ ಪ್ರತಿಭೆಯ ಪ್ರಕಾಶನಕ್ಕೆ ಅವಕಾಶ ಲಭ್ಯವಾಗಬೇಕು. ಅಕ್ಕರೆಯಿಂದ ಕಲಿಯುವ ವಾತಾವರಣ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ದೊರಕುತ್ತಿದೆ” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ಅಧ್ಯಕ್ಷರಾದ ಸುಭೋದ್ ದಾಸ್ ಮಾತನಾಡಿ “ಭಾರತ ವಿವಿಧ ರಂಗಗಳಲ್ಲಿ ಪ್ರಗತಿ ಕಾಣುತ್ತಿದ್ದು, ಶೈಕ್ಷಣಿಕವಾಗಿ ಬಲಿಷ್ಠವಾಗಬೇಕಾಗಿದೆ. ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಲಭ್ಯವಾಗುತ್ತಿದೆ” ಎಂದರು.
ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಸದಸ್ಯ ತೇಜಪಾಲ್ ಪುತ್ರನ್, ಶ್ರೀನಿವಾಸ ರಾವ್, ಬಿ.ಆರ್.ಪಿ. ವೀಣಾ, ತಣ್ಣೀರುಬಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ, ಪಣಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗುಣರತ್ನಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರೇಮಲತಾ ಕಲಿಕಾ ಹಬ್ಬದ ಯೋಜನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ನೀತಾ ತಂತ್ರಿ ವಂದಿಸಿ, ಸುಕೇಶಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಕಲಿಕಾ ಸ್ಪರ್ಧೆಗಳು ನಡೆದವು. ಕ್ಲಸ್ಟರ್ ಮಟ್ಟದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕಿಯರು ಕಲಿಕಾ ಉತ್ಸವದಲ್ಲಿ ಭಾಗವಹಿಸಿದರು. ಕಥೆ ಹೇಳುವ ಸ್ಪರ್ಧೆ, ಪಾಠವನ್ನು ಓದುವ ಸ್ಪರ್ಧೆ, ಮೋಜಿನ ಗಣಿತ ಸ್ಪರ್ಧೆ, ವಿದ್ಯಾರ್ಥಿ ಹಾಗೂ ಪೋಷಕರು ಜೊತೆಗೆ ಸೇರಿ ಕಥೆ ಕಟ್ಟುವ ಸ್ಪರ್ಧೆ, ಚಿತ್ರ ರಚನೆ ಸ್ಪರ್ಧೆಗಳು ನಡೆದವು.
