ನೃತ್ಯ ಕಲಾವಿದ/ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕಲಾವಿದ/ಕಲಾವಿದೆಯರು ನಮ್ಮ ನಡುವೆ ಹಲವರಿದ್ದಾರೆ.
ಮುಖ್ಯವಾಗಿ ನನ್ನ ತವರೂರು ಅವಿಭಜಿತ ಕರಾವಳಿ ಕರ್ನಾಟಕ ನೃತ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಹಲವಾರು ವಿಭಿನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದೆ. ಮಹಾಗುರುಗಳಾದ ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರೀ ಉಳ್ಳಾಲ ಮೋಹನ ಕುಮಾರ್ ಇವರು ಭರತನಾಟ್ಯ ಕಲೆಯನ್ನು ಕರಾವಳಿಯಲ್ಲಿ ಹಲವರಿಗೆ ಧಾರೆ ಎರೆದ ಮಹಾನುಭಾವರು. ಅವರಂತೆಯೇ ಉಡುಪಿಯಲ್ಲಿ ಗುರು ಶ್ರೀ ರಾಧಾಕೃಷ್ಣ ತಂತ್ರಿ, ಪುತ್ತೂರಿನಲ್ಲಿ ಗುರು ಕುಧ್ಕಾಡಿ ಶ್ರೀ ವಿಶ್ವನಾಥ ರೈಗಳು ಹೀಗೆ ಹಲವಾರು ಗುರುಗಳಿದ್ದಾರೆ. ಅವರ ಗರಡಿಯಲ್ಲಿ ಪಳಗಿ, ನೃತ್ಯ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಅನೇಕ ಕಲಾ ಪ್ರತಿಭೆಗಳು ನೃತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ, ಪೀಳಿಗೆಯಿಂದ ಪೀಳಿಗೆಗೆ ಈ ದೈವಿಕ ಕಲೆಯನ್ನು ನಿರಂತರವಾಗಿ ಕೊಂಡೊಯ್ಯುವ ಕಾರ್ಯವನ್ನು ಮಾಡುವಲ್ಲಿ ಸಫಲವಾಗಿವೆ. ಇಂತಹ ಗುರುಗಳ ಸಾಲಿನಲ್ಲಿ ಬರುವ ಹೆಸರೇ ಉಡುಪಿಯ ಗುರು ಪಾವನ ಭಟ್.
ಇವರು 2000ದಲ್ಲಿ ಉಡುಪಿಯ ಮಾರ್ಪಳ್ಳಿಯಲ್ಲಿ ಶ್ರೀ ಶಾರದಾ ನೃತ್ಯಾಲಯ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಪುಟ್ಟ ಸಸಿಯಾಗಿದ್ದ ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು, ಅನೇಕ ಕಲಾಸಕ್ತರಿಗೆ, ಕಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ. ಆಗಸ್ಟ್ ತಿಂಗಳಲ್ಲಿ 25 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ, ದಿನಾಂಕ 06 ಡಿಸೆಂಬರ್ 2025ರಂದು 26ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಈ ಸಂಸ್ಥೆ ‘ನೃತ್ಯೊಲ್ಲಾಸ’ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಉಡುಪಿಯ ಐವೈಸಿ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಹಮ್ಮಿಕೊಂಡಿತ್ತು. 25 ವರುಷಗಳ ಈ ರಜತ ಸಂಭ್ರಮದ ಸುದೀರ್ಘ ಅವಧಿಯಲ್ಲಿ ಅನೇಕ ನೃತ್ಯ ಕಲಾವಿದ/ಕಲಾವಿದೆಯರನ್ನು ರೂಪಿಸಿದ ಕೀರ್ತಿ ‘ಶಾರದಾ ನೃತ್ಯಾಲಯದ್ದು. 25ನೆಯ ವರ್ಷ ಪೂರೈಸಿದ ಈ ಸಂಭ್ರಮಾಚರಣೆಯಲ್ಲಿ ಹೆಚ್ಚಿನ ಹಳೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಕಳೆಕಟ್ಟಲು ಸಾಧ್ಯವಾಯಿತು.

‘ನೃತ್ಯೋಲ್ಲಾಸ’ವು ಸಾಂಪ್ರದಾಯಿಕ ಮಾರ್ಗ ನೃತ್ಯಬಂಧವಾದ ಪುಷ್ಪಾಂಜಲಿಯಿಂದ ಪ್ರಾರಂಭವಾಗಿ ಗಣೇಶ ಸ್ತುತಿಯನ್ನು ನರ್ತಿಸಲಾಯಿತು. ಈ ನೃತ್ಯಬಂಧವು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ಪ್ರದರ್ಶಿತವಾಗಿದ್ದು, ಅಚ್ಚುಕಟ್ಟಾದ ನೃತ್ಯ ಸಂಯೋಜನೆ, ವಿಭಿನ್ನ ಅಡವುಗಳ ಜೋಡಣೆ ಮತ್ತು ನೃತ್ಯ ಪ್ರದರ್ಶಕರ ನಡುವಿನ ಹೊಂದಾಣಿಕೆಯಿಂದ ಕಲಾರಸಿಕರನ್ನು ತಲುಪಿತು. ಇದರ ರಚನೆ ನನ್ನದಾಗಿದ್ದು ವಲಚಿ ರಾಗ ಮತ್ತು ಆದಿ ತಾಳದಲ್ಲಿ ರಚಿತವಾಗಿದೆ. ಗಣೇಶ ಸ್ತುತಿಯ ರಚನೆ ಶ್ರೀ ನಾರಾಯಣ ತೀರ್ಥರದು.
ಎರಡನೇ ನೃತ್ಯ ಬಂಧವೇ ಜತಿಸ್ವರ. ಕಲ್ಯಾಣಿ ರಾಗ ಮತ್ತು ರೂಪಕ ತಾಳದಲ್ಲಿ ಸಂಯೋಜಿಸಲ್ಪಟ್ಟ ಈ ನೃತ್ಯ ಜೂನಿಯರ್ ಮಟ್ಟದ ವಿದ್ಯಾರ್ಥಿಗಳಿಗೆ ಸಂಯೋಜಿಸಲಾಗಿತ್ತು. ಇದರ ವಿಶೇಷವೆಂದರೆ ಗುರು ಪಾವನ ಭಟ್ ಅವರ ಸೊಲ್ಲುಕಟ್ಟುಗಳ ಉಚ್ಛಾರ. ಒಂದೇ ಜತಿ ಜತಿಸ್ವರದಲ್ಲಿ ಇರುವುದಾದರೂ ಅದರ ಉಚ್ಚಾರ ಮತ್ತು ನಟ್ಟುವಾಂಗ ನಿಭಾಯಿಸಿದ ರೀತಿ ಉತ್ತಮವಾಗಿತ್ತು. ಇದರಲ್ಲಿ ನೃತ್ಯ ಸಂಯೋಜನೆಯ ವಿನ್ಯಾಸ ಗಮನ ಸೆಳೆಯಿತು. ಮಕ್ಕಳಿಗೆ ವೇದಿಕೆಯ ಬಗೆಗಿನ ಭಯ ದೂರವಾಗಿ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ನರ್ತಿಸಿದ್ದು, ಗುರುಗಳ ವೃತ್ತಿ ಜೀವನದ ಅನುಭವವನ್ನು ಸಾರುವಂತಿತ್ತು ಎಂದರೆ ಅತಿಶಯೋಕ್ತಿಯಲ್ಲ.

ವಾರ್ಷಿಕ ಉತ್ಸವ ಎಂದ ಮೇಲೆ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅದೊಂದು ಉತ್ತಮ ವೇದಿಕೆ. ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ ಎಲ್ಲರಿಂದಲೂ ಶಹಭಾಸ್ ಗಿರಿ ಗಿಟ್ಟಿಸಿಕೊಳ್ಳಲು ಒಂದೊಳ್ಳೆ ಅವಕಾಶ. ಇದನ್ನು ಪುಟ್ಟ ವಿದ್ಯಾರ್ಥಿ ಕಲಾವಿದೆಯರು ಜಾಣ್ಮೆಯಿಂದ ಬಳಸಿಕೊಂಡರು. ಮುಂದೆ ಪುಟಾಣಿಗಳ ನರ್ತನ ನೋಟ್ಟುಸ್ವರದ ಸಂಯೋಜನೆಯೊಂದಿಗೆ ಸಾಗಿತು. ಶ್ರೀ ಮುತ್ತುಸ್ವಾಮಿ ದೀಕ್ಷಿತರಿಂದ ರಚಿತವಾದ ಶಕ್ತಿ ಸಹಿತ ಗಣಪತಿಂ, ಸಾಮಗಾನ ಪ್ರಿಯೆ ಮತ್ತು ವರಶಿವ ಬಾಲಂ ಎಂಬ ಮೂರು ಪ್ರಖ್ಯಾತ ಸಂಯೋಜನೆಗಳಿಗೆ ಪುಟಾಣಿಗಳಿಂದ ನೃತ್ಯ ಉತ್ತಮವಾಗಿತ್ತು.
ಮುಂದೆ ಅಷ್ಟಕ. ರಾಗಮಾಲಿಕೆ ಮತ್ತು ಆದಿ ತಾಳದಲ್ಲಿ ರಚಿತವಾದ ಅಷ್ಟಕವು ಧನ-ಧಾನ್ಯ ವಾರದಾತೆ ಶ್ರೀ ಲಕ್ಷ್ಮಿಯ ಬಗೆಗೆ ಇತ್ತು. ಅತ್ಯದ್ಬುತವಾಗಿ ಕಲಾವಿದೆಯರು ಜೀವತುಂಬಿ ನರ್ತಿಸಿದರು. ಮುಂದಕ್ಕೆ ಪುಟ್ಟ ಮಕ್ಕಳಿಂದ ಸ್ವರಜತಿ. ರಾಗ ಬಿಲಹರಿಯಲ್ಲಿ ಆದಿ ತಾಳದೊಂದಿಗೆ ರಚಿತವಾದ ಈ ರಚನೆಯನ್ನು ತಿಳಿಯದವರಿಲ್ಲ. ಉತ್ತಮ ನೃತ್ಯ ಸಂಯೋಜನೆ ಇದರ ಪ್ರಮುಖ ಅಂಶ.

ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ನೃತ್ಯದ ಹೊಸ ಆವಿಷ್ಕಾರ ರಗಳೆ. ಮಾರ್ಗ ಪದ್ಧತಿಯಲ್ಲಿ ಇಲ್ಲದಿದ್ದರೂ, ನೃತ್ಯದೊಳಗೆ ರಗಳೆಯ ಪ್ರದರ್ಶನ ಮತ್ತು ವಿಭಿನ್ನ ಕಲ್ಪನೆಗಳ ಮೂಲಕ ಅದರ ಪ್ರದರ್ಶನ ನಿಜಕ್ಕೂ ಕಲಾ ರಸಿಕರ ಮನ ರಂಜಿಸಿತು. ಇಂದು ನೃತ್ಯ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳು, ಅನ್ವೇಷಣೆಗಳು ನಡೆಯುತ್ತಿವೆ. ವಿಭಿನ್ನ ಚಿಂತನೆಗೆ ಕಾರಣವಾಯಿತು ರಗಳೆಯ ಸಂಯೋಜನೆ. ಇದನ್ನು ನರ್ತಿಸಿದರು ಪಾವನ ಭಟ್ ಇವರ ಹಿರಿಯ ವಿದ್ಯಾರ್ಥಿನಿಯ ವಿದ್ಯಾರ್ಥಿಗಳು. ನೃತ್ಯ ದೈವಿಕ ಕಲೆ ಮತ್ತು ಇಲ್ಲಿ ಗುರು ಸ್ಥಾನಕ್ಕೆ ಹೆಚ್ಚಿನ ಮೌಲ್ಯ ನೀಡಲಾಗುತ್ತದೆ. ಗುರು ಪಾವನ ಭಟ್ ಅವರು ತಮ್ಮ ಗುರುಗಳಾಗಿರುವ, ಮೈಸೂರಿನ ಹಿರಿಯ ನೃತ್ಯಗುರುಗಳು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ನೃತ್ಯದ ಜೀವಂತ ದಂತಕಥೆ ಗುರು ಡಾ. ವಸುಂದರಾ ದೊರೆಸ್ವಾಮಿ ಇವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನಾಗಿ ಕರೆಸಿದ್ದರು. ಹಾಗೆಯೇ ಅವರ ಹಿರಿಯ ವಿದ್ಯಾರ್ಥಿನಿ ತಮ್ಮ ವಿದ್ಯಾರ್ಥಿಗಳನ್ನು ನೃತ್ಯಪ್ರದರ್ಶನಕ್ಕೆ ಕರಕೊಂಡು ಬಂದಿದ್ದರು. ನೃತ್ಯವು ಗುರು ಪರಂಪರೆಯ ಮೂಲ ಆಶಯಗಳನ್ನು ಯಾವುದೇ ಅಡಚಣೆಗಳಿಲ್ಲದೇ, ಲೋಕವೇ ಬೆರಗಾಗುವ ರೀತಿಯಲ್ಲಿ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದೆ ಎನ್ನುವುದಕ್ಕೆ ಇದುವೇ ಉದಾಹರಣೆ.
ರಗಳೆಯ ನಂತರದಲ್ಲಿ ಹರಿಯೇ ಗತಿ ಎನ್ನುವ ದೇವರನಾಮದ ಪ್ರದರ್ಶನ. ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರ ರಚನೆ. ಭಕ್ತಿಯ ಪರಾಕಾಷ್ಟೆಯನ್ನು ತಲುಪುವ ಮೂಲಕ, ಮುಕ್ತಿಯ ಮಾರ್ಗ ಯಾವುದೆಂದು ಮನ ಮುಟ್ಟುವ ರೀತಿಯಲ್ಲಿ ಕಲಾವಿದೆಯರು ಅಭಿನಯಿಸಿದರು. ಕಲಾವಿದೆಯರ ಕಣ್ಣಿನಲ್ಲಿ ಕಾಣುತ್ತಿದ್ದ ಭಕ್ತಿ ಭಾವವು ಗುರುಗಳ ಪಕ್ವತೆಯ ತಯಾರಿ, ಶಿಸ್ತಿನ ಪಾಠವನ್ನು ಮಾಡಿತು. ಕೊನೆಯಲ್ಲಿ ತಿಲ್ಲಾನ ನಳಿನಕಾಂತಿ ರಾಗ, ರೂಪಕ ತಾಳದಲ್ಲಿ ನರ್ತಿಸಲಾಯಿತು. ಇದು ನನ್ನದೇ ರಚನೆ. ಇಷ್ಟವಾದ ಅಂಶಗಳೆಂದರೆ ನಿಖರವಾದ ಲೆಕ್ಕಾಚಾರ ಮತ್ತು ಪರಿಪಕ್ವ ಅಡವುಗಳ ಜೋಡಣೆ. ಇದರ ಪಂಚ ಪ್ರಸ್ತಾರದ ವಿನ್ಯಾಸವನ್ನು, ಕಲಾ ಪ್ರಪಂಚದಲ್ಲಿ ಬೆಳೆಯುತ್ತಿರುವ ಕಲಾವಿದ ತೇಜಸ್ವಿಯವರು ಮಾಡಿದ್ದರು.

ಕಾರ್ಯಕ್ರಮದ ಪ್ರಮುಖ ಧನಾತ್ಮಕ ಅಂಶಗಳಲ್ಲಿ ಹಿಮ್ಮೇಳದ ಗಟ್ಟಿತನವೂ ಸೇರಿತ್ತು. ನಟ್ಟುವಾಂಗವನ್ನು ಗುರು ಪಾವನ ಭಟ್ ಇವರು ನಿಭಾಯಿಸಿದರು. ಹಾಡುಗಾರಿಕೆಯಲ್ಲಿ ಶ್ರೀ ವಿನೀತ್ ಪುರವಂಕರ ಇವರು ತಮ್ಮ ಕಂಚಿನ ಕಂಠದಿಂದ ಮಿಂಚಿದರು. ಮೃದಂಗದಲ್ಲಿ ಉಡುಪಿಯ ಹಿರಿಯ ಕಲಾವಿದರಾದ ಶ್ರೀ ಬಾಲಚಂದ್ರ ಭಾಗವತ ಇವರು ಲಯತ್ವದಲ್ಲಿ ಕೈಚಳಕ ತೋರಿದರು. ಕಿವಿಗೆ ಇಂಪಿನ ನಾದ ಉಣಬಡಿಸಿದ ಉಡುಪಿಯ ಇನ್ನೋರ್ವ ಕಲಾವಿದರು ಶ್ರೀ ಮುರಳೀಧರ ಕೆ. ಮತ್ತು ಪಿಟೀಲಿನಲ್ಲಿ ಹಿರಿಯ ಕಲಾವಿದರಾದ ಶ್ರೀಮತಿ ಶರ್ಮಿಳಾ ರಾವ್ ಇವರು ಸಹಕರಿಸಿದರು. ಶ್ರೀಮತಿ ಶರ್ಮಿಳಾ ರಾವ್ ಇವರು ಅಷ್ಟ ಲಕ್ಷ್ಮೀ ಮತ್ತು ದೇವರನಾಮದ ಸಂಗೀತವನ್ನು ಸಂಯೋಜಿಸಿದ್ದರು.
ಒಟ್ಟಿನಲ್ಲಿ ನೃತ್ಯೋಲ್ಲಾಸ ರಜತ ಮಹೋತ್ಸವ ಸಂಭ್ರಮ ಕಲಾ ರಸಿಕರನ್ನು ಆಕರ್ಷಿಸಿತು. ನೃತ್ಯವು ಕಲಾವಿದ/ಕಲಾವಿದೆಯ ಪೂರ್ಣ ಪ್ರಯತ್ನದಿಂದ ನಿರಂತರತೆಯನ್ನು ಸಾಧಿಸುವ ಮೂಲಕ, ನೃತ್ಯದ ಶ್ರೀಮಂತತೆಯನ್ನು ಉಳಿಸಿ, ಕಲಾರಸಿಕರ ಮನವನ್ನು ಶಾಶ್ವತವಾಗಿ ಮುಟ್ಟಬಲ್ಲದು ಎಂಬುದನ್ನು ಸಾಬೀತುಪಡಿಸಿತು.


ನೃತ್ಯ ವಿಮರ್ಶಕರು : ವಿದ್ವಾನ್ ಮಂಜುನಾಥ್ ಎನ್. ಪುತ್ತೂರು
