ಉಡುಪಿ : ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 01 ಜನವರಿ 2026ರಂದು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ “ಶಿಲ್ಪಿ ಜಕಣಾಚಾರಿಯ ಶಿಲ್ಪಕಲಾ ಕುಶಲತೆ ಎಲ್ಲೆಡೆ ಪಸರಿಸಿದ್ದು, ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿರುವುದು ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಪೌರಾಣಿಕ ಶಿಲ್ಪಿಯಾದ ಜಕಣಾಚಾರಿ, ಬೇಲೂರು ಮತ್ತು ಹಳೆಬೀಡಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಭಾರತೀಯ ಕಲೆಯ ಸುವರ್ಣ ಯುಗಕ್ಕೆ ಕೊಡುಗೆ ನೀಡಿದ್ದಾರೆ. ಅವರು ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ನಶಿಸಿ ಹೋಗುತ್ತಿರುವ ಕಲೆಗಳನ್ನು ಪುನರುಜ್ಜಿವನಗೊಳಿಸುವ ನಿಟ್ಟಿನಲ್ಲಿ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ. ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, “ಅಮರಶಿಲ್ಪ ಜಕಣಾಚಾರಿ ನಾಡಿನ ಶಿಲ್ಪಕಲೆಗೆ ತಮ್ಮದೇ ಆದ ಕೊಡುಗೆ ನೀಡುವುದರೊಂದಿಗೆ ಶಿಲ್ಪಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ” ಎಂದರು. ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಉಪನ್ಯಾಸ ನೀಡಿ, “ಭಾರತೀಯ ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ತನ್ನದೇ ಆದ ವೈಶಿಷ್ಯವಿದೆ. ಶಿಲ್ಪಿಗಳು ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವವರು. ನಾಡಿನ ಪರಂಪರೆ ಹಾಗೂ ಸಂಸ್ಕೃತಿ, ವಿಜೃಂಭಿಸುವ ಗುಡಿ-ಗೋಪುರಗಳನ್ನು ನಿರ್ಮಿಸುವುದರೊಂದಿಗೆ ದೈವಿಕ ಭಾವದಲ್ಲಿ ತನ್ಮಯರಾಗಿದ್ದಾರೆ. ತಮ್ಮ ಅಂತಃಕರಣಗಳಲ್ಲಿ ರೂಪುಗೊಂಡ ದೇವಾನುದೇವತೆಗಳ ರೂಪಗಳನ್ನು ಯಥಾವತ್ತಾಗಿ ಶಿಲ್ಪ, ಪ್ರತಿಮೆ, ವಿಗ್ರಹ, ಪುತ್ಥಳಿ ಮೂರ್ತಿಗಳನ್ನಾಗಿ ಕೆತ್ತಲ್ಪಟ್ಟಿದ್ದಾರೆ. ವಿಶ್ವಕರ್ಮ ಪರಂಪರೆಯು ಪ್ರತಿಭಾ ಸಂಪನ್ನರು, ಸೃಜನಶೀಲರು. ಕ್ರಿಯಾಶೀಲರು ಹಾಗೂ ಜ್ಞಾನವಿಜ್ಞಾನಿಗಳ ಪರಂಪರೆ” ಎಂದರು.

ಇದೇ ಸಂದರ್ಭದಲ್ಲಿ ಶಿಲ್ಪಿ ಕಾರ್ಕಳದ ಕೆ. ಸತೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ದ.ಕ ಮತ್ತು ಉಡುಪಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ, ವಿಶ್ವಕರ್ಮ ಸಮುದಾಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಿಶ್ರಾಂತ ತಹಶೀಲ್ದಾರ್ ಮುರಳೀಧರ ಆಚಾರ್ಯ ನಿರೂಪಿಸಿ, ವಂದಿಸಿದರು.
