ಅಂದು ಮುದವಾದ ಬೆಳಗು ಅರಳುತ್ತಿದ್ದ ಸಮಯ. ರವೀಂದ್ರ ಕಲಾಕ್ಷೇತ್ರದ ವೇದಿಕೆಯ ಹೂದೋಟದಲ್ಲಿ ಹಿತವಾಗಿ ಉಲಿಯುತ್ತಿದ್ದ ಮುದ್ದುಹಕ್ಕಿಗಳ ಕಲರವ. ಬಣ್ಣ ಬಣ್ಣದ ಸಿಂಗರದಲ್ಲಿ ಮಿಂದೆದ್ದ ಪುಟಾಣಿಗಳ ಹೆಜ್ಜೆ-ಗೆಜ್ಜೆಯ ನಲಿವಿನ ಸಂಭ್ರಮ. ತಾವು ಕಲಿತ ನಾಟ್ಯವನ್ನು ಕಲಾರಸಿಕರ ಸಮ್ಮುಖ ಪ್ರದರ್ಶಿಸುವ ಅಪರಿಮಿತ ಉಮೇದು- ಉತ್ಸಾಹ ಮಕ್ಕಳ ಮೊಗಗಳಲ್ಲಿ ಪುಟಿಯುತ್ತಿತ್ತು. ಸಂದರ್ಭ- ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ‘ಹೆಜ್ಜೆ-ಗೆಜ್ಜೆ- ಮಧುರ ನಾದ ಸಂಭ್ರಮ’ದ ನೃತ್ಯಹಬ್ಬ. ನಾಡಿನ ಖ್ಯಾತ ನೃತ್ಯಜ್ಞೆ ಹಿರಿಯ ನಾಟ್ಯಗುರು, ಸುಮನೋಹರ ಸೃಜನಶೀಲ ನೃತ್ಯ ಸಂಯೋಜನೆಗೆ ಹೆಸರಾದ ವಿದುಷಿ ಗೀತಾ ಶ್ರೀನಾಥ್ ಇವರ ಬದ್ಧತೆಯ ನೃತ್ಯ ಗರಡಿಯಲ್ಲಿ ರೂಹುಗೊಂಡ ಅನೇಕಾನೇಕ ಶಿಷ್ಯರ ಸಮೂಹ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಜ್ಜಾಗಿ ಅಂದು ವೇದಿಕೆಯ ಮೇಲೆ ನಿಂತಿದ್ದರು.
‘ಪುಷ್ಪಾಂಜಲಿ’ಯೊಂದಿಗೆ ಶುಭಾರಂಭಗೊಂಡ ಪ್ರಸ್ತುತಿಯ ಮನೋಹರತೆ ಕಡೆಯ ಕೃತಿಯವರೆಗೂ ನಿರಂತರವಾಗಿ ಒಂದೇ ಚೈತನ್ಯಪೂರ್ಣತೆ ಕಾಪಾಡಿಕೊಂಡು ಬಂದದ್ದು, ಗುರು ಗೀತಾ ಶ್ರೀನಾಥ್ ಇವರ ನೃತ್ಯ ಶಿಕ್ಷಣದ ವೈಶಿಷ್ಟ್ಯ. ಅಲರಿಪು ಭರತನಾಟ್ಯದ ಪ್ರಥಮ ಅಂಗ. ಕೇವಲ ನೃತ್ತಭಾಗವಾದರೂ ಸುಂದರ ಅಂಗಿಕಾಭಿನಯದಿಂದ ಮನಸೆಳೆಯಿತು. ಇದಕ್ಕೆ ಉದಯೋನ್ಮುಖ ಕಲಾವಿದೆಯರಾದ ಕುಮಾರಿ ರಿತನ್ಯ ಮತ್ತು ಕುಮಾರಿ ಅಮೃತಾ ನಟುವಾಂಗ ನಿರ್ವಹಿಸಿದ್ದು ಸ್ವಾಗತಾರ್ಹ. ಗುರುಗಳು ಮಕ್ಕಳಿಗೆ ನೃತ್ಯ ಮಾಡುವುದನ್ನು ಹೇಳಿಕೊಡುವ ಜೊತೆಗೆ ಸಂಯೋಜನೆ ಮತ್ತು ನಟುವಾಂಗ ಮುಂತಾದ ಪ್ರಸ್ತುತಿಯ ಎಲ್ಲ ವಿಭಾಗಗಳಲ್ಲೂ ಸಜ್ಜುಗೊಳಿಸುವುದು ಗೀತಾ ಅವರ ವಿಶೇಷತೆ.


ಮುಂದೆ ‘ನಟನ ಮನೋಹರ ನಾಗಾಭರಣ’ ಎಂಬ ಶಿವಪದವು, ಶಿವನ ವಿವಿಧ ಮಹಿಮೆಗಳನ್ನು, ಪಂಚಭೂತದ ತತ್ವವನ್ನು ಸುಂದರವಾಗಿ ಚಿತ್ರಿಸಲಾಯಿತು. ಪ್ರಸ್ತುತಿಯಲ್ಲಿ, ಸಪ್ತಸ್ವರಗಳಿಗೆ ಸಂಬಂಧಿಸಿದಂತೆ ಶಿವನ ಆಭರಣಗಳನ್ನು ಮನಮೋಹಕವಾಗಿ ಅನಾವರಣಗೊಳಿಸಿ, ಹಲವಾರು ಸುಂದರ ಸಂಚಾರಿಗಳೊಡನೆ ನಿರೂಪಿಸಲಾಯಿತು. ಅನಂತರ ಕಲಾವಿದೆಯರ ರಮ್ಯನರ್ತನದಲ್ಲಿ ‘ಕಂಜದಳಾಯತಾಕ್ಷಿ ಕಾಮಾಕ್ಷಿ’ಯನ್ನು ದೈವೀಕ ನೆಲೆಯಲ್ಲಿ ಅರ್ಚಿಸಲಾಯಿತು. ಅನಂತರ- ‘ಜಗನ್ಮೋಹನನೆ ಕೃಷ್ಣ’ನ ಲೀಲಾವಿನೋದಗಳನ್ನು ಅನೇಕ ವೈವಿಧ್ಯಪೂರ್ಣ ಸಂಚಾರಿ ಕಥಾನಕಗಳೊಡನೆ ಕಲಾವಿದೆಯರು ಕಣ್ಮನ ಸೆಳೆಯುವಂತೆ ದೃಶ್ಯವತ್ತಾದ ಚಿತ್ರಣಗಳಲ್ಲಿ ಹಿಡಿದಿಟ್ಟರು. ಕಲಾವಿದೆಯರ ಪರಿಶ್ರಮದ ಕಲಿಕೆಗೆ ಪ್ರಸ್ತುತಿ ಕೈಗನ್ನಡಿಯಾಯಿತು.



ಮುಂದೆ- ಅಯ್ಯಪ್ಪ ಸ್ವಾಮಿಯ ಜನನ- ಜೀವನ ಕುರಿತ ಶಬರಿಮಲೆಯ ಮಹಿಮಾನ್ವಿತ ನಿಜಕಥೆಯನ್ನು ಕುಮಾರಿ ಲಾಸ್ಯ ಶ್ರೀನಾಥ್ ಏಕವ್ಯಕ್ತಿ ನೃತ್ಯ ಪ್ರದರ್ಶನದಲ್ಲಿ, ತನ್ನ ಸುಂದರಾಭಿನಯದ ನೃತ್ಯ ಸಲಿಲದಲ್ಲಿ, ಸುಲಲಿತವಾಗಿ ಆಕರ್ಷಕ ಭಂಗಿಗಳೊಡನೆ ಅರ್ಪಿಸಿದಳು. ಮುಂದೆ- ‘ಅಂಬಾ ಶಾಂಭವಿ ಚಂದ್ರಮೌಳಿ ’ – ರಾಜರಾಜೇಶ್ವರಿ ಅಷ್ಟಕವು ದೇವಿಯ ಆರಾಧನೆಯ ವಿವಿಧ ಮಗ್ಗುಲುಗಳನ್ನು ಬಹು ವೈಭವಪೂರಿತವಾಗಿ ಅಷ್ಟೇ ಭಕ್ತಿಪ್ರಧಾನವಾಗಿ ಸಾಕ್ಷಾತ್ಕರಿಸಲಾಯಿತು. ‘ಹರಿವರಾಸನಂ’ – ಅಯ್ಯಪ್ಪನ ಕುರಿತ ಭಕ್ತಿಗೀತೆಯನ್ನು ಕಲಾವಿದೆಯರು ಬಹು ಭಕ್ತಿ ಭಾವ ತಾದಾತ್ಮ್ಯತೆಯಿಂದ ನಿರೂಪಿಸಿದ್ದು ವಿಶೇಷ ಪರಿಣಾಮ ಬೀರಿತು.


ಇನ್ನೂ ಒಂದು ಗಮನಾರ್ಹ ವಿಶೇಷವೆಂದರೆ, ಪ್ರತಿಯೊಂದು ಕೃತಿಯ ನರ್ತನದ ಅಂತ್ಯದಲ್ಲಿ ಪ್ರದರ್ಶಿತವಾಗುವ ಯೋಗಭಂಗಿಗಳ ಸಮೂಹ ನೃತ್ಯ ಭಂಗಿಗಳ ರಚನೆ ಅತ್ಯಂತ ಗುಣಾತ್ಮಕ ಅಂಶವಾಗಿ ಕಂಡು ಬಂತು. ಈ ಎಲ್ಲ ಕೃತಿಗಳ ಸಾಕಾರದ ಯಶಸ್ವಿಗೆ ಕಾರಣವಾಗಿದ್ದು ಗೀತಾ ಅವರ ಸೃಜನಶೀಲ ಸುಂದರ ನೃತ್ಯ ಸಂಯೋಜನೆಗಳು ಮತ್ತು ಉತ್ಕೃಷ್ಟ ನಾಟ್ಯಶಿಕ್ಷಣ ಎಂದರೆ ಅತಿಶಯೋಕ್ತಿಯಾಗಲಾರದು. ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ತಮ್ಮದೇ ಆದ ನಿಷ್ಠೆ- ಸಾಧನೆಗಳಿಂದ ಗೀತಾ ನೃತ್ಯಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡುತ್ತಿರುವುದು ಅತಿಶಯದ ಸಂಗತಿ.


ಅಂದಿನ ಸಂಭ್ರಮದ ಸಂದರ್ಭದಲ್ಲಿ- ನಾಟ್ಯ ಕುಸುಮಾಂಜಲಿ ನಾಟ್ಯಶಾಲೆಯ ಮಕ್ಕಳೊಡನೆ ಇನ್ನೂ ಅನೇಕ ನೃತ್ಯಶಾಲೆಯ ಮಕ್ಕಳು ಮನಮೋಹಕವಾಗಿ ಸಡಗರದಿಂದ ನರ್ತಿಸಿದ್ದು ಮೆಚ್ಚುಗೆ ಪಡೆಯಿತು.

ನೃತ್ಯ ವಿಮರ್ಶೆ | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
