ಅದೊಂದು ಸಂಭ್ರಮದ ನಲಿವಿನ ನೋಟ. ಕರ್ನಾಟಕ ಕಲಾಶ್ರೀ ಡಾ. ರಮಾ ನೇತೃತ್ವದ ‘ನಿರಂತರಂ’ನ ಯಾವ ಕಾರ್ಯಕ್ರಮವೇ ಇರಲಿ ಅಲ್ಲಿ ಸಡಗರ-ಲವಲವಿಕೆ ಇರಲೇಬೇಕು. ಅವರ ಕ್ರಿಯಾಶೀಲ- ಸ್ನೇಹಪೂರ್ಣ ವ್ಯಕ್ತಿತ್ವವೇ ಅಂಥದು. ಕಲಾವಿದರ ಬಲವಾದ ಸಂಘಟನೆ ರಮಾ ವೈಶಿಷ್ಟ್ಯ. ಅಪಾರ ಶಿಷ್ಯ ಬಾಂಧವ್ಯ, ಸ್ನೇಹಿತರ ಒಲುಮೆ- ಸಹಕಾರ- ಕಾರ್ಯಕ್ಷಮತೆ ಅವರು ಗಳಿಸಿದ ಆಸ್ತಿ. ಹಿರಿ-ಕಿರಿಯರೆನ್ನುವ ಭೇದವಿಲ್ಲದ ಪ್ರತಿಭಾ ಪೋಷಣೆ ಅವರ ಅನುಪಮ ಕಾರ್ಯಕ್ರಮಗಳ ಸದಾಶಯ.

ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸುಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ‘ನಿರಂತರಂ’ ಸಂಸ್ಥೆ, ಕಳೆದ 15 ವರುಷಗಳಿಂದ ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅವರಿಗೆ ‘ಸಂಭ್ರಮ’ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿರುವುದು ಅದರ ಅಸ್ಮಿತೆ. ಇದುವರೆಗೂ ಇಂಥ ನೂರಾರು ಸಾಧಕರು ಇಲ್ಲಿ ಸನ್ಮಾನಿತರಾಗಿ ಸಂಭ್ರಮಿತರಾಗಿರುವ ಸಂಗತಿ ಸರ್ವವಿದಿತ.
ಪ್ರತಿವರ್ಷ ಹೊಸವರ್ಷದ ಹೊಸ್ತಿಲಲ್ಲಿ ಈ ಸಂಭ್ರಮದ ಹೊನಲು ಹರಿಯುತ್ತದೆ. ಜನವರಿ ಮೊದಲ ವಾರದಲ್ಲಿ ದೇಶ-ವಿದೇಶದ ಉದಯೋನ್ಮುಖ ನೃತ್ಯ ಕಲಾವಿದರೊಡನೆ ಹಿರಿಯ ಸಂಗೀತ-ನೃತ್ಯ ಕಲಾವಿದರಿಗೂ ವೇದಿಕೆಯನ್ನು ಒದಗಿಸುವುದು ‘ನಿರಂತರಂ’ ಸಂಸ್ಥೆ ಪಾಲಿಸಿಕೊಂಡು ಬಂದಿರುವ ಪದ್ಧತಿ. ಅದರಂತೆ ಈ ವರ್ಷದ ಆರಂಭದ ಜನವರಿ ತಿಂಗಳ ಮೊದಲ ವಾರದಲ್ಲಿ ನಾಲ್ಕು ದಿನಗಳ ಕಾಲ ‘ಸಂಗೀತ ಸಂಭ್ರಮ’ -ಮಾಗೀಕಾಲದ ಚಳಿಯಲ್ಲಿ ಬೆಚ್ಚಗೆ ಮುದ ನೀಡಿದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಮೊದಲ ಮೂರು ದಿನಗಳು ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಹಾಗೂ ಕಡೆಯ ದಿನ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ಕಿಕ್ಕಿರಿದ ಕಲಾರಸಿಕರ ಸಮ್ಮುಖ ಯಶಸ್ವಿಯಾಗಿ ನಡೆಯಿತು.


ಶುಭಾರಂಭದಲ್ಲಿ ‘ಸಂಗೀತ ಸಂಭ್ರಮ’ದ ಶಿಷ್ಯರಿಂದ ಸುಶ್ರಾವ್ಯ ಗಾನಮಾಧುರ್ಯ ಕಿವಿಗಳನ್ನು ತುಂಬಿದರೆ, ಅಮೇರಿಕೆಯಿಂದ ಬಂದಿದ್ದ ಉದಯೋನ್ಮಖ ಕಲಾವಿದೆ ಕುಮಾರಿ ಶ್ರೇಯಾ ಶ್ರೀರಾಮ್ ತನ್ನ ಅಂಗಶುದ್ಧವಾದ ರಮ್ಯ ನರ್ತನದಿಂದ ಮನದುಂಬಿದಳು. ಅನಂತರ ಗಾಯಕರಾದ ದೀಪ್ತೀ ಶ್ರೀನಾಥ್, ಸಾಕ್ಷಿ ಜಗದೀಶ್ ಮತ್ತು ಹೆಚ್.ಸಿ. ಭಾರ್ಗವ್ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳನ್ನು ಕೆರೋಕೆ ಸಹಕಾರದಿಂದ ಸುಮಧುರವಾಗಿ ಹಾಡಿದರು. ಕಡೆಯಲ್ಲಿ ಮೈಸೂರಿನ ಹಿರಿಯ ನೃತ್ಯಗುರು ಕೃಪಾ ಫಡ್ಕೆ ಮತ್ತು ಅವರ ತಂಡ ನಡೆಸಿಕೊಟ್ಟ ‘ಗೀತೋಪದೇಶಧುಹೆ ನಮಃ’ ನೃತ್ಯರೂಪಕ ಹೃದಯಂಗಮವಾಗಿತ್ತು.

ದ್ವಿತೀಯ ದಿನ- ವಿ. ಹರಿಣಿ ಶ್ರೀಧರ್ ಗಾಯನ, ಸುಜಯ್ ಶಾನಭಾಗ್ ಏಕವ್ಯಕ್ತಿ ನೃತ್ಯ ಪ್ರದರ್ಶನ, ಕುಮಾರಿ ಶಿಲ್ಪಾ ಸೇತುರಾಮನ್ ಮತ್ತು ಶ್ರೀಮತಿ ಪ್ರೀತಿ ಪ್ರಸಾದ್ ಭರತನಾಟ್ಯ ಸುಂದರ ಪ್ರಸ್ತುತಿಗಳು ಆನಂದ ನೀಡಿದವು.
ತೃತೀಯ ದಿನ- ಬೆಳಗ್ಗೆಯಿಂದ ರಾತ್ರಿಯವರೆಗೂ ಭರಪೂರ ಮನರಂಜನೆಯ ಕಾರ್ಯಕ್ರಮಗಳು ಕಲಾರಸಿಕರಿಗೆ ಹಬ್ಬವೋ ಹಬ್ಬ. ವಿದುಷಿ ವಿಭಾ ರವೀಂದ್ರ, ವಿದುಷಿ ಪಲ್ಲವಿ ರಂಗಿನೀದಿ ಇವರಿಂದ ಕರ್ನಾಟಕ ಸಂಗೀತ ಧಾರೆ. ಸುಕನ್ಯ ರಾಘವ್ – ಸುಪ್ರಿಯ ಅಶ್ವಿನ್, ಶ್ರೀ ಗೌರಿ ನೃತ್ಯಾಲಯ, ಅಭ್ಯುದಯ ಧ್ಯಾನ್ ಭೂಷಣ್ – ಅಭಿಜ್ಞಾನ್ ವೇದಾಂತ್ ಭೂಷಣ್, ಶ್ರುತಿಲಯ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಅಮೇರಿಕೆಯ ಪವಿತ್ರ ದಂಟು ಹಾಗೂ ಡಾ. ರಕ್ಷಾ ಕಾರ್ತೀಕ್ ಕಣ್ಮನ ತುಂಬುವ ಭರತನಾಟ್ಯ ಪ್ರದರ್ಶನ ಪ್ರಸ್ತುತ ಪಡಿಸಿದರು.


ಚತುರ್ಥ ದಿನ- ಚೌಡಯ್ಯ ಸಭಾಭವನದಲ್ಲಿ ರಾಗರಂಜಿತ ಸುಮನೋಹರ ದಿವ್ಯ ಸಂಜೆಯ ರೋಮಾಂಚಕ ಕ್ಷಣಗಳು. ವೇದಿಕ್ ಪ್ರಾರ್ಥನೆಯೊಂದಿಗೆ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿಗಳ ಪವಿತ್ರ ಸಾನಿಧ್ಯದಲ್ಲಿ ಶುಭಾರಂಭಗೊಂಡಿತು. ವಿವಿಧ ಕ್ಷೇತ್ರಗಳ 15 ಮಂದಿ ಸಾಧಕರಿಗೆ ‘ಸಂಭ್ರಮ ಪುರಸ್ಕಾರ’ವನ್ನು ಅತ್ಯಂತ ಗೌರವಾದರಗಳೊಂದಿಗೆ ಸಲ್ಲಿಸಲಾಯಿತು. ಅನಂತರ ಅನಾವರಣಗೊಂಡ ವಿಸ್ಮಯಕಾರಕ ‘ಫ್ಯೂಶನ್ ಮ್ಯುಸಿಕ್’ ಗಂಧರ್ವ ಗಾಯನದ ರಸಲೋಕ ಕಲಾರಸಿಕರನ್ನು ಮೋಡಿ ಮಾಡಿತು. ನಾಡಿನ ಖ್ಯಾತ ಸಂಗೀತ ದಿಗ್ಗಜರ – ವಾದ್ಯ ಕಲಾವಿದರ ಪ್ರತಿಭಾ ನೈಪುಣ್ಯ ಅಲೆ ಅಲೆಯಾಗಿ ಕಿವಿಗಳನ್ನು ತುಂಬಿ ಅನಿರ್ವಚನೀಯ ಆನಂದ ನೀಡಿತು ಎಂದರೆ ಖಂಡಿತಾ ಅತಿಶಯೋಕ್ತಿಯಲ್ಲ. ಕೇಳುಗರನ್ನು ಆನಂದದ ಕಡಲಲ್ಲಿ ತೇಲಿಸಿತು.

ಆಕಾಶವಾಣಿಯ ‘ಎ’ ಗ್ರೇಡ್ ಸಂಗೀತ ಕಲಾವಿದೆ ಡಾ. ಪುಸ್ತಕಂ ರಮಾ ಇವರ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಹರಿದ ‘ಫ್ಯೂಶನ್’ ನವ ಗಾನಸುಧೆ ಸಭಾಸದನರನ್ನು ತನ್ಮಯಗೊಳಿಸಿತು. ಹಿರಿಯ ವೀಣಾವಾದಕಿ ಡಾ. ಸುಮಾ ಸುಧೀಂದ್ರ, ವಯೊಲಿನ್ ವಾದಕಿ ಡಾ. ಜ್ಯೋತ್ಸ್ನಾ ಶ್ರೀಕಾಂತ್, ವೇಣುವಾದಕ- ಸಂಯೋಜಕ ರಘುನಂದನ್ ರಾಮಕೃಷ್ಣ, ತಬಲಾ ನಿಪುಣರಾದ ವೇಣುಗೋಪಾಲ ರಾಜು ಮತ್ತು ಪ್ರದ್ಯುಮ್ನ ಸೊರಬ, ಡ್ರಮ್ಸ್- ಮಂಜುನಾಥ್ ಸತ್ಯಶೀಲ್, ಕೀಸ್- ಸಂಗೀತ್ ಥಾಮಸ್, ಗಾಯಕ ಹೆಚ್.ಸಿ. ಭಾರ್ಗವ್ ಮತ್ತು ಗಾಯಕಿ ಸಾಕ್ಷೀ ಜಗದೀಶ್ ಇವರೊಂದಿಗೆ ರಮಾ ಇವರ ಕಂಠ ಸೌರಭ ಹೃದಯಸ್ಪರ್ಶಿಯಾಗಿತ್ತು. ವಿವಿಧ ವಾದ್ಯಗಳ ಸಮಷ್ಟಿ ಗೋಷ್ಠಿಯ ಮಿಳಿತದಲ್ಲಿ ಗಾಯಕರು ಹಾಡಿದ ಕೀರ್ತನೆಗಳು, ದೇವರನಾಮಗಳು ಹಾಗೂ ಜನಪ್ರಿಯ ಸಿನಿಮಾ ಗೀತೆಗಳು ಮನದಲ್ಲಿ ಅವ್ಯಕ್ತ ಝೇಂಕಾರ ನಿನದಿಸಿ ಚಿರಸ್ಮರಣೀಯ ಸಂಗೀತಾನುಭವ ನೀಡಿತು.



ಬೆಂಗಳೂರಿನ ರಸಿಕಾಗ್ರಣಿಗಳಿಗೆ ಪ್ರತಿವರ್ಷ ಮರೆಯಲಾರದ ಸುಗ್ರಾಸ ಗಾನಾಮೃತ ಉಣಬಡಿಸುವ ‘ಸಂಗೀತ ಸಂಭ್ರಮ’ದ ನವೋಲ್ಲಾಸ ಕಾರ್ಯಕ್ರಮಕ್ಕಾಗಿ ಇನ್ನೊಂದು ವರ್ಷ ಕಾಯುವ ಕಾತುರತೆಯನ್ನು ಹುಟ್ಟುಹಾಕಿತು ಎಂಬುದು ಸರ್ವಾಭಿಮತ. ಇದಕ್ಕಾಗಿ ಹಿರಿಯ ಗಾಯಕಿ ಪುಸ್ತಕಂ ರಮಾ ಮತ್ತು ತಂಡದವರಿಗೆ ಹಾರ್ದಿಕ ಅಭಿನಂದನೆಗಳು.

ನೃತ್ಯ ವಿಮರ್ಶೆ | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
