ಬೆಂಗಳೂರಿನ ಸೇವಾಸದನದ ವೇದಿಕೆಯ ಮೇಲೆ ಉದಯೋನ್ಮುಖ ನೃತ್ಯಕಲಾವಿದೆ ಕೀರ್ತನಾ ಶಶಾಂಕ್ ತನ್ನ ಮೊದಲ ಹೆಜ್ಜೆಯ ಪ್ರಸ್ತುತಿಯನ್ನು ಆತ್ಮವಿಶ್ವಾಸದಿಂದ ಪ್ರಸ್ತುತಿಪಡಿಸಿ ಕಲಾರಸಿಕರ ಮೆಚ್ಚುಗೆ ಪಡೆದಳು. ಹೆಬ್ಬಾಳದಲ್ಲಿರುವ ‘ನಾಟ್ಯ ಕಲಾಕ್ಷೇತ್ರ’- ನೃತ್ಯಶಾಲೆಯ ಸಮರ್ಥ ಗುರು, ನಾಡಿನ ಪುರುಷ ನರ್ತಕರಲ್ಲಿ ಗಮನಾರ್ಹರಾದ ಪ್ರಶಾಂತ್ ಜಿ. ಶಾಸ್ತ್ರೀ ಇವರ ಮಾರ್ಗದರ್ಶನದಲ್ಲಿ ಕೀರ್ತನಾ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು. ‘ಮಾರ್ಗಂ’- ಸಂಪ್ರದಾಯದ ಕೃತಿಗಳನ್ನು ಕಲಾವಿದೆ ಹಸನ್ಮುಖದಿಂದ ಅಚ್ಚುಕಟ್ಟಾಗಿ ಪ್ರದರ್ಶಿಸಿದಳು. ಗುರು ಪರಂಪರೆಯಿಂದ ಬಂದ ಅಲರಿಪು- ಪುಷ್ಪಾಂಜಲಿ (ನಾಟರಾಗ- ಆದಿತಾಳ) ಮತ್ತು ಜತಿಸ್ವರ (ಸರಸ್ವತಿ- ರೂಪಕ ತಾಳ) ಕೃತಿಗಳನ್ನು ಸುಂದರ ನೃತ್ತಗಳಿಂದ ನಿರೂಪಿಸಿದಳು. ಮೊದಲಿನಿಂದ ಕಡೆಯ ಕೃತಿಯವರೆಗೆ ಕೀರ್ತನಾ, ಯಾವುದೇ ಗೊಂದಲವಿಲ್ಲದೆ ಸೌಮ ನೃತ್ತಗಳ ಆಂಗಿಕಾಭಿನಯದಿಂದ ನಿರಾಯಾಸವಾಗಿ ನರ್ತಿಸಿದಳು.


ಪ್ರಸ್ತುತಿಯ ಹೃದಯ ಭಾಗ, ಅಷ್ಟೇ ಹೃದ್ಯ ಭಾಗವಾದ ‘ವರ್ಣ’ವನ್ನು ಪ್ರಸ್ತುತಿಪಡಿಸಲು ನರ್ತಕರಾದವರಿಗೆ ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ಪರಿಣತಿ ಅವಶ್ಯ. ಇದು ಸಂಕೀರ್ಣ ಜತಿಗಳಿಂದ ಕೂಡಿದ ದೀರ್ಘಬಂಧವಾಗಿದ್ದು, ಕಲಾವಿದರಿಗೆ ತಾಳ- ಲಯದ ಮೇಲೆ ಹಿಡಿತ ಹಾಗೂ ನೆನಪಿನ ಶಕ್ತಿ ಇರುವುದು ಅತ್ಯಗತ್ಯ. ಕೀರ್ತನಾ ಅಂದು ನಿರ್ವಹಿಸಿದ ‘ವರ್ಣ’- ಹಿರಿಯ ನೃತ್ಯಗುರು ಡಾ. ಲಲಿತಾ ಶ್ರೀನಿವಾಸನ್ ರಚಿಸಿದ ಅಪರೂಪದ ‘ವರ್ಣ‘- (ರಾಗಮಾಲಿಕೆ- ಆದಿತಾಳ) ತುಂಬ ಹಳೆಯದಾಗಿದ್ದು, ನೂರಾರು ಕಲಾವಿದರು ಇದನ್ನು ಕಾಲಾಂತರದಿಂದ ಅಭಿನಯಿಸುತ್ತ ಬಂದಿರುವುದು ಇದರ ವೈಶಿಷ್ಟ್ಯ. ‘ಸುಂದರ ಶ್ರೀಕೃಷ್ಣ’- ಭಕ್ತಿಪ್ರಧಾನವಾದ ಕೃತಿಯನ್ನು ಕೀರ್ತನಾ ತನ್ನ ಸಾತ್ವಿಕಾಭಿನಯ- ಸರಳ ನೃತ್ತಗಳಿಂದ ಸಾಕಾರಗೊಳಿಸಿದಳು. ನಡು ನಡುವೆ ಮೂಡಿಬಂದ ಗುರು ಪ್ರಶಾಂತ್ ಇವರ ಸುಸ್ಪಷ್ಟ ನಟುವಾಂಗದ ಝೇಂಕಾರಕ್ಕೆ ಕಲಾವಿದೆ ಹೆಜ್ಜೆಗೂಡಿಸಿದಳು. ಈ ಕೃತಿಯ ನೃತ್ಯ ಸಂಯೋಜನೆ- ಪ್ರಶಾಂತ್ ಶಾಸ್ತ್ರೀ ಅವರದಾಗಿತ್ತು.

ಶ್ರೀಕೃಷ್ಣ ಕಥೆಯ ದರ್ಶನವನ್ನು ಮಾಡಿಸುವ ಈ ಕೃತಿಯಲ್ಲಿ ಸೆರೆಮನೆಯಲ್ಲಿ ಶ್ರೀಕೃಷ್ಣನ ಜನನ ಪ್ರಸಂಗದಿಂದ ಹಿಡಿದು, ರಾಧಾ- ಮಾಧವರ ಲೀಲಾ ವಿನೋದ- ರುಕ್ಮಿಣಿಯ ಭಕ್ತಿ- ಪ್ರೇಮದ ರಾಸಾಧಿಕ್ಯ ಮತ್ತು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಸಾರಥಿಯಾದ ಕೃಷ್ಣ ಹಾಗೂ ಬಂಧು ಬಂದವರನ್ನು ಕೊಲ್ಲಲು ಹಿಂಜರಿದ ಅರ್ಜುನನ ನಡುವೆ ನಡೆದ ಸಂವಾದ ಮತ್ತು ಗೀತೋಪದೇಶ- ವಿಶ್ವರೂಪದ ಕಥಾನಕದವರೆಗೂ ವಿಸ್ತರಿಸಿದಳು.


ನಂತರ ಕೀರ್ತನಾ, ಸರಸ- ಸುಮ್ಮಾನದ ಭಾವಗಳಿಂದ ಕೂಡಿದ ‘ಬಂದ ನೋಡಿ’- ಪುರಂದರ ದಾಸರ ದೇವರನಾಮವನ್ನು ಲವಲವಿಕೆಯಿಂದ ನಿರೂಪಿಸಿದಳು. ಮುಂದೆ- ಶ್ರೀ ಶ್ಯಾಮಾ ಶಾಸ್ತ್ರಿಗಳು ರಚಿಸಿದ ಸಾವೇರಿ ರಾಗ- ರೂಪಕ ತಾಳದ ‘ದೇವೀ ಕೃತಿ’ಯನ್ನು ಕೊರಳಿಗೆ ಜೋಮಾಲೆ ಧರಿಸಿ, ಕಣ್ಮನ ತುಂಬಿದ ಆಕರ್ಷಕ ದೇವಿಯ ರೂಪದಲ್ಲಿ ಕಲಾವಿದೆ ಆನಂದ ನೀಡಿದಳು. ಕಲಾವಿದೆ ನಿಧಾನಗತಿಯಲ್ಲಿ ಹೆಜ್ಜೆಗಳನ್ನು ಹಾಕುತ್ತ ಸೌಮ್ಯಭಾವದಲ್ಲಿ ನರ್ತಿಸುತ್ತ ಮುಂದೆ- ದೇವಿಯ ರೂಕ್ಷ ಮತ್ತು ಪ್ರಸನ್ನ ಭಾವಗಳೆರಡನ್ನೂ ತೋರಿ ದೈವೀಕ ನೆಲೆಯಲ್ಲಿ ಬಿಂಬಿಸಿದಳು.


ಅಂತ್ಯದಲ್ಲಿ ಸಿಂಹೇಂದ್ರ ಮಧ್ಯಮ ರಾಗದ ಶ್ರೀ ಮಧುರೈ ಎನ್. ಕೃಷ್ಣನ್ ವಿರಚಿತ ‘ತಿಲ್ಲಾನ’ – ಲವಲವಿಕೆಯ ಹೆಜ್ಜೆ- ಗೆಜ್ಜೆಗಳ ಪಾದಭೇದಗಳಿಂದ ಸಾಗಿ, ಅಚ್ಚರಿ ಮೂಡಿಸಿದ ಕಲಾವಿದೆಯ ಮಂಡಿ ಅಡವಿನ ಸೌಂದರ್ಯ ಮುದಗೊಳಿಸಿದರೆ, ‘ರಾಮಚಂದ್ರಾಯ’ ಮಂಗಳದ ಸ್ತುತಿ ಸೊಗಸು- ನಲಿವು ನೀಡಿತು. ಕಲಾವಿದೆಯ ನೃತ್ಯ ಪ್ರಸ್ತುತಿಗೆ ಜೀವಾಳವಾದ ವಾದ್ಯಗೋಷ್ಠಿ ಕಲಾವಿದರ ಸಹಕಾರ ಅದ್ಭುತವಾಗಿತ್ತು. ಗಾಯನ- ವಿದ್ವಾನ್ ಓಂಕಾರ್ ಅಮರನಾಥ್, ಮೃದಂಗ- ವಿದ್ವಾನ್ ಆರ್. ಪುರುಷೋತ್ತಮ್, ವಯೊಲಿನ್- ವಿದ್ವಾನ್ ಸಿ. ಮಧುಸೂದನ್ ಮತ್ತು ನಿಖರ ನಟುವಾಂಗದಲ್ಲಿ ಗುರು ಪ್ರಶಾಂತ್ ಶಾಸ್ತ್ರೀಯವರ ಮುಮ್ಮೇಳದ ಪ್ರಭೆ ಕರ್ಣಾನಂದಕರವಾಗಿತ್ತು.



ನೃತ್ಯ ವಿಮರ್ಶಕರು ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
