ಪುತ್ತೂರು : ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ (ರಿ.) ಪುತ್ತೂರು ಇದರ ನೃತ್ಯಾಂತರಂಗ -97ನೇ ಕಾರ್ಯಕ್ರಮವು ದಿನಾಂಕ 21-04-2023 ಶುಕ್ರವಾರ ಶಶಿಶಂಕರ ಸಭಾಂಗಣ ಪುತ್ತೂರು ಇಲ್ಲಿ ಅದ್ಭುತವಾಗಿ ನೆರವೇರಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಪ್ರಾಂಶುಪಾಲರಾದ ಶ್ರೀ ಸುಬ್ಬಪ್ಪ ಕೈಕಂಬ ಅಭ್ಯಾಗತರಾಗಿ ಆಗಮಿಸಿದ್ದು, ದೀಪ ಬೆಳಗಿ ಅಂದಿನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ “ನೃತ್ಯಾಂತರಂಗ ಹುಟ್ಟಿಕೊಂಡ ಉದ್ದೇಶ, ರೂಪುಗೊಳ್ಳುತ್ತಿರುವ ರೀತಿ, ಅದರ ಉತ್ತಮ ಬೆಳವಣಿಗೆ ಎಲ್ಲವೂ ಇಂದಿನ ಈ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಲ್ಲಿನ ಶಿಸ್ತು, ಪ್ರೇಕ್ಷಕರಲ್ಲಿ ಹುಟ್ಟಿದ ಆಸಕ್ತಿ ಇದು ಜ್ವಲಂತ ನಿದರ್ಶನವಾಗಿದೆ” ಎಂಬ ಮೆಚ್ಚುಗೆಯ ಮಾತಿನೊಂದಿಗೆ ನೃತ್ಯಾಂತರಂಗದ ಯಶಸ್ಸಿಗೆ ಶುಭ ಕೋರಿದರು.
ಸಂಸ್ಥೆಯ ಪುಟಾಣಿಗಳ ತ್ರಿಪತಾಕ ತಂಡದಿಂದ ಗಣಪತಿ ಸ್ತುತಿಯೊಂದಿಗೆ ನೃತ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆಪ್ತಚಂದ್ರಮತಿ ಮುಳಿಯ ಇವರು ಬಹಳ ಸಮರ್ಥವಾಗಿ ನಿರ್ವಹಿಸಿದರು.
ಆರಂಭದಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ಸಹ ನಿರ್ದೇಶಕರಾದ ವಿದ್ವಾನ್ ಶ್ರೀ ಗಿರೀಶ್ ಕುಮಾರ್ ಶಂಖನಾದ ಮತ್ತು ಓಂಕಾರದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಕಲಾವಿದರೇ ಆದ ವಿದುಷಿ ಅಪೂರ್ವ ಗೌರಿ ದೇವಸ್ಯ, ವಿದುಷಿ ಶುಭಾ ಅಚಳ್ಳಿ, ವಿದುಷಿ ವಿಂಧ್ಯಾ ಕಾರಂತ, ವಿದುಷಿ ವಿಭಾಶ್ರೀ ಗೌಡ, ವಿದುಷಿ ಪ್ರಣಮ್ಯ ಹಾಗೂ ಸಂಸ್ಥೆಯ ನಿರ್ದೇಶಕರಾದ ಗುರು ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಶ್ರೀಮತಿ ಪ್ರೀತಿಕಲಾ ದೀಪಕ್ ಇವರುಗಳಿಂದ ನೃತ್ಯಾಂತರಂಗ ಕಾರ್ಯಕ್ರಮ ನಡೆಯಿತು. ನೃತ್ಯಕ್ಕೆ ಸಂಬಂಧಪಟ್ಟ ಬೇರೆ ಬೇರೆ ಶಿಬಿರಗಳಲ್ಲಿ ತರಬೇತಿ ಪಡೆದ ನೃತ್ಯಗಳೊಂದಿಗೆ ಗುರುಗಳೇ ಸಂಯೋಜನೆ ಮಾಡಿದ ಹೊರನಾಡಿನ ಅನ್ನಪೂರ್ಣೇಶ್ವರಿಯ ಬಗ್ಗೆ ರಚಿತವಾದ ಒಂದು ಕನ್ನಡದ ಸುಂದರ ಪದವರ್ಣವನ್ನು ಪ್ರಸ್ತುತ ಪಡಿಸಿದ ನಂತರ ದೇವಿಯ ಕುರಿತಾದ ಕೃತಿ ತಮಿಳು ಭಾಷೆಯ ಒಂದು ನೃತ್ಯ, ಕನ್ನಡದ ವರ್ಣದೊಂದಿಗೆ ಮತ್ತು ಅಂತಿಮವಾಗಿ ತಿಲ್ಲಾನದೊಂದಿಗೆ ನೃತ್ಯ ಕಾರ್ಯಕ್ರಮ ಸಮಾಪ್ತಗೊಂಡಿತು.
ಸಂಸ್ಥೆಯ ವಿದ್ಯಾರ್ಥಿನಿಯರಾದ ಕುಮಾರಿ ಮನೀಷ ಕಜೆ, ಕುಮಾರಿ ನಿಯತಿ ಮತ್ತು ಕುಮಾರಿ ವೃದ್ಧಿ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಭ್ಯಾಗತರ ಮತ್ತು ಕಲಾವಿದರನ್ನು ಸಭೆಗೆ ಪರಿಚಯ ಮಾಡಿಸಿಕೊಟ್ಟರು. ಸಂಸ್ಥೆಯ ವಿದ್ಯಾರ್ಥಿನಿ ಆಪ್ತಚಂದ್ರಮತಿ ಮುಳಿಯ ಇವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸುವುದರೊಂದಿಗೆ ಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.