ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ 35ನೇ ವರ್ಷದ ಮಹೋತ್ಸವ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 21 ಜನವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಹೆನ್ರಿ ಡಿ’ಸೋಜರವರು ವಹಿಸಲಿದ್ದು, ನಿರ್ದೇಶಕ, ನಟ, ಚಿತ್ರಕಥೆಗಾರ ಮತ್ತು ಗೀತ ರಚನೆಕಾರ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಸಂದೇಶ ಸಾಹಿತ್ಯ ಪ್ರಶಸ್ತಿ – ಕನ್ನಡ’ ಡಾ. ನಾ. ಮೊಗಸಾಲೆ, ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕೊಂಕಣಿ’ ಪ್ಯಾಟ್ರಿಕ್ ಕಾಮಿಲ್ ಮೋರಸ್, ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು’ ಡಾ. ಇಂದಿರಾ ಹೆಗ್ಗಡೆ, ‘ಸಂದೇಶ ಮಾಧ್ಯಮ ಪ್ರಶಸ್ತಿ’ ಶ್ರೀಮತಿ ಎಸ್.ಜಿ. ತುಂಗರೇಣುಕ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ’ ಸೈಮನ್ ಪಾಯ್ಸ್, ‘ಸಂದೇಶ ಕಲಾ ಪ್ರಶಸ್ತಿ’ ಶ್ರೀನಿವಾಸ ಜಿ. ಕಪ್ಪಣ್ಣ, ‘ಸಂದೇಶ ಶಿಕ್ಷಣ ಪ್ರಶಸ್ತಿ’ ಡಾ. ದತ್ತಾತ್ರೇಯ ಅರಳಿಕಟ್ಟೆ, ‘ಸಂದೇಶ ವಿಶೇಷ ಪ್ರಶಸ್ತಿ’ ನವಜೀವನ ರಿಹಬಿಲಿಟೇಷನ್ ಸೆಂಟರ್ ಫಾರ್ ದ ಡಿಸೇಬಲ್ಡ್ ಇವರುಗಳಿಗೆ ಪ್ರದಾನ ಮಾಡಲಾಗುವುದು.



