ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ‘ಸಾಹಿತ್ಯ ವೈಭವ 2026’ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2026ರಂದು ಬೆಳಗ್ಗೆ 9-00 ಗಂಟೆಗೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಎಸ್. ಗಣೇಶ್ ರಾವ್ ಇವರು ಉದ್ಘಾಟನೆ ಮಾಡಲಿದ್ದು, ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು ರಾಜ್ಯ ಪ್ರಧಾನ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಖ್ಯಾತ ಚುಟುಕು ಸಾಹಿತಿ, ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಇವರ ನೇನೋಕತೆಗಳ ಸಂಕಲನ ‘ಕೋಲ್ಮಿಂಚು’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಹಾಗೂ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ‘ಚುಟುಕು ಕಾವ್ಯ ಕಾಮಿನಿ’ ಕಾವ್ಯಸಂಕಲನವನ್ನು ಡಾ. ಎ. ಜನಾರ್ದನ ಶೆಟ್ಟಿಯವರು ಬಿಡುಗಡೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಸದಾಶಿವ ಉಳ್ಳಾಲ್ ಮತ್ತು ಗೋಪಾಲಕೃಷ್ಣ ಶೆಟ್ಟಿ, ಡಾ. ಎಂ. ಜಗದೀಶ್ ಶೆಟ್ಟಿ. ಪುಷ್ಪಲತಾ ಮತ್ತು ನಾರಾಯಣಯ್ಯ ಮೂಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ತುಳು ಕವಿಗೋಷ್ಠಿಗಳು ನಡೆಯಲಿದೆ.

