ಜಗತ್ತಿನಲ್ಲಿ ಅದೆಷ್ಟೋ ಕ್ರೂರ ಘಟನೆಗಳು ನಡೆಯುತ್ತವೆ. ಉತ್ತಮ ಬರಹಗಾರನು ಅವುಗಳನ್ನು ಕಥಾ ವಸ್ತುವನ್ನಾಗಿ ಆಯ್ದುಕೊಂಡು ಸತ್ಯವೆಂಬಂತೆ ನಿರ್ವಹಿಸುವಾಗ ನಿಜ ಘಟನೆಗಿಂತಲೂ ಹೆಚ್ಚು ಪ್ರಖರತೆಯನ್ನು ಪಡೆಯುತ್ತದೆ. ಬದುಕಿನ ವೃತ್ತವನ್ನು ಸಂಕ್ಷಿಪ್ತವಾಗಿಸಿ ಕಾಲಕೋಶದೊಳಗೆ ಕೂರಿಸುವುದರಿಂದ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ. ನಾಲ್ಕು ದಶಕಗಳ ಹಿಂದೆ ಪ್ರಕಟವಾಗಿದ್ದ ಡಾ. ನಾ. ಮೊಗಸಾಲೆಯವರ ‘ನೆಲ ಮುಗಿಲುಗಳ ಮಧ್ಯೆ’ ಎಂಬ ಕಾದಂಬರಿ ಇತ್ತೀಚೆಗೆ ಪುನರ್ಮುದ್ರಣಗೊಂಡಿದೆ. ಘಟನೆಗಳನ್ನು ಪೋಣಿಸಿದ ರೀತಿ, ಹದವರಿತ ನಿರ್ಲಿಪ್ತ ವಿವರಣೆ, ತನ್ನದೇ ಶೈಲಿಯ ಸಂಭಾಷಣೆಗಳು ಕೃತಿಯ ಯಶಸ್ಸಿಗೆ ಕಾರಣವಾಗಿವೆ. ಭಾವನಾತ್ಮಕತೆ, ಪಾತ್ರಗಳ ಮಾನಸಿಕ ಗೊಂದಲಗಳು ಕಾದಂಬರಿಗೆ ಜೀವ ತುಂಬಿವೆ.
ಪಾತ್ರಚಿತ್ರಣ
ಪಾತ್ರ ಸೃಷ್ಟಿಯಲ್ಲಿ ಕಾದಂಬರಿಕಾರನ ಪ್ರತಿಭೆ ಅದ್ವಿತೀಯವಾಗಿದೆ. ಪ್ರಕಾಶ ಎಂಬ ಮಧ್ಯವಯಸ್ಕನೇ ಮುಖ್ಯ ಪಾತ್ರವೆಂದುಕೊಂಡು ಓದುಗನು ಅವನ ಜೊತೆಗೆ ಸಾಗಿದರೆ ಹಿನ್ನೋಟ ತಂತ್ರದ ಮೂಲಕ ಎಲಿಜಾ ಮುಂದೆ ಬರುತ್ತಾಳೆ. ಆತ್ಮಹತ್ಯೆ ಇದರ ಮುಖ್ಯ ಕಥಾವಸ್ತು ಎಂದು ಭಾವಿಸಿದರೆ ಅಂಥ ಆತಂಕ ನಿಧಾನವಾಗಿ ಇಲ್ಲದಾಗುತ್ತದೆ. ಪ್ರಕಾಶನು ನಗರದ ವಸತಿಗೃಹಕ್ಕೆ ಬರುವ ದಾರಿಯಲ್ಲಿ ಎಲಿಜಾಳ ಭೇಟಿಯಾಗುತ್ತದೆ. ಅವನು ತಂಗಿದ ಕೋಣೆಯ ಪಕ್ಕದ ಕೋಣೆಯಲ್ಲಿ ಆಕೆ ರೂಂ ಹಿಡಿಯುವುದು ಕೇವಲ ಆಕಸ್ಮಿಕ. ಆತ್ಮಹತ್ಯೆಗೆ ಅಗತ್ಯವಾದ ನಿದ್ರೆ ಮಾತ್ರೆಗಳು ಅವಳ ಹತ್ತಿರ ಇವೆ. ಆದರೆ ಸಾಯಲಿರುವ ತಾನು ರೊಕ್ಕವನ್ನೂ ತಂದದ್ದೇಕೆ ಎಂಬ ಪ್ರಶ್ನೆ ಅವಳೊಳಗೆ ಹುಟ್ಟುತ್ತದೆ. ಇನ್ನೂ ಎರಡು ದಿನ ಅಲ್ಲೇ ಉಳಿಯುವ ಆಕೆಗೆ ಪ್ರಕಾಶ ತನ್ನ ಸಹಪಾಠಿಯಾಗಿದ್ದ ಎಂದು ಹೊಳೆಯುತ್ತದೆ.
ಕ್ರಮೇಣ ಎಲಿಜಾಳ ಪೂರ್ವಾಪರ ಬಿಚ್ಚಿಕೊಳ್ಳುತ್ತದೆ. ಅವಳ ಮಾವ ಒಳ್ಳೆಯ ವ್ಯಕ್ತಿ. ನಾಲ್ಕು ದಲಿತ ಕುಟುಂಬಗಳ ಮತಾಂತರ ಮಾಡುವಲ್ಲಿ ಯಶಸ್ವಿಯಾದ ಅವನು ಇತರ ಕುಟುಂಬಗಳ ಅಥವಾ ಆ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳುತ್ತಾನೆ. ಆ ಸಮುದಾಯಕ್ಕೆ ಸೇರಿದ ನಾಲ್ಕಾರು ಠೊಣಪರು ಬಾಲಕಿಯಾಗಿದ್ದ ಎಲಿಜಾಳನ್ನು ಅತ್ಯಾಚಾರ ಮಾಡುತ್ತಾರೆ. ಸಮುದಾಯದ ಆಕ್ರೋಶಕ್ಕೆ ಬಲಿಯಾದ ಅಪ್ರಾಪ್ತ ಹೆಣ್ಣು ತನಗಾದ ಅನ್ಯಾಯಕ್ಕೆ ಸೇಡು ತೀರಿಸಲಾಗದೆ ಕೀಳರಿಮೆಗೆ ಬಲಿಯಾಗುತ್ತಾಳೆ. ಅವಳು ಯಾರನ್ನೂ ದೂರುವುದಿಲ್ಲ. ಆದರೆ ಗೊಂದಲಕ್ಕೀಡಾಗುತ್ತಾಳೆ.
ಅಪೂರ್ವ ಕಲಾಕೃತಿ
ನೊರೋನ್ಹಾ ಎಂಬಾತ ಅವಳ ಮೇಲೆ ಕಣ್ಣು ಹಾಕಿದರೂ ಅವನ ಪ್ರೇಮದಲ್ಲಿ ಪರವಶಳಾಗದೆ ಛಲದಿಂದ ವಿದ್ಯಾಭ್ಯಾಸ ಮಾಡುತ್ತಾಳೆ. ಕಲಿತು ವೈದ್ಯೆಯಾಗುತ್ತಾಳೆ. ಅಲೆಕ್ಸಾಂಡರ್ ಎಂಬ ಮೃಗೀಯ ನಡತೆಯ ಮನುಷ್ಯ ಅವಳನ್ನು ಮದುವೆಯಾಗುತ್ತಾನೆ. ಎರಡೇ ವರ್ಷದಲ್ಲಿ ಅವನು ಸತ್ತು ಆಕೆ ಒಂಟಿಯಾದರೂ ಒಂದು ಮಗುವಿನ ತಾಯಿಯಾಗುತ್ತಾಳೆ. ತನ್ನ ಮಗು ಹುಟ್ಟಿನಲ್ಲೇ ಮಾರಕ ರೋಗವನ್ನು ಹೊತ್ತು ತಂದವಳೆಂದು ತಿಳಿದಾಗ ಹತಾಶೆಯಿಂದ ನಲುಗುತ್ತಾಳೆ.
ಜೀವನ ಧರ್ಮದ ವಿಶ್ಲೇಷಣೆ
ಮನುಷ್ಯನು ತನಗಾದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಇಚ್ಛಾಮರಣವನ್ನು ಬಯಸುವುದು ಸಹಜ. ಎಲಿಜಾಳೂ ಈ ಹಂತಕ್ಕೆ ಬರುವುದನ್ನು ಕಾದಂಬರಿ ಸೂಚಿಸುತ್ತದೆ. ಡಾ. ಸೇನ್ ಗುಪ್ತ ಎಂಬ ಹಿರಿಯ ವೈದ್ಯನಿಗೆ ಎಲಿಜಾಳ ಕುರಿತು ಕಳವಳ ಹೆಚ್ಚುತ್ತದೆ. ಅಪೂರ್ಣ, ರೋಗಗ್ರಸ್ಥ ಮಗುವಿನ ಜೊತೆಗಿದ್ದರೆ ಎಲಿಜಾಳಲ್ಲಿ ಖಿನ್ನತೆ ಹೆಚ್ಚಬಹುದು ಎಂಬ ಆತಂಕದಿಂದ ಅವರು ಮಗುವನ್ನು ಸಾಕುತ್ತೇನೆಂದು ತನ್ನ ಬಳಿ ಇಟ್ಟುಕೊಂಡರೂ ಕಾಲಾನಂತರ ಅದು ಸತ್ತುಹೋಗುತ್ತದೆ. ತಾನು ಎಲಿಜಾಳ ಸಂಗಾತಿಯಾಗುವುದಾಗಿ ಸೇನ್ ಗುಪ್ತ ಬರೆದ ಕಾಗದ ಎಲಿಜಾಳನ್ನು ಇನ್ನಷ್ಟು ಆತಂಕಕ್ಕೀಡು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತರುತ್ತದೆ.
ಕಾದಂಬರಿಯ ಕೊನೆಯಲ್ಲಿ ಸೇನ್ ಗುಪ್ತರ ಪತ್ರ ಕೆಲವು ಮುಖ್ಯ ವಿಚಾರಗಳನ್ನು ಓದುಗರ ಮುಂದೆ ಇಡುತ್ತದೆ. ಅದಕ್ಕೆ ಸಾಕ್ಷಿಯಾಗಿ ಕೆಲವು ವಾಕ್ಯಗಳನ್ನು ಗಮನಿಸಬಹುದು.
1) ಆತ್ಮಹತ್ಯೆ ಮಾಡಿಕೊಳ್ಳುವವ ಪರತಂತ್ರ ಮತ್ತು ಮರಣ ದಂಡನೆಗೆ ಗುರಿಯಾದವ ಸ್ವತಂತ್ರ ಅಂತ ಯಾವನೋ ಖ್ಯಾತ ಲೇಖಕ ಹೇಳಿದ್ದಾನೆ.
2) ಪ್ರತಿಯೊಬ್ಬನಿಗೂ ಇನ್ನೊಬ್ಬರ ಬದುಕು ತುಂಬಾ ಆಕರ್ಷಕ ಅಥವಾ ಅಸಹ್ಯವಾಗಿ ಕಾಣುತ್ತದೆ.
3) ನನಗೀಗ 50 ವರ್ಷ ಆದರೂ ನಾನು ಅವಿವಾಹಿತ ಬ್ರಹ್ಮಚಾರಿ ಅಂತ ಹೇಳಲಾರೆ. ಸ್ತ್ರೀ ಸುಖ ಬಯಸುವವ ನಿಜವಾಗಿಯೂ ಮದುವೆಯಾಗಿಯೇ ಅದನ್ನು ಉಣ್ಣಬೇಕೇ ವಿನಾ ಹೊರಗಿನ ಚಾಳಿಯಿಂದ ಅಲ್ಲ ಅಲ್ಲವೇ?
ಸೇನ್ ಗುಪ್ತ ಎಲಿಜಾಳಿಗೆ ಬರೆದ ಈ ಪತ್ರ ಗಹನವಾಗಿದ್ದರೂ ಆಕೆಯನ್ನು ಎಷ್ಟರ ಮಟ್ಟಿಗೆ ತಿದ್ದಿತೋ ತಿಳಿಯದು. ಆದರೆ ಅವಳ ಪಕ್ಕದ ಕೋಣೆಯಲ್ಲಿ ಉಲ್ಲಾಸಭರಿತನಾಗಿದ್ದು, ಪ್ರಸನ್ನನಾಗಿದ್ದ ಪ್ರಕಾಶನ ಬಳಿ ಬಂದು ಹುಚ್ಚಳಂತೆ ತನ್ನ ದೇಹವನ್ನು ಒಪ್ಪಿಸುವಲ್ಲಿ ಅವಳ ಮೃಗೀಯತೆ ಕಾಣಿಸುತ್ತದೆ. ದುರಂತವೆಂದರೆ ಮರುದಿನ ಬೆಳಗ್ಗೆ ಕೋಣೆಯಲ್ಲಿ ಆತನು ಶವವಾಗಿರುತ್ತಾನೆ.
ವಯಸ್ಸಿನ ವಿವಿಧ ಹಂತಗಳಲ್ಲಿರುವ ಓದುಗರು ಯಾವುದೇ ಅಭಿಪ್ರಾಯ ತಾಳುವ ರೀತಿಯಲ್ಲಿ ಕೃತಿಯ ವಿನ್ಯಾಸವನ್ನು ರೂಪಿಸಲಾಗಿದೆ. ನೊಂದ ಹೆಣ್ಣಿನ ಹಳಿತಪ್ಪಿದ ಬದುಕಿನ ಓಟವನ್ನು ಕಂಡರಿಸುವ ಈ ಕೃತಿಯು ನೆಲದ ಆಳಕ್ಕೆ ಹೋಗದೆ ಆಕಾಶದ ವಿಸ್ತಾರಕ್ಕೂ ಹರಡದೆ ಸುಂದರ ಕಲಾಕೃತಿಯಾಗಿ ಕಂಗೊಳಿಸುತ್ತದೆ.

ಪುಸ್ತಕ ವಿಮರ್ಶಕರು : ಪಿ.ಎನ್. ಮೂಡಿತ್ತಾಯ
ವಿಶ್ರಾಂತ. ಪ್ರಾಂಶುಪಾಲರು ಭೂತಪೂರ್ವ ಅಧ್ಯಕ್ಷ , ಪಿ ಜಿ , ರಿಸರ್ಚ್ ಸೆಂಟರ್ . ಸ. ಕಾಲೇಜು. , ಕಾಸರಗೋಡು
ಶ್ರೀ ಲಕ್ಷ್ಮೀ, ಅಂಚೆ ಕಯ್ಯಾರು , ಉಪ್ಪಳ 671322 .
ಪ್ರೊl ಪಿ ಎನ್ ಮೂಡಿತ್ತಾಯರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಇವರು ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್.ವಿ ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ ( ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
