ದೂರದ ಮುಂಬೈಯಲ್ಲಿ ನೆಲೆಸಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸುತ್ತ ಬಂದಿರುವ ಪತ್ರಕರ್ತ ಲೇಖಕ ಶ್ರೀನಿವಾಸ ಜೋಕಟ್ಟೆ ಇವರ ಹೊಸ ಕಥಾ ಸಂಕಲನ ಅನೇಕ ದೃಷ್ಟಿಯಿಂದ ನಮ್ಮ ಗಮನವನ್ನು ಸೆಳೆಯುತ್ತದೆ.
‘ಅದೆಲ್ಲಾ ಬಿಟ್ಟು’ ಇದು ಲೇಖಕ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಇವರ ಇತ್ತೀಚಿನ ಕತೆಗಳ ಸಂಕಲನ. ಇದರಲ್ಲಿ ವೈವಿಧ್ಯಮಯವಾದ 27 ಕತೆಗಳಿವೆ. ಜೋಕಟ್ಟೆ ಇವರ ಕತೆಗಳಲ್ಲಿ ವಿಶೇಷವಾಗಿ ಕಂಡುಬರುವುದು ವರ್ತಮಾನದ ವಾಸ್ತವ ದರ್ಶನ, ವಿವರಣೆ ಹಾಗೂ ವಿಶ್ಲೇಷಣೆ. ಸಮಾಜದ ಎಲ್ಲ ಬಗೆಯ ವಿದ್ಯಮಾನಗಳನ್ನು ಪ್ರಶ್ನಿಸುವ, ಆತ್ಮವಿಮರ್ಶೆಗೊಳಪಡಿಸುವ ಯತ್ನ ಈ ಕತೆಗಳಲ್ಲಿ ಎದ್ದು ಕಾಣುತ್ತದೆ. ಆಧುನೀಕರಣ, ಜಾಗತೀಕರಣ ನಗರೀಕರಣ ಮೊದಲಾದವುಗಳ ಪರಿಣಾಮವಾಗಿ ತಲೆ ಎತ್ತುವ ಹೊಸ ಸಂವೇದನೆಗಳನ್ನು, ಮುಂಬೈ ಮಹಾನಗರದ ಬದುಕಿನ ಸಂಕೀರ್ಣ ಮುಖಗಳನ್ನು, ವರ್ತಮಾನದ ಸಾಮಾಜಿಕ ರಾಜಕೀಯ ವಿದ್ಯಮಾನಗಳನ್ನು ಜೋಕಟ್ಟೆಯವರು ಕತೆಯಾಗಿ ಕಟ್ಟಿ ಕೊಟ್ಟಿರುವ ಪರಿ ನಮ್ಮ ಗಮನವನ್ನು ಸೆಳೆಯುತ್ತದೆ.
ಇಲ್ಲಿನ ಕತೆಗಳು ಸಮಕಾಲೀನ ಬದುಕಿನ ವಿವಿಧ ಸ್ತರಗಳೊಂದಿಗೆ ನಿಕಟವಾದ ಸಂಪರ್ಕವನ್ನಿಟ್ಟುಕೊಂಡಿವೆ. ಹದಿಹರೆಯದ ಪ್ರೇಮ,
ನಂಬಿಕೆ, ಅಪನಂಬಿಕೆ, ಯುವ ಜನಾಂಗದ ತವಕ ತಲ್ಲಣಗಳು, ತಲೆಮಾರುಗಳ ಅಂತರ, ಅನಾಥಪ್ರಜ್ಞೆ, ವರ್ತಮಾನದಲ್ಲಿನ
ಹಿಂಸೆ, ಭ್ರಷ್ಟಾಚಾರ, ಸಾಮಾಜಿಕ ಪಲ್ಲಟ ಹೀಗೆ ಹತ್ತು ಹಲವು ವಿಚಾರಗಳನ್ನು ಮುನ್ನೆಲೆಗೆ ತಂದು ನಮ್ಮೊಂದಿಗೆ ಸಂವಾದಕ್ಕಿಳಿಯುತ್ತವೆ. ಹೊಸ ಬದುಕಿಗೆ ಅನುಗುಣವಾಗಿ ತಲೆ ಎತ್ತುವ ಹೊಸ ಸಂವೇದನೆಗಳನ್ನು ಹಾಗೂ ಸಮಕಾಲೀನ ನಗರದ ಸಂಕೀರ್ಣ ಬದುಕನ್ನು ಕಥಾ ಸಾಹಿತ್ಯವಾಗಿ ರೂಪಾಂತರಗೊಳಿಸುವ ಕಲೆಗಾರಿಕೆ ಇಲ್ಲಿ ನಡೆದಿರುವುದು ಈ ಕೃತಿಯ ಧನಾತ್ಮಕ ಅಂಶ.
ಕಳೆದ ನಾಲ್ಕು ದಶಕಗಳಿಂದ ದೂರದ ಮುಂಬೈ ಮಹಾನಗರದಲ್ಲಿ ನೆಲೆಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಶ್ರೀನಿವಾಸ ಜೋಕಟ್ಟೆ ಅವರೂ ಒಬ್ಬರು. ಕತೆ, ಕಾವ್ಯ, ಅಂಕಣ ಬರಹ, ಪ್ರವಾಸ ಸಾಹಿತ್ಯ, ಸಾಂದರ್ಭಿಕ ಲೇಖನ ಹೀಗೆ ಆಧುನಿಕ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮಗಳನ್ನಾಗಿ ಮಾಡಿಕೊಂಡು ಬರವಣಿಗೆ ಕಾಯಕದಲ್ಲಿ ನಿರತರಾಗಿರುವ ಶ್ರೀನಿವಾಸ ಜೋಕಟ್ಟೆ ಅವರದು ನಾನಾ ಬಗೆಯ ವ್ಯಕ್ತಿತ್ವ. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜೋಕಟ್ಟೆ ಅವರು ವಿಚಾರವಾದಿ, ಒಳ್ಳೆಯ ಚಿಂತಕ ಹಾಗೂ ನೇರ ನಡೆ ನುಡಿಯ ಪತ್ರಕರ್ತ. ಅವರ ಬರವಣಿಗೆಯನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಒಂದು ಸೃಜನೇತರ ಪತ್ರಿಕಾ ಸಾಹಿತ್ಯ; ಇನ್ನೊಂದು ಕತೆ, ಕಾವ್ಯ ಇತ್ಯಾದಿ ಸೃಜನಶೀಲ ಪ್ರಕಾರ. ಮುಂಬೈ ಮಹಾನಗರದಲ್ಲಿ ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಶ್ರೀನಿವಾಸ ಜೋಕಟ್ಟೆ ಸಂವೇದನಶೀಲ ಪತ್ರಕರ್ತ. ಅವರದು ಬಹುಮುಖ ಆಸಕ್ತಿ, ಅವರ ಒಟ್ಟೂ ಬರವಣಿಗೆಯಲ್ಲಿ ಎದ್ದು ಕಾಣುವುದು ಬದುಕಿನ ವಾಸ್ತವತೆ.
ಸಣ್ಣಕತೆಯ ಕ್ಷೇತ್ರದಲ್ಲಿಯೂ ಶ್ರೀನಿವಾಸ ಜೋಕಟ್ಟೆ ಇವರಿಗೆ ವಿಶೇಷವಾದ ಆಸಕ್ತಿ ಇದೆ. ಈಗಾಗಲೇ ಅವರ ಏಳು ಕಥಾ ಸಂಕಲನಗಳು ಬೆಳಕು ಕಂಡಿವೆ. ಈವರೆಗೆ ಅವರು 80ಕ್ಕೂ ಹೆಚ್ಚು ವೈವಿಧ್ಯಮಯವಾದ ಕತೆಗಳನ್ನು ಬರೆದು ಸೈ ಎನಿಸಿಕೊಂಡಿದ್ದಾರೆ. ಗುಡ್ಡ, ಹೃದ್ಗತ, ಶ್ರೀರಾಮಚಂದ್ರ ನಿವಾಸ, ಅಧಿಷ್ಠಿತ, ತೆರೆ, ಹೊಸ ಹೆಜ್ಜೆ, ಜುಲಾಬು ಮೊದಲಾದವು ಈ ಸಂಕಲನದ ಉತ್ತಮ ಕತೆಗಳು. ಜೋಕಟ್ಟೆ ಇವರ ಕಥಾ ಜಗತ್ತು ಮೇಲು ನೋಟಕ್ಕೆ ವೈದೃಶ್ಯಗಳ ಮೂಲಕ ಭಗ್ನಗೊಂಡಂತೆ ತೋರುವುದಾದರೂ ಅಂತರ್ಯದಲ್ಲಿ ಹೊಸ ಬದುಕಿನ ಸಾಧ್ಯತೆಗಳತ್ತ ವಾಲುತ್ತವೆ ಎನ್ನುವುದು ಗಮನೀಯ ಅಂಶ. ಇಲ್ಲಿನ ಬಹುತೇಕ ಕತೆಗಳಿಗೆ ಹೆಚ್ಚಾಗಿ ಮುಂಬಯಿಯೇ ಕೇಂದ್ರ ಬಿಂದು. ನಗರ ಜೀವನದ ಗದ್ದಲ, ಗೊಂದಲ ಅನಿಶ್ಚಿತತೆಯ ಬದುಕು, ಒರಟುತನ, ಹುಸಿ ಸಂಸ್ಕೃತಿಯ ಪ್ರದರ್ಶನ, ಮಾನವ ಜೀವನವನ್ನು ಸಪಾಟುಗೊಳಿಸುವ ಮಹಾನಗರದ ರಾಕ್ಷಸತ್ವದ ವಿವರಗಳೆಲ್ಲ ಈ ಕತೆಗಳೊಳಗೆ ಮೈ ಪಡೆದುಕೊಂಡಿವೆ. ಯುವಕರನ್ನೇ ಗಮನದಲ್ಲಿಟ್ಟುಕೊಂಡು ಬರೆದ ಕತೆಗಳೂ ಇಲ್ಲಿವೆ. ಅವರದೇ ವಿಶಿಷ್ಟ ಲೋಕವಿಲ್ಲಿದೆ. ಇಲ್ಲಿನ ವಿವರಗಳು ಅನುಭವಜನ್ಯವಾದ್ದರಿಂದ ಅವು ಬರೇ ಹೇಳಿಕೆಗಳಾಗದೇ ಪಾತ್ರಗಳಿಗೆ ಜೀವಂತಿಕೆಯನ್ನು ತುಂಬುತ್ತವೆ. ಈ ಕತೆಗಳು ಮಾನವ ಸ್ವಭಾವದ ಅನ್ವೇಷಣೆಯಲ್ಲಿ ಆಸಕ್ತಿಯನ್ನು ತಾಳುತ್ತವೆ. ಈ ಕತೆಗಳು ಸರಳವಾಗಿವೆ, ನೇರವಾಗಿವೆ, ವಾಚನೀಯವಾಗಿವೆ.
ಈ ಸಂಕಲನದ ಗಮನ ಸೆಳೆಯುವ ಒಂದು ಕತೆ ಜುಲಾಬು. ಇದರ ಬಂಧ ಗಟ್ಟಿಯಾಗಿದ್ದು ಅಷ್ಟೇ ಧ್ವನಿಪೂರ್ಣವೂ ಆಗಿದೆ. ಆಸ್ಪತ್ರೆಯಲ್ಲಿರುವ ತಂದೆಯನ್ನು ಭೇಟಿಯಾಗಲು ನಿರೂಪಕ ಊರಿಗೆ ಹೊರಟು ನಿಂತಿರುತ್ತಾನೆ. ಆವಾಗ ಅವನಿಗೆ ಜುಲಾಬು ಶುರುವಾಗುತ್ತದೆ. ಊರಿಗೆ ಬಂದು ತಂದೆ ತಾಯಿ ಬಂಧು ಮಿತ್ರರನ್ನು ಭೇಟಿಯಾಗಿ ಮುಂಬಯಿಗೆ ಮರುಳುವಲ್ಲಿಯವರೆಗೂ ಅವನನ್ನು ಅದು ಬಾಧಿಸುತ್ತಲೇ ಇರುತ್ತದೆ. ಊರಲ್ಲಿನ ಪೂಜೆ, ಮಂತ್ರ, ತಂತ್ರ, ಧರ್ಮ, ದೇವರುಗಳ ಚರ್ಚೆಯಲ್ಲಿ ನಿರೂಪಕ ಸಿಕ್ಕಿ ವಿಲಿವಿಲಿ ಒದ್ದಾಡುತ್ತಿರುತ್ತಾನೆ. ಆತನ ತಾಯಿ ಮಗ ಮುಂಬೈಯಲ್ಲಿ ಒಳ್ಳೆಯ ನೌಕರಿ ಹಿಡಿಯಬೇಕು, ಕತೆ, ಕವಿತೆ ಬರೆಯುವುದನ್ನು ನಿಲ್ಲಿಸುವಂತೆ ದೇವರಲ್ಲಿ ಮೊರೆಯಿಡುತ್ತಾಳೆ. ನಿರೂಪಕ ಅದನ್ನು ಸವಾಲಾಗಿ ಸ್ವೀಕರಿಸಿ ಗೆಲುವು ಸಾಧಿಸುತ್ತಾನೆ. ಇಲ್ಲಿ ಬಂಡಾಯ ಚಳುವಳಿಯ ಆಶಯಗಳನ್ನು ಕತೆಯೊಳಗೆ ದುಡಿಸಿಕೊಂಡ ಪರಿ ಬಹುಸೊಗಸಾಗಿದೆ. ಇದು ಜೋಕಟ್ಟೆ ಅವರ ಜೀವನದ ಕತೆಯೂ ಹೌದು. ‘ಸತ್ಯಕತೆ ಕಲ್ಪನೆಗಿಂತ ವಿಚಿತ್ರ’ ಎಂಬ ಮಾತಿದೆ. ಜೀವನವನ್ನು ಕತೆಯಾಗಿಸಿದ ಶ್ರೀನಿವಾಸ ಜೋಕಟ್ಟೆ ಇವರ ಪ್ರತಿಭೆ ಇಲ್ಲಿ ಮಿಂಚಿದೆ. ಧರ್ಮ, ದೇವರು, ಪೂಜೆ, ಮಂತ್ರ… ನೂರಾರು ಯೋಚನೆಗಳನ್ನು ಜುಲಾಬಿನ ಜೊತೆ ಹೊಸೆದು ಕತೆ ನೇಯ್ದಿರುವ ಪರಿ ಚೆನ್ನಾಗಿದೆ, ಅಷ್ಟೇ ಕಲಾತ್ಮಕವಾಗಿದೆ.
“ಕನ್ನಡದ ವಿಶಿಷ್ಟ ಸಂವೇದನೆಯ ಬರಹಗಾರ ಶ್ರೀನಿವಾಸ ಜೋಕಟ್ಟೆ ಮುಂಬಯಿ ಮಹಾನಗರಿಯ ಮಾಯಾಲೋಕದಲ್ಲಿ ಕನ್ನಡದ ಪ್ರೀತಿ ಸೆಲೆಯನ್ನು ಹರಿಸುತ್ತ ಮಾನವ ಸಂಬಂಧಗಳನ್ನು ಜೀವಂತವಾಗಿರಿಸುವಲ್ಲಿ ಶ್ರಮಿಸಿದ ಪರಿ ಅನನ್ಯ” ಮುಂಬಯಿಯ ನಿತ್ಯದ ಓಡಾಟಗಳ ನಡುವೆ ಧುತ್ತೆಂದು ಕತೆಗಳು ಹುಟ್ಟಿಕೊಳ್ಳುವುದು, ಮಧುರ ಭಾವಗಳು ಅರಳುವುದು ಜೋಕಟ್ಟೆಯವರ ಕತೆಗಳ ವೈಶಿಷ್ಟ್ಯ. ಹಾಗಾಗಿ ಅವರ ಕತೆಗಳು ಬೋರ್ ಹೊಡೆಸುವುದೇ ಇಲ್ಲ ಎಂಬ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಅವರ ಮಾತು ನಿಜವೇ ಆಗಿದೆ. ಇದೊಂದು ಒಳ್ಳೆಯ ಪ್ರಯತ್ನ. ಈ ಕೃತಿಗಾಗಿ ಶ್ರೀನಿವಾಸ ಜೋಕಟ್ಟೆ ಅವರಿಗೆ ಅಭಿನಂದನೆಗಳು.

ಪ್ರೊ. ಜಿ.ಎನ್. ಉಪಾಧ್ಯ ಮುಂಬೈ


‘ಅದೆಲ್ಲಾ ಬಿಟ್ಟು’ (ಕಥಾ ಸಂಕಲನ)
ಶ್ರೀನಿವಾಸ ಜೋಕಟ್ಟೆ
ಸಾಹಿತ್ಯ ಸುಗ್ಗಿ, ಬೆಂಗಳೂರು, ಬೆಲೆ ರೂ.275/-
ಸಂಪರ್ಕ : 9740066842
