ಮಂಗಳೂರು : ಮಂಗಳೂರಿನ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ‘ಮಂಜುಪ್ರಾಸಾದ’ ವಾದಿರಾಜ ಮಂಟಪದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ದಿನಾಂಕ 27 ಜನವರಿ 2026ರಂದು ‘ಮಧ್ವಜಯಂತಿ’ ಆಚರಿಸಲಾಯಿತು.
ಹರಿಪಾದಕ್ಕೈದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಹಾಗೂ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿದ್ದ ಮಧ್ವ ನವಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ “ಆಚಾರ್ಯ ಮಧ್ವರ ದ್ವೈತ ಸಿದ್ಧಾಂತ ಮತ್ತು ಚಿಂತನೆಗಳು ದೇವರು ಹಾಗೂ ಜೀವರ ತಾರತಮ್ಯವನ್ನು ಆಧರಿಸಿವೆ; ಅವು ವಸ್ತು ಮತ್ತು ಅದರ ಗುಣ ಲಕ್ಷಣಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಲ್ಲದೆ ವಾಸ್ತವಿಕ ಜಗತ್ತು ಹಾಗೂ ಆತ್ಮದ ಮುಕ್ತಿಗಾಗಿ ಭಕ್ತಿಯನ್ನು ಒತ್ತಿ ಹೇಳುತ್ತದೆ. ಮಧ್ವಾಚಾರ್ಯರ ವಿಚಾರಗಳು ವೇದ ಮತ್ತು ಪುರಾಣಗಳ ಆಧಾರದ ಮೇಲೆ ಸ್ಥಾಪಿತವಾಗಿವೆ. ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಮಾರ್ಗಗಳ ಮೂಲಕ ಅವರು ವಸ್ತುಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ. ಅವರು ರಚಿಸಿರುವ ಸುಮಾರು 39ರಷ್ಟು ಗ್ರಂಥಗಳು ಸರ್ವಮೂಲ ಗ್ರಂಥಗಳೆಂದು ಕರೆಯಲ್ಪಟ್ಟಿವೆ” ಎಂದು ಹೇಳಿದರು.
ಯಕ್ಷಗಾನ ಅರ್ಥಧಾರಿ, ಲೇಖಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡುತ್ತಾ “ಆಚಾರ್ಯ ಶಂಕರರ ಅದ್ವೈತ ಸಿದ್ಧಾಂತಕ್ಕೆ ಭಿನ್ನವಾಗಿ, ದೇವರಿಗಿಂತ ಜೀವಾತ್ಮ ಬೇರೆ ಎನ್ನುವ ತತ್ವವನ್ನು ಎತ್ತಿ ಹಿಡಿದಿರುವ ಮಧ್ವಾಚಾರ್ಯರು ಜಗತ್ತು ನಮ್ಮ ಅನುಭವಕ್ಕೆ ಬರುವುದರಿಂದ ಅದು ಮಿಥ್ಯೆಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಧ್ವರು, ಹರಿ ಸರ್ವೋತ್ತಮತ್ವವನ್ನು ಸ್ಥಾಪಿಸುವುದರ ಮೂಲಕ ಭಕ್ತಿ ಮತ್ತು ಜ್ಞಾನದಿಂದ ಮುಕ್ತಿ ಸಾಧ್ಯ ಎಂಬುದನ್ನು ಸಾರಿ ಹೇಳಿದ್ದಾರೆ. ಅವರು ಅದೃಶ್ಯರಾಗಿ ಬದರಿಯಲ್ಲಿ ವ್ಯಾಸ ಭಗವಾನರ ಸಮ್ಮುಖ ಅವತಾರ ಪರಿಸಮಾಪ್ತಿ ಹೊಂದಿದ ದಿನವನ್ನು ಮಧ್ವ ನವಮಿಯೆಂದು ಆಚರಿಸಲಾಗುತ್ತದೆ” ಎಂದರು.

ವೇದಮೂರ್ತಿ ಡಾ. ಪ್ರಭಾಕರ ಅಡಿಗ ಕದ್ರಿ ಅವರು ಮಾತನಾಡಿ “ವೇದಗಳನ್ನು ಪರಮ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದಿರುವ ಮಧ್ವಾಚಾರ್ಯರು ವೇದೋಪನಿಷತ್ತುಗಳ ಸಾರವನ್ನು ತಮ್ಮ ಚಿಂತನೆ ಮತ್ತು ಗ್ರಂಥಗಳಲ್ಲಿ ಅಳವಡಿಸಿರುವುದು ವ್ಯಕ್ತವಾಗಿದೆ” ಎಂದರು.
ಈ ಸಂದರ್ಭ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕಾಂತ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಅಲ್ಲದೆ ಉಪನ್ಯಾಸ ನೀಡಿದ ವಿದ್ವಾಂಸರನ್ನು ಕಲ್ಕೂರ ಪ್ರತಿಷ್ಠಾನ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ವೇದಮೂರ್ತಿ ಡಾ. ಪ್ರಭಾಕರ ಅಡಿಗ ಕದ್ರಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಆಶಯ ಭಾಷಣ ಮಾಡುತ್ತಾ “ಮಧ್ವಾಚಾರ್ಯರು ವಿಶ್ವ ಮಾನ್ಯರು, ಭಕ್ತಿ ಮಾರ್ಗ ಹಾಗೂ ಜ್ಞಾನ ಮಾರ್ಗದ ಚಿಂತನೆಯನ್ನು ಪ್ರಸ್ತುತ ಕಾಲಮಾನಕ್ಕೆ ಹೊಂದುವಂತೆ ನಿರೂಪಿಸಿದವರು” ಎಂದರು. ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ, ಶಶಿಪ್ರಭಾ ಐತಾಳ್ ಕಾವೂರು, ನಿತ್ಯಾನಂದ ಕಾರಂತ ಪೊಳಲಿ, ಪ್ರಭಾಕರ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಧಾರ್ಮಿಕ – ಸಾಂಸ್ಕೃತಿಕ ಸಂಘಟಕ ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
