ಮಾಲತಿ ಪಟ್ಟಣಶೆಟ್ಟಿಯವರು ಕಾವ್ಯ ಮತ್ತು ಕಥೆಗಳ ಜೊತೆಗೆ ಪ್ರಬಂಧಗಳನ್ನು ಕೂಡ ಬರೆದಿದ್ದಾರೆ. 2020ರಲ್ಲಿ ಪ್ರಕಟವಾದ ‘ಬಗೆದಷ್ಟು ಜೀವಜಲ’ ಎಂಬ ಸಂಕಲನದಲ್ಲಿ ಇಪ್ಪತ್ತಾರು ಪ್ರಬಂಧಗಳಿವೆ. ಬಗೆದಷ್ಟು ಉಕ್ಕಿ ಬರುವ ಬದುಕಿನ ಚೆಲುವು ಎಂಬ ಅರ್ಥವನ್ನು ಈ ಶೀರ್ಷಿಕೆಯು ಧ್ವನಿಸುತ್ತದೆ. ಅವರ ಪ್ರಬಂಧಗಳಲ್ಲಿ ಅನುಭವಾತ್ಮಕ, ಆತ್ಮಕಥಾನಕ ವಿಚಾರಗಳೊಂದಿಗೆ ಪ್ರವಾಸ, ಪ್ರಸಂಗ ಮತ್ತು ವ್ಯಕ್ತಿಚಿತ್ರಗಳಿವೆ. ಇವುಗಳು ನೆನಪಿನ ತುಣುಕುಗಳಂತಿರುವ ಅನುಭವ ಕಥನದ ಅಧ್ಯಾಯಗಳಂತಿರುವುದರಿಂದ ಶುದ್ಧಾಂಗವಾಗಿ ಲಲಿತಪ್ರಬಂಧ ಅಥವಾ ಹರಟೆ ಪ್ರಕಾರಕ್ಕೆ ಸೇರುವುದಿಲ್ಲ.
ಲೇಖಕಿಯ ಆತ್ಮಕತೆಯ ಪುಟದಂತಿರುವ ‘ನೆನಪು ಗಂಧರ್ವರು’ ಕಲಿಕೆಯ ಮೇಲಿನ ಆಸಕ್ತಿ, ಆಟಪಾಠಗಳೊಡನೆ ಸಾಗುತ್ತಿದ್ದ ಚಟುವಟಿಕೆಗಳು, ಸ್ಪರ್ಧೆಗಳು, ದೊರೆತ ಸಾಹಿತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಅವರ ಶಾಲಾಜೀವನದ ವಿವರಗಳನ್ನು ಕಟ್ಟಿಕೊಡುತ್ತದೆ. ‘ಇದಕ್ಕೆ ಏನೆನ್ನಬೇಕು?’ ಎಂಬ ರಚನೆಯು ಇದರ ಮುಂದುವರಿದ ಪುಟದಂತಿದ್ದು ಗುರು ಶಿಷ್ಯೆಯರ ಸಂಬಂಧ ಭಕ್ತಿ ಆರಾಧನೆಗಳನ್ನು ಮೀರಿ ಪ್ರೇಮವಾಗಿ ಬದಲಾಗುವ ರೀತಿಯು ನವಿರಾಗಿ ಮೂಡಿ ಬಂದಿದೆ. “ಇದಕ್ಕೆ ಏನೆನ್ನಬೇಕು? ಗುರುಭಕ್ತಿಯೇ? ಪ್ರೀತಿಯೇ? ಸ್ನೇಹವೇ? ಹುಚ್ಚು ಹಂಬಲವೇ? ಅಥವಾ ಹೆಸರಿಸಲು ಬಾರದ ಮುಗ್ಧ, ಸ್ನಿಗ್ಧ ಎಳೆಹರೆಯದ ಕೋಮಲ ಸಂವೇದನೆಗಳೇ?” (ಪುಟ 1) ಎಂಬ ಪ್ರಶ್ನೆಯಲ್ಲಿ, ಅವರಿಗೆ ವರ್ಗವಾದಾಗ ಆಕೆಗೆ ತನ್ನ ಅಂಗವೇ ಬೇರೆಯಾದಂತೆನಿಸಿ ಅತ್ತು “ನನಗೊಬ್ಬಳಿಗೇಕೆ ಹೀಗಾಗಬೇಕು?” (ಪುಟ 9) ಎನ್ನುವ ಆತ್ಮಾವಲೋಕನದ ಸಾಲುಗಳಲ್ಲಿ ಅಧ್ಯಾಪಕನ ಮೇಲಿನ ವಿಶೇಷ ಒಲವೇ ಎದ್ದು ಕಾಣಿಸುತ್ತದೆ. ಕಾಲಕ್ರಮೇಣ ಆಕೆಯು ಇಂಗ್ಲೀಷ್ ಉಪನ್ಯಾಸಕಿಯಾದಾಗ ಆಶ್ಚರ್ಯಕರವಾಗಿ ಭೇಟಿಯಾದ ಅವರು “ನಿನ್ನನ್ನು ಕಾಣಲೆಂದೇ ಬಂದಿದ್ದೇನೆ ಮಾಲತಿ. ಹತ್ತು ವರ್ಷಗಳೇ ಕಳೆದವು. ಇಂದು ನಾಳೆ ಎನ್ನುತ್ತಾ ತಪ್ಪಿತಸ್ಥ ಮನಸ್ಸಿನಿಂದ ಹಿಂಜರಿಯುತ್ತಿದ್ದೆ ನಿನ್ನನ್ನು ಮೇಲಿಂದ ಮೇಲೆ ನೆನಪಿಸುತ್ತೇನೆ. ವಿದ್ಯಾರ್ಥಿನಿಯಲ್ಲಿ ನಿನ್ನ ಮುಖವನ್ನೇ ಹುಡುಕುತ್ತೇನೆ. ನಮ್ಮ ಹೃದಯಗಳಲ್ಲಿ ಹೇಳಲಾರದ ಎಷ್ಟೋ ಮಾತುಗಳಿರುತ್ತವೆ. ನಿನಗೆ ಏನನ್ನೂ ಆಗ ಹೇಳಲಾಗಲಿಲ್ಲ” (ಪುಟ 11-12) ಎನ್ನುತ್ತಾರೆ. ಕಳೆದುಕೊಂಡದ್ದರ ನೆನಪು ದೇಶಕಾಲ ಪರಿಮಿತವಾದದ್ದಲ್ಲ. ಅಧ್ಯಾಪಕನ ನೆನಪುಗಳನ್ನು ಮೀರಲಾರದ ಲೇಖಕಿಯು ಆತನ ನೆನಪುಗಳಲ್ಲಿ ಜೀವಿಸುತ್ತಾಳೆ. ಇಲ್ಲಿ ಕಥನದ ಆವರಣವು ಮುಖ್ಯವಾಗುತ್ತದೆ. ಇಬ್ಬರ ಭೇಟಿಯ ಸುತ್ತ ಶರದೃತುವಿನ ಬೆಳದಿಂಗಳ ಹೊದಿಕೆಯಿದೆ. ನೆನಪಿನಿಂದ ಪ್ರೇರಿತಳಾಗಿ ಪ್ರಜ್ಞೆಯ ಆಳಕ್ಕಿಳಿದು ತನ್ನ ಬದುಕಿನಲ್ಲಿ ಅನುಭವಿಸಿದ್ದ ಕ್ಷಣಗಳನ್ನು ಮತ್ತೆ ಸೃಷ್ಟಿಸುವ ಕ್ರಮ, ಹಲವು ವರುಷಗಳ ಹಿಂದಿನ ಘಟನೆಗಳು ಮತ್ತು ಸಂಬಂಧಗಳಿಗೆ ಕೊಡುವ ಮಹತ್ವ, ಅಂಥ ಕ್ಷಣಗಳಲ್ಲಿ ನಾನು ನಿಜವಾಗಿ ಜೀವಿಸಿದ್ದೆ ಎಂಬ ಅರಿವಿನಿಂದ ಹುಟ್ಟಿದೆ. ಇಲ್ಲಿ ಲೇಖಕಿಯ ನೆನಪುಗಳು ಕತೆಯಂತೆ ಓದಿಸಿಕೊಳ್ಳುತ್ತವೆ.
‘ಹದಿನಾರರ ಜೀವನ ದರ್ಶನ’ದಲ್ಲಿ ಗ್ರಾಮ ಭಾರತದ ಪರಿಕಲ್ಪನೆಯು ಅಡಗಿದೆ. ಹೃದಯಹೀನ ಸಮಾಜದ ಭೋಗದ ಅಬ್ಬರವು ಅಂತರಂಗದ ಅಂತರ್ಜಲವನ್ನು ಬತ್ತಿಸುವ ಸಂದರ್ಭದಲ್ಲಿ ಅಧ್ಯಾಪಿಕೆಯು ವಿದ್ಯಾರ್ಥಿಯ ಕಣ್ಣಿನಲ್ಲಿ ಗ್ರಾಮಭಾರತವನ್ನು ನೋಡುತ್ತಾರೆ. ತಮ್ಮನ್ನು ಸಂದರ್ಶಿಸಲು ಬಂದ ವಿದ್ಯಾರ್ಥಿಗಳಿಗೆ ಪ್ರಶ್ನಾವಳಿಯನ್ನು ಕೊಟ್ಟು ಅವರ ಉತ್ತರಗಳ ಹಿನ್ನೆಲೆಯಲ್ಲಿ ಯುವಜನತೆಯ ಬದುಕನ್ನು ಗ್ರಹಿಸುವ ಮಾದರಿಯನ್ನು ‘ಸಂದರ್ಶಕರ ಸಂದರ್ಶನ’ದಲ್ಲಿ ಕಾಣುತ್ತೇವೆ. “ನಿಮ್ಮ ಶಿಕ್ಷಣವನ್ನು ಎಲ್ಲಿಯವರೆಗೆ ಮುಂದುವರಿಸಬೇಕೆಂದಿದ್ದೀರಿ? ಈಗ ಪಡೆಯುತ್ತಿರುವ ಶಿಕ್ಷಣ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಎಷ್ಟು ಸಹಕಾರಿ? ನಿಮ್ಮ ಬಾಳ ಗುರಿ ಏನು? ತಂದೆತಾಯಿ, ಹಿರಿಯರ ಮಾತು ಮಾರ್ಗದರ್ಶಕವೆನಿಸುತ್ತದೆಯೇ? ಮದುವೆಯಾದ ಮೇಲೆ ಅತ್ತೆ ಮಾವಂದಿರ ಜೊತೆ ಹೊಂದಾಣಿಕೆಯಿಂದ ಇರಲು ಇಷ್ಟಪಡುತ್ತೀರಾ? ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಥ ಬಾಳ ಸಂಗಾತಿ ಇರಬೇಕೆಂದು ಅಪೇಕ್ಷಿಸುತ್ತೀರಿ? ಬಯಸಿದಂಥವ ಸಿಗದಿದ್ದಾಗ ಏನು ಮಾಡುತ್ತೀರಿ? ಟಿ.ವಿ. ಸಿನೇಮಾಗಳಲ್ಲಿ ಆಸಕ್ತಿಯಿದೆಯೇ? ಸಿನೇಮಾ ಸೀರಿಯಲ್ ತಾರೆಯರು ನಿಮ್ಮ ಆದರ್ಶವೇ? ದೇಶದ, ರಾಜ್ಯದ ರಾಜಕಾರಣಿಗಳನ್ನು ತಿಳಿಯಲು, ಅವರ ಕುರಿತು ಯೋಚಿಸಲು ಬಯಸುತ್ತೀರಾ? ಓದುವ ದಿನಪತ್ರಿಕೆ, ನಿಯತಕಾಲಿಕೆಗಳು ಯಾವುವು? ದಾರಿಯಲ್ಲಿ, ಕಾಲೇಜಿನಲ್ಲಿ ಹುಡುಗರು ಚುಡಾಯಿಸಿದರೆ ಏನು ಮಾಡುತ್ತೀರಿ? ಮದುವೆಯಾಗು ಎಂದರೆ ಏನೆಂದು ಪ್ರತಿಕ್ರಿಯಿಸುತ್ತೀರಿ? ನಿಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿಸಿಕೊಳ್ಳಲು ಏನು ಮಾಡುತ್ತೀರಿ? ನಿಮ್ಮ ಹವ್ಯಾಸಗಳೇನು?” (ಪುಟ 44) ಎಂಬ ಪ್ರಶ್ನೆಗಳಲ್ಲಿ ಯುವತಿಯರ ಬದುಕನ್ನು ಕುರಿತ ಕಾಳಜಿ ಅಡಗಿದೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬರೆದ ಉತ್ತರಗಳ ಆಧಾರದಲ್ಲಿ ಅವರು ಮಂಡಿಸುವ ತೀರ್ಪುಗಾರರ ಟಿಪ್ಪಣಿಯು ಲೇಖನದ ಉಪಸಂಹಾರವಾಗಿ ಬದಲಾಗುವ ಕಥನ ತಂತ್ರವು ವಿಶಿಷ್ಟವಾಗಿದೆ.
ವಸ್ತುವೊಂದನ್ನು ನೋಡಿ ಅದಕ್ಕೆ ಸಂಬಂಧಿಸಿದ ನೆನಪುಗಳನ್ನು ಮುಂದಿಟ್ಟುಕೊಂಡು ಕತೆಯನ್ನು ಹೇಳುವ ತಂತ್ರವು ನವೋದಯದ ಅನೇಕ ಕತೆಗಳಲ್ಲಿ ಕಂಡು ಬರುತ್ತದೆ. ಉಪ್ಪಿನಕಾಯಿಯನ್ನು ನೋಡುವಾಗ ಲೇಖಕಿಗೆ ತನ್ನ ಅಜ್ಜಿಯ ನೆನಪಾಗುತ್ತದೆ. ಇಲ್ಲಿಯ ವಿಶೇಷವೆಂದರೆ ಲೇಖಕಿಯು ಶಿಷ್ಟ ಭಾಷೆಯಲ್ಲಿ ಮಾತನಾಡುವುದಿಲ್ಲ. ತನಗೆ, ತನ್ನ ಗೆಳತಿಗೆ ಮತ್ತು ಅಜ್ಜಿಗೆ ಅವರದ್ದೇ ಆದ ವ್ಯಕ್ತಿತ್ವ, ಭಾಷೆ, ಶೈಲಿಗಳನ್ನು ಕೊಟ್ಟು ಅವುಗಳ ಮೂಲಕ ಮಾತನಾಡುತ್ತಾರೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಾಸ್ತವ ಪ್ರಜ್ಞೆ, ಕರುಳಿನ ನೋವು, ಇವೆಲ್ಲ ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮವು ಮುಖ್ಯವಾಗುತ್ತದೆ. ಲೇಖಕಿಯು ದುಃಖವನ್ನು ನುಂಗಿಕೊಂಡು ಕುಳಿತುಕೊಳ್ಳುವವಳಲ್ಲ. ಅಜ್ಜಿಯ ಕತೆಯನ್ನು ಹೇಳುತ್ತಾ ಆಕೆಯು ಅಳುತ್ತಾಳೆ. ಅಳುವಿನ ಹಿಂದೆ ಕಾಣುವ ಸಂಯಮ, ತಿಳುವಳಿಕೆಗಳು ಮಹತ್ವದ್ದಾಗಿವೆ. ಇದು ಅಜ್ಜಿಯ ಕತೆ ಮಾತ್ರವಾಗಿರದೆ ಲೇಖಕಿಯ ಕತೆಯೂ ಆಗುತ್ತದೆ. ಆಕೆಯು ಅಜ್ಜಿಯ ಪಾತ್ರದ ವಿಸ್ತರಣವಾಗಿದ್ದು ಕಥನವು ಆಕೆಯ ವ್ಯಕ್ತಿತ್ವ ಮತ್ತು ಮನೋಧರ್ಮಗಳ ಅಭಿವ್ಯಕ್ತಿಗೆ ಪೂರಕವಾಗಿ ಬರುವುದರಿಂದ ಲೇಖಕಿಯು ಒಳಕತೆಯನ್ನು ಅನುಭವಿಸುವ, ನಿರೂಪಿಸುವ ಮತ್ತು ಪ್ರತಿಕ್ರಿಯಿಸುವ ವಿಧಾನವು ಮುಖ್ಯವಾಗುತ್ತದೆ.
ಅನ್ನದಾತನ ಒಡಲಾಳದ ಬೇಗೆಯು ನಮ್ಮ ದೇಶದ ದೊಡ್ಡ ಸಮಸ್ಯೆಗಳಲ್ಲೊಂದಾಗಿದ್ದು, ಕೃಷಿ ವಿಮುಖತೆ, ಬೇಸಾಯವನ್ನು ತೊರೆಯುವ ಯುವಜನತೆಯ ಪ್ರವೃತ್ತಿಯು ಬೇಸಾಯದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸರಕಾರವು ಕೈಗೊಳ್ಳುವ ಸಾಲಮನ್ನಾದಂಥ ತಾತ್ಕಾಲಿಕ ಕ್ರಮಗಳು ಬದುಕಿನ ಭರವಸೆಯನ್ನು ಕಳೆದುಕೊಂಡ ಸಮಸ್ಯೆಯ ಬೇರನ್ನು ಸ್ಪರ್ಶಿಸಲಾರದು. ಸಮಾಜ ಮತ್ತು ಸರಕಾರವು ಸರಿಯಾದ ರೀತಿಯಲ್ಲಿ ಯೋಚಿಸದಿರುವುದರಿಂದ ಕಷ್ಟ ಸಹಿಷ್ಣುಗಳಾದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ‘ಅಮೇರಿಕಾದ ಕೃಷಿ ಮಾರ್ಕೆಟ್ಟುಗಳು’ ಎಂಬ ಲೇಖನವು ಈ ಸಮಸ್ಯೆಗೆ ಪರ್ಯಾಯ ಮಾರ್ಗವನ್ನು ಹುಡುಕುತ್ತದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಹೋಜೆಯಲ್ಲಿ ಕೃಷಿಕರು ತಾವೇ ಬೆಳೆಸಿದ ಕೃಷಿ ಉತ್ಪನ್ನಗಳನ್ನು ದಲ್ಲಾಳಿಗಳ ನೆರವಿಲ್ಲದೆ ಮಾರುತ್ತಾರೆ. “ನಮ್ಮ ರೈತರು ಸಂಘಟನೆಗೊಂಡು ತಮ್ಮ ಉತ್ಪನ್ನಗಳನ್ನು ನೇರವಾಗಿ ಏಕೆ ಮಾರಬಾರದು? ಇವರಿಗೆ ದಲ್ಲಾಳಿಗಳ ಅಗತ್ಯವಾದರೂ ಏನು? ಎಲ್ಲವನ್ನು ಕಡಿಮೆ ಬೆಲೆಗೆ ಮಾರಿ ಗೋಳಾಡುವುದೇಕೆ? ಪ್ರತಿಯೊಂದು ಗ್ರಾಮದವರು ಕೂಡಿಕೊಂಡು ಪಟ್ಟಣದಲ್ಲಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗಾಗಿ ನಗರಪಾಲಿಕೆಯವರು ಅಂಗಡಿಗಳನ್ನು ಕಟ್ಟಿ ಕಡಿಮೆ ಬಾಡಿಗೆಗೆ ಕೊಟ್ಟು ಏಕೆ ಪ್ರೋತ್ಸಾಹಿಸಬಾರದು?” (ಪುಟ 28) ಎಂಬ ಪ್ರಶ್ನೆಗಳು ರೈತ ಪರ ಕಾಳಜಿ, ಮಾದರಿಯನ್ನು ಮುಂದಿಡುವುದರೊಂದಿಗೆ ಹೊಸ ರೀತಿಯ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ‘ಮುಗಿಯದ ಟೊಮೆಟೋ ರಾಮಾಯಣ’ವು ಈ ಸಮಸ್ಯೆಯ ಇನ್ನೊಂದು ಮಗ್ಗುಲನ್ನು ತೆರೆದಿಡುತ್ತದೆ. ಧಾರವಾಡದ ಮಾರುಕಟ್ಟೆಯಲ್ಲಿ ರೈತನು ಬೆಳೆದ ಟೊಮೆಟೊಗಳನ್ನು ಯಾರೂ ಕೊಳ್ಳುವವರಿಲ್ಲ. ಆದ್ದರಿಂದ ಆತನು ಲೇಖಕಿಗೆ ಟೊಮೆಟೊಗಳನ್ನು ಉಚಿತವಾಗಿ ಕೊಡುತ್ತಾನೆ. ಆಕೆಯು ಒತ್ತಾಯದಿಂದ ನೀಡಿದ ಇನ್ನೂರು ರೂಪಾಯಿಗಳನ್ನು ಹಿಂತಿರುಗಿಸುತ್ತಾನೆ. ಅದೆಷ್ಟು ಖಾದ್ಯಗಳನ್ನು ಮಾಡಿದರೂ ಟೊಮೆಟೋ ಮುಗಿಯುವುದಿಲ್ಲ. ಕೊಳೆತ ಟೊಮೆಟೊಗಳನ್ನು ಎಸೆದರೆ ಅವುಗಳು ಗಿಡಗಳಾಗಿ ಕಂಗೊಳಿಸುತ್ತವೆ. ಒಂದು ಕಡೆ ನಾಶ, ಇನ್ನೊಂದು ಕಡೆ ಹುಟ್ಟು. ಜೀವವೈವಿಧ್ಯಗಳನ್ನು ಒಳಗೊಂಡು ಬೆಳೆಯುತ್ತಲೇ ಹೋಗುವ ವಿಸ್ಮಯಕಾರಿ ವಿಶ್ವಕ್ಕೆ ನಾಶ ಎಂಬುದಿಲ್ಲ, ಆದಿ ಅಂತ್ಯಗಳೂ ಇಲ್ಲ ಎಂಬುದನ್ನು ಸೂಚಿಸುತ್ತದೆ. ‘ನೀ ಕೊಟ್ಟದ್ದನ್ನು ಹಾಳು ಮಾಡಿಲ್ಲ, ಬೆಳೆದಿದ್ದೇನೆ’ ಎಂದು ಬಡ ರೈತನನ್ನು ಮನದಲ್ಲೇ ನೆನೆಯುವ, ಮುಗಿಲಲ್ಲಿ ಹಾರುವ ಬೆಳ್ಳಕ್ಕಿ ಹಿಂಡನ್ನು ಕಂಡು ‘ನನ್ನ ಕೃತಜ್ಞತಾ ರೂಪದ ಹಕ್ಕಿಗಳು ಬಡ ರೈತನೆಡೆಗೆ ಹೊರಟಿವೆ’ ಎಂದುಕೊಳ್ಳುವಲ್ಲಿ ರೈತಪರ ಕಾಳಜಿಯು ಸೂಚ್ಯವಾಗಿ ಕಾಣಿಸಿಕೊಳ್ಳುತ್ತದೆ.
‘ಕಣ್ಮನ ಸೆಳೆಯುವ ಕಲೆಗಳ ಊರು ಕಾರ್ಮೆಲ್’ ಎಂಬ ಲೇಖನವು ಕಾರ್ಮೆಲ್ ಎಂಬ ಊರಿನ ಕಲೆ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಸಾರುತ್ತದೆ. ವರ್ಷಪೂರ್ತಿ ಆಯೋಜಿಸುವ ಕಾರ್ಯಕ್ರಮಗಳು ಆ ಪಟ್ಟಣದ ಅಭಿವೃದ್ಧಿ ಮಂಡಳಿಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಚಿತ್ರಕಲಾ ಪ್ರದರ್ಶನ, ವಿಶ್ವಪ್ರಸಿದ್ಧ ನಾಟಕಗಳ ಪ್ರದರ್ಶನ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳೂ ಸೇರಿದಂತೆ ವರ್ಷವಿಡೀ ಕಲಾಭಿವ್ಯಕ್ತಿಯ ಕೂಟಗಳು ರೂಪುಗೊಳ್ಳುತ್ತವೆ. ಭಾರತದಲ್ಲೂ ಇದು ಸಾಧ್ಯವಾಗಬೇಕು ಎನ್ನುವ ಲೇಖಕಿಗೆ ಇಲ್ಲಿನ ಪ್ರತಿಕೂಲ ಪರಿಸ್ಥಿತಿಯ ಅರಿವಿದೆ. ಅಮೇರಿಕದ ಕಲಾವಿದರಂತೆ ಭಾರತದ ಕಲಾವಿದರು ಹಣವಂತರಲ್ಲ. ಆದ್ದರಿಂದ ಶ್ರೀಮಂತ ಉದ್ಯಮಿಗಳು ಬಂಡವಾಳವನ್ನು ಹೂಡುವ ಮೂಲಕ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಸಲಹೆಯನ್ನು ನೀಡುತ್ತಾರೆ.
‘ಒಂದು ಕಾಡಿನ ಕನಸು ಕಂಡೆ’ ಎಂಬ ಲೇಖನವು ಆರ್ಮ್ ಸ್ಟ್ರಾಂಗ್ ರೆಡ್ವುಡ್ ರಿಸರ್ವ್ ಫಾರೆಸ್ಟನ್ನು ವಿಸ್ತಾರವಾಗಿ ಬಣ್ಣಿಸಿದರೆ ‘ಪ್ರಕೃತಿಯನ್ನೇ ಗುರುವೆಂದು ಸ್ವೀಕರಿಸಿದ ಕಾನನ ಶಾಲೆ’ಯು ಕಾಡಿನ ಬಣ್ಣನೆಯಲ್ಲಿ ಕಳೆದು ಹೋಗದೆ ಸೃಜನಶೀಲತೆಗೆ ವರವಾಗುವ ಬಗೆಯನ್ನು ತಿಳಿಸುತ್ತದೆ. “ಕಾಡಿನಿಂದ ಸೃಜನಶೀಲತೆಗೆ ಪ್ರೇರಣೆ ಸಿಗುತ್ತದೆ. ಆಧುನಿಕ ನಾಗರಿಕ ಬದುಕಿನ ಸಮಸ್ಯೆಗಳಿಗೆ ಪರಿಹಾರವಿರುತ್ತದೆ. ಕುತೂಹಲ, ಸೌಂದರ್ಯ ಪ್ರಜ್ಞೆ ಮತ್ತು ವಿವೇಚನಶಕ್ತಿಯನ್ನು ಜಾಗೃತಗೊಳಿಸುತ್ತದೆ. ಮನಸ್ಸಿನ ಏಕಾಗ್ರತೆಗೆ ಸಹಾಯ ಮಾಡುತ್ತವೆ. ಪ್ರಕೃತಿಯ ಜೀವಕೋಟಿಯ ಜೊತೆ ಸಂಬಂಧವನ್ನು ಬೆಸೆಯುತ್ತದೆ. ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.” (ಪುಟ 39) ಪುಸ್ತಕಗಳಿಂದ ಸಿಗುವ ಮಾಹಿತಿಯೊಂದಿಗೆ ಪ್ರಕೃತಿಯ ರೂಪಗಳಾದ ನದಿ, ಸರೋವರ, ಹಳ್ಳ ಹೊಳೆಗಳ ಪ್ರತ್ಯಕ್ಷ ದರ್ಶನವನ್ನು ಮಾಡಿಸುವ ಯೋಜನೆಯು ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇಂಥ ಪ್ರಕ್ರಿಯೆಗಳು ಭಾರತದಲ್ಲೂ ಅಸ್ತಿತ್ವಕ್ಕೆ ಬರಬೇಕೆಂಬ ಆಶಯವು ವ್ಯಕ್ತವಾಗುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋದ ವಸ್ತು ಸಂಗ್ರಹಾಲಯದಲ್ಲಿನ ನೀಲ ತಿಮಿಂಗಿಲದ ಕಲಾಕೃತಿಯನ್ನು ಕಡಲಿನಿಂದ ಹೊರತೆಗೆದ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಲಾಗಿದೆ. ತಿಮಿಂಗಿಲಗಳ ಜೀವವನ್ನು ಆಹುತಿ ತೆಗೆದುಕೊಂಡ ಪ್ಲಾಸ್ಟಿಕ್ ಭೂಮಿಯ ಚರಾಚರಗಳನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸುವ ‘ಆಧುನಿಕ ಯುಗದ ರಕ್ಕಸ ಪ್ಲಾಸ್ಟಿಕ್’ ಜೀವನಾಶದ ಪ್ರತೀಕವಾಗಿ ಗಮನ ಸೆಳೆಯುತ್ತದೆ. ‘ಮಲೇಷ್ಯಾದ ತಾಳೆ ಉದ್ಯಮಕ್ಕೆ ಶತಮಾನೋತ್ಸವದ ಸಂಭ್ರಮ 2018’ ತಾಳೆ ಉದ್ಯಮದ ಇತಿಹಾಸವನ್ನು ವಿವರಿಸುತ್ತದೆ. ಜೋನ್ ಆಫ್ ಆರ್ಕ್’ ಫ್ರಾನ್ಸಿನಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಬೆಳಗಿದ ಯುವತಿಯ ಕತೆಯನ್ನು ಹೇಳಿದರೆ ‘ಬಂಗಾರದ ಕಾಡುಜಿಂಕೆ ಹಿಮಾದಾಸ್’ ಬದುಕಿನ ಕಷ್ಟಕಾರ್ಪಣ್ಯಗಳಲ್ಲಿ ನೊಂದು ಕ್ರೀಡಾಪಟುವಾದ ಹುಡುಗಿಯ ಸಾಧನೆಯ ಕಡೆಗೆ ಬೆಳಕು ಚೆಲ್ಲುತ್ತದೆ. ‘ಎಂದೂ ಮರೆಯಲಾಗದ ಸ್ವಾತಂತ್ರ್ಯ ದೇವಿಯ ಮೂರ್ತಿ’ಯು ಅಮೇರಿಕದ ಪ್ರತಿಮೆಯ ಭವ್ಯತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದರೊಂದಿಗೆ ಅದನ್ನು ನಿರ್ಮಿಸಿದ ಫ್ರೆಡರಿಕ್ ಅಗಸ್ತೆ ಬಾರ್ಡೋಲಿಯನ್ನು ವಿಶೇಷವಾಗಿ ನೆನೆಯುತ್ತದೆ.
‘ಶ್ರಾವಣ ಸೋಮೇಶ್ವರನಿಗೊಂದು ನಮನ’ವು ಧಾರವಾಡದ ಸೋಮೇಶ್ವರ ಮಂದಿರದ ಪರಿಚಯಾತ್ಮಕ ಟಿಪ್ಪಣಿಯನ್ನು ಒದಗಿಸಿದರೆ ‘ಕೃಷಿಕರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ’ಯು ಆ ಊರಿನ ಗ್ರಾಮೀಣ ಹಬ್ಬದ ಪರಂಪರೆಯ ಸತ್ವ ಮತ್ತು ಸಂಭ್ರಮಾಚರಣೆಗಳನ್ನು ಬಿಚ್ಚಿಡುತ್ತದೆ. ನಾವೆಲ್ಲರೂ ಪ್ರಕೃತಿಯ ಕುಟುಂಬಕ್ಕೆ ಸೇರಿದವರು. ಗಿಡಮರ, ಪಶುಪಕ್ಷಿ ಮತ್ತು ಮನುಷ್ಯರು ಒಂದೇ ಸೂತ್ರಕ್ಕೆ ಒಳಪಟ್ಟವರು. ಮಣ್ಣೆತ್ತಿನ ಅಮಾವಾಸ್ಯೆಯು ಆ ನಂಬಿಕೆಯ ಭಾಗವಾಗಿದೆ. “ಮೃಗಶಿರ ಮಳೆ ತರುವ ಕಪ್ಪು ಮೋಡಗಳ ಮರೆಗೆ ಚೆಲ್ಲಾಟ ಆಡುವ ಚಂದ್ರನ ಕಾರಹುಣ್ಣಿಮೆಯ ಬೆನ್ನಿಗೆ ಹತ್ತಿಕೊಂಡು ಬರುವ ಅಮಾವಾಸ್ಯೆಯೇ ಮಣ್ಣೆತ್ತಿನ ಅಮಾವಾಸ್ಯೆ. ಮಣ್ಣಲ್ಲಿ ಮಣ್ಣಾಗಿ ದುಡಿಯಬೇಕಾದ ತನ್ನ ಬದುಕಿಗೆ ಹೆಗಲುಕೊಟ್ಟು ದುಡಿಯುವ ಎತ್ತುಗಳನ್ನು ಕೃಷಿಕರು ತಮ್ಮ ಪರಮ ದೈವವೆಂಬಂತೆ ಪೂಜಿಸುತ್ತಾರೆ. ಕಾರಹುಣ್ಣಿಮೆಯಲ್ಲಿ ಎತ್ತುಗಳನ್ನು ಶೃಂಗರಿಸಿ, ಕೋಡಿಗೆ ಬಣ್ಣ ಬಳಿದು, ಕೋಡುಬಳೆ ತೊಡಿಸಿ ಮೆರೆಸಿದ ಮೇಲೂ ತೀರದು ಪ್ರೀತಿ ಎಂಬಂತೆ ಮಣ್ಣೆತ್ತಿನ ಅಮಾವಾಸ್ಯೆಯ ದಿನ ಭೂದೇವಿಯ ಮೈಮಣ್ಣಿನಲ್ಲಿ ಮಾಡಿದ ಬಸವಣ್ಣನ ಪೂಜೆಯಾಗುತ್ತದೆ” (ಪುಟ 118) ಎಂಬ ಸಾಲುಗಳು ಕಾವ್ಯಾತ್ಮಕತೆಯಿಂದ ಕೂಡಿವೆ. ಯುವ ಜನಾಂಗವು ಇಂಥ ಹಬ್ಬಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಧ್ವನಿಸುವುದರಲ್ಲಿ ಲೇಖನವು ಯಶಸ್ವಿಯಾಗಿದೆ.
ಲೇಖಕಿಯ ದಿನಚರಿಯ ಭಾಗದಂತಿರುವ ‘ಈ ಧಗೆಯನ್ನು ಕಳೆವ ನನ್ನ ಬಗೆ ಬಗೆ’ಯು ಸೊಗಸಾದ ಲಲಿತ ಪ್ರಬಂಧವಾಗಿದ್ದು ಬೇಸಗೆ ಕಾಲದ ಸೆಕೆಯ ಅನುಭವವನ್ನು ವಿವರಿಸಿದರೆ ‘ಮಾವುಮಯವೀ ಮನ’ದಲ್ಲಿ ಬೇಸಿಗೆಯು ಅವರಿಗೆ ಚೇತೋಹಾರಿಯಾಗಿ ಪರಿಣಮಿಸಿದೆ. ‘ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ’ ಎಂಬ ಲೇಖನದಲ್ಲಿ ಧಾರವಾಡದ ಸಾಹಿತ್ಯಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಟ್ಟಿಕೊಡುವುದರೊಂದಿಗೆ ಧಾರವಾಡವು ಪ್ರಗತಿ ಪಥದತ್ತ ಹೆಜ್ಜೆಯಿಡಲಿಲ್ಲ ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ. ಆದರೆ ಪ್ರಗತಿಯ ಸ್ವರೂಪವೇನು ಎಂದು ಸ್ಪಷ್ಟವಾಗುವುದಿಲ್ಲ.
ನಮ್ಮ ಹಿರಿಯರು ಕನ್ನಡ ನಾಡು ನುಡಿಯನ್ನು ಕಟ್ಟಿ ಬೆಳೆಸಿದ್ದಾರೆ. ಈ ಕೆಲಸವನ್ನು ಇಂದಿನವರು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಭಾಷೆ ಸಾಹಿತ್ಯಗಳ ಅಭಿವೃದ್ಧಿಗಾಗಿ, ಕನ್ನಡ ನಾಡಿನ ಸರ್ವತೋಮುಖ ಬೆಳವಣಿಗೆಗಾಗಿ ನಾವೆಲ್ಲರೂ ದುಡಿಯಬೇಕಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ‘ಇಂಥದ್ದೊಂದು ಸಾಹಿತ್ಯಕ ಕಾರ್ಯಕ್ರಮ’ವು ಸಾಹಿತ್ಯಗೋಷ್ಠಿಯ ಅಧ್ಯಕ್ಷರಾಗಿ ಹೋದ ಲೇಖಕಿಯು ಅಲ್ಲಿನ ಸಂಘಟಕರ ವರ್ತನೆಯಿಂದಾಗಿ ಪೇಚಿಗೊಳಗಾದ ಪ್ರಸಂಗವನ್ನು ಹಾಸ್ಯಮಯವಾಗಿ ವಿಡಂಬಿಸಿದಂತೆ ಭಾಸವಾಗುತ್ತಿದ್ದರೂ ಸಾಹಿತ್ಯಕ ಕಾರ್ಯಕ್ರಮಗಳು ನಿರ್ದಿಷ್ಟ ವ್ಯಕ್ತಿಗಳ ಸ್ವಪ್ರತಿಷ್ಠೆಯನ್ನು ಮೆರೆಸುವ ವೇದಿಕೆಯಾಗುತ್ತಿರುವುದರ ಬಗ್ಗೆ ಕೋಪ ಮತ್ತು ವಿಷಾದವನ್ನು ವ್ಯಕ್ತಪಡಿಸುತ್ತದೆ. ಸಂಘಟಕರು ಲೇಖಕಿಯನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರೂ ಅವರ ಬಗ್ಗೆ ಕಿಂಚಿತ್ತೂ ಪರಿಚಯವಿಲ್ಲದ, ಸಾಹಿತ್ಯಕೃತಿಗಳನ್ನು ಓದದ ಸ್ವಯಂಸೇವಕಿಯರು ಸಾಹಿತ್ಯಸೇವೆಯ ಬದಲು, ತಮ್ಮ ಉಡುಗೆ ತೊಡುಗೆ, ಗೌಜಿ ಗದ್ದಲಗಳಿಗಷ್ಟೇ ಪ್ರಾಮುಖ್ಯತೆ ಕೊಟ್ಟುಕೊಂಡು ಸಾಹಿತ್ಯಕ್ಕೆ ಕಂಟಕಪಾಯರಾಗುತ್ತಾರೆ. ಭಾವನಾತ್ಮಕವಾಗಿರಬೇಕಾದ ಜಾಗದಲ್ಲಿ ವ್ಯಾವಹಾರಿಕತೆ, ಯಾಂತ್ರಿಕತೆ, ಪ್ರದರ್ಶನಪ್ರಿಯತೆ ತಲೆಯೆತ್ತುತ್ತದೆ. ಭಾಷೆ ಬೆಳೆಯದೆ ಜನ ಬೆಳೆಯುವುದಿಲ್ಲ. ಭಾಷೆ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳದ ಜನಾಂಗ ತನ್ನ ಆಂತರಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆ. ಅಂಥ ಜನಾಂಗದ ಹೊರ ಬದುಕು ಬೆಳೆದರೂ ಒಳಬದುಕು ಬರಡಾಗುತ್ತದೆ ಎಂಬ ನಿಲುವು ಇಲ್ಲಿದೆ.
ಈ ಪ್ರಬಂಧಗಳಲ್ಲಿ ನಾಲ್ಕು ಜಗತ್ತುಗಳಿವೆ. ಹಳ್ಳಿಯ ಜಗತ್ತು, ಆಧುನಿಕ ನಗರವಾಸಿಗಳ ಜಗತ್ತು, ಅಲ್ಲಿ ವಾಸಿಸುವ ಜನರ ಇಂದಿನ ಹಿಂದಿನ ಜಗತ್ತು. ಲೇಖಕಿಯ ಪ್ರಜ್ಞೆಯಲ್ಲಿ ಈ ಜಗತ್ತು ಅರಳಿದೆ. ಈ ಪಯಣದ ಸಾರಥಿಯಾಗಿರುವ ಲೇಖಕಿ ಆಧುನಿಕ, ವಿದ್ಯಾವಂತ ಮತ್ತು ಚಿಂತನಶೀಲರಾಗಿರುವುದರಿಂದ ಭಾವತೀವ್ರತೆ, ಕನಸುಗಾರಿಕೆ ಮಾತ್ರವಲ್ಲದೆ ಬೌದ್ಧಿಕ ಪ್ರತಿಕ್ರಿಯೆಯೂ ಮುಖ್ಯವಾಗುತ್ತದೆ. ಹತ್ತು ಹಲವು ವಿಚಾರಗಳು ಬಂದಿದ್ದರೂ ಅವುಗಳು ಚದುರಿ ಹೋಗಿಲ್ಲ. ಆದರೆ ಬೇರೆ ಬೇರೆ ನಿಟ್ಟಿನಲ್ಲಿ ಯೋಚನೆಗಳು ಸ್ಫುರಿಸಿದರೂ ಅವುಗಳು ಒಂದೇ ಕಡೆಯಲ್ಲಿ ಸೇರಿ ಬೌದ್ಧಿಕ ಮೂಲದ ಸ್ವರೂಪವನ್ನು ಪಡೆಯುವುದಿಲ್ಲ. ಇದರಲ್ಲಿ ಲೇಖಕಿಯ ವೈಯಕ್ತಿಕ ವಿಚಾರಗಳಿದ್ದರೂ ಅವುಗಳು ನೆನಪುಗಳ ಸರಮಾಲೆಯಾಗಿರುವುದರಿಂದ ಆತ್ಮವೃತ್ತಾಂತವೆನಿಸಿಕೊಳ್ಳುವುದಿಲ್ಲ. ಲೇಖಕಿಯ ದೃಷ್ಟಿಕೋನದಲ್ಲಿ ಹಲವು ಸಾಮ್ಯಗಳಿದ್ದರೂ ವೈವಿಧ್ಯತೆಯಿದೆ. ಎಲ್ಲ ಭಾವಗಳು ಸೇರಿ ಒಂದು ಜಗತ್ತಿನ ಕಲ್ಪನೆಯು ಮೂಡುತ್ತದೆ.
ಈ ಕೃತಿಯಲ್ಲಿ ಭಾವಪ್ರಧಾನ, ವ್ಯಕ್ತಿಚಿತ್ರ, ಪ್ರವಾಸ, ಹರಟೆ, ವೈಚಾರಿಕ ಪ್ರಬಂಧಗಳಿವೆ. ಅವುಗಳಲ್ಲಿ ಕೆಲವು ಲಘುವಾದರೆ ಇನ್ನು ಕೆಲವು ಗಂಭೀರ ರಚನೆಗಳಾಗಿವೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಆಧುನಿಕ ಸಮಾಜದ ಭಾವನಾತ್ಮಕ ತಳಮಳಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ. ಎಲ್ಲ ರಚನೆಗಳು ಲಲಿತ ಪ್ರಬಂಧವಲ್ಲದಿದ್ದರೂ ಅವುಗಳು ಲಲಿತ ಪ್ರಬಂಧಕಾರರ ವಿಶಿಷ್ಟ ವ್ಯಕ್ತಿತ್ವದಿಂದ ಮೂಡಿ ಬಂದಿದ್ದು, ಉತ್ತಮ ಪುರುಷದಲ್ಲಿ ಮಾತನಾಡುತ್ತಿದ್ದರೂ ಅಹಂಕಾರಕ್ಕೆ ಕಟ್ಟುಬೀಳದೆ ಸಾಧಾರಣೀಕರಣವನ್ನು ಸಾಧಿಸುತ್ತವೆ. ಗಂಭೀರ ಚಿಂತನೆಯನ್ನು ಅತಿ ಗಂಭೀರ ನಿರೂಪಣೆಯಿಂದ ಭಾರಗೊಳಿಸದೆ ಹಗುರತ್ವವನ್ನು ನೀಡುವ ಲವಲವಿಕೆಯಿದೆ. ಆಪ್ತವಾಗಿ ಓದಿಸುತ್ತಾ ಹೋಗುವ ಲೇಖನಗಳಲ್ಲಿ ವೈಚಾರಿಕ ದ್ವಂದ್ವ, ಗೊಂದಲಗಳಿಲ್ಲ. ವಿಷಯವನ್ನು ಹಲವು ದೃಷ್ಟಿಕೋನದಿಂದ ಅವಲೋಕಿಸುವ, ನಿರ್ಧಾರಕ್ಕೆ ಬರುವ ಮುನ್ನ ವಿಷಯದ ಮಗ್ಗುಲುಗಳನ್ನು ಗುರುತಿಸುವ ಮನಸ್ಸನ್ನು ಕಾಣುತ್ತೇವೆ. ಸ್ಪಷ್ಟವಾದ ಚಿಂತನೆಯೊಂದಿಗೆ ಹೊಸ ನೋಟಗಳನ್ನು ಒದಗಿಸುವ ಪ್ರಬಂಧಗಳಲ್ಲಿ ಕಂಡುಬರುವ ಮೃದುಹಾಸ್ಯ, ವ್ಯಂಗ್ಯ, ವಿಡಂಬನೆಗಳು ಓದನ್ನು ಸರಾಗಗೊಳಿಸುತ್ತವೆ. ಸಮಕಾಲೀನ ಸಮಾಜದ ಆಗುಹೋಗುಗಳಲ್ಲಿ ಆಸಕ್ತಿಯನ್ನು ಹೊಂದಿರುವ ಮತ್ತು ಅವುಗಳಿಗೆ ಸ್ಪಂದಿಸುವ ಲೇಖಕಿಯ ಜೀವನ ಪ್ರೀತಿ, ಚಿಂತನಶೀಲತೆ, ತೆಳುಹಾಸ್ಯ, ಪ್ರಶ್ನಿಸುವ ಮನೋಭಾವ ಮತ್ತು ಸಾಮಾಜಿಕ ಪ್ರಜ್ಞೆಯು ಅವರನ್ನು ಇಂದಿಗೂ ಪ್ರಸ್ತುತವೆನಿಸುವಂತೆ ಮಾಡುತ್ತದೆ.

ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

ಲೇಖಕಿ : ಮಾಲತಿ ಪಟ್ಟಣಶೆಟ್ಟಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು), ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ), ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ), ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ), ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು, ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.
