ಕಳೆದ ಸುಮಾರು ಏಳೆಂಟು ವರ್ಷಗಳಿಂದ ಪತ್ರಿಕೆಗಳಲ್ಲೂ ನಿಯತಕಾಲಿಕಗಳಲ್ಲೂ ಜಾಲತಾಣಗಳಲ್ಲೂ ನಿರಂತರವಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಲೇಖನಗಳನ್ನು ಬರೆಯುತ್ತಿದ್ದ ನರೇಂದ್ರ ಎಸ್. ಗಂಗೊಳ್ಳಿಯವರ ಆರನೇ ಕೃತಿ ‘ಅವಳ ನಿಟ್ಟುಸಿರು’ ಎಂಬ ಈ ಲೇಖನ ಸಂಕಲನ. ಸಾಮಾಜಿಕ ಕಾಳಜಿ ಹೊಂದಿರುವ ವಸ್ತುಗಳ ಮೇಲೆ ಬರೆದ 50 ಲೇಖನಗಳು ಇದರಲ್ಲಿವೆ. ಆಯ್ದುಕೊಂಡ ವಸ್ತುಗಳ ಬಗ್ಗೆ ಎಲ್ಲ ವಿವರಗಳನ್ನೂ ಪರಾಮರ್ಶನ ಗ್ರಂಥಗಳಿಂದಲೂ ಪತ್ರಿಕೆಗಳಿಂದಲೂ ಜಾಲತಾಣಗಳಿಂದಲೂ ಕೂಲಂಕುಶವಾಗಿ ಅಧ್ಯಯನ ಮಾಡಿ ಚಿಂತನೆ ನಡೆಸಿ ಅಚ್ಚುಕಟ್ಟಾಗಿ ಪೋಣಿಸಿ ಬರೆದ ಈ ಲೇಖನಗಳ ಓದು ಖುಷಿಯನ್ನೂ ಮಾಹಿತಿಗಳನ್ನೂ ನೀಡುವುದರೊಂದಿಗೆ ಕುತೂಹಲವನ್ನೂ ತಣಿಸುತ್ತವೆ, ಚಿಂತನೆಗೂ ಹಚ್ಚುತ್ತವೆ. ಮುಖ್ಯವಾಗಿ ಇಲ್ಲಿನ ಕೆಲವು ಲೇಖನಗಳು ನರೇಂದ್ರ ಅವರ ಅದ್ಭುತ ಸ್ತ್ರೀ ಸಂವೇದನೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ‘ನಮ್ಮನೆ ಮಗಳು ವೇಶ್ಯಾವೃತ್ತಿ ಅಯ್ದುಕೊಂಡರೆ’ ಅನ್ನುವ ಲೇಖನದಲ್ಲಿ ಪುರುಷರು ಇತಿಹಾಸ ಕಾಲದಿಂದಲೂ ತಮ್ಮ ಲೈಂಗಿಕ ಹಸಿವನ್ನು ತೀರಿಸಿಕೊಳ್ಳಲು ಹೆಣ್ಣನ್ನು ಹೇಗೆ ಸಾಧನವಾಗಿ ಬಳಸಿಕೊಳ್ಳುತ್ತ ಬಂದರು ಮತ್ತು ಬಳಸಿದ ವಸ್ತುವನ್ನು ಎಸೆಯುವಂತೆ ಸಮಾಜದಲ್ಲಿ ಅವಳಿಗೆ ಯಾವುದೇ ಗೌರವ ಕೊಡದೆ ವೇಶ್ಯೆಯೆಂದು ಕರೆದು ತಾತ್ಸಾರದಿಂದ ಕಂಡರು ಅನ್ನುವುದನ್ನು ವಿವರಿಸುತ್ತ ಇಂದು ವೇಶ್ಯಾವಾಟಿಕೆಯನ್ನು ಕಾನೂನುಬದ್ಧವಾಗಿಸಬೇಕು ಅನ್ನುವ ಕೆಲವರ ಕೂಗಿನ ಬಗ್ಗೆ ಮಾತನಾಡುತ್ತಾರೆ. ಆದರೆ ಅದರಿಂದ ಆ ವೃತ್ತಿಗೆ ದೂಡಲ್ಪಟ್ಟು ನರಕ ಅನುಭವಿಸಿದವರಿಗೆ ಬಿಡುಗಡೆ ಖಂಡಿತಾ ಸಿಗಲಾರದು. ಪುರುಷನ ಲೈಂಗಿಕ ಬಯಕೆಗಳಿಂದಾಗಿ ಅಲ್ಲಲ್ಲಿ ಆಗಾಗ ಸಂಭವಿಸುವ ಲೈಂಗಿಕ ಅತ್ಯಾಚಾರಗಳು ಕಡಿಮೆಯಾದಾವು ಎಂದು ಹೇಳುವುದರಲ್ಲೂ ಅರ್ಥವಲ್ಲ. ಯಾಕೆಂದರೆ ಅತ್ಯಾಚಾರದ ಮೂಲಕ ಸಾಬೀತುಗೊಳ್ಳುವುದು ಲೈಂಗಿಕ ಬಯಕೆ ಅಲ್ಲ, ಬದಲಾಗಿ ಲೈಂಗಿಕ ವಿಕೃತಿ. ಈ ರೋಗಕ್ಕೆ ಪರಿಹಾರ ಮಾನಸಿಕ ಪರಿವರ್ತನೆ ಮಾತ್ರ. ಪುರುಷನ ಲೈಂಗಿಕ ಬಯಕೆಗಳನ್ನು ಪೂರೈಸಲು ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿದರೆ ಅದು ಸ್ತ್ರೀಪುರುಷರ ನಡುವೆ ತಾರತಮ್ಯ ಮಾಡಿದಂತಾಗುವುದಿಲ್ಲವೆ? ಯಾಕೆಂದರೆ ಪ್ರಕೃತಿ ಸಹಜವಾಗಿ ಲೈಂಗಿಕ ಬಯಕೆ ಸ್ತ್ರೀಯರಲ್ಲೂ ಇರುವುದಿಲ್ಲವೆ? ಮುಂದೆ ಅವರಿಗೂ ಪುರುಷ ವೇಶ್ಯೆಯರು ಸಿಗುವಂತೆ ಕಾನೂನು ಬದ್ಧ ವ್ಯವಸ್ಥೆ ಮಾಡಲಾಗುವುದೇ ಎಂಬಿತ್ಯಾದಿಯಾಗಿ ಪ್ರಶ್ನಿಸುತ್ತಾರೆ ಲೇಖಕರು. ಇಂದು ಶಾಲೆಗಳಲ್ಲಿ ವೇಶ್ಯೆಯರ ಮಕ್ಕಳನ್ನು ಗೇಲಿ ಮಾಡುವುದು, ನಿರ್ಲಕ್ಷ್ಯ ಮಾಡುವುದು, ತಾತ್ಸಾರ ಮಾಡುವುದು ನಡೆಯುತ್ತಿದೆಯಲ್ಲ, ಇದಕ್ಕೇನು ಪರಿಹಾರ ಎಂದು ಕೇಳುತ್ತಾರೆ. ವೇಶ್ಯಾವೃತ್ತಿಯನ್ನು ಕಾನೂನು ಬದ್ಧವಾಗಿಸಿದರೆ ನೀವು ನಿಮ್ಮ ಮಗಳನ್ನು ವೇಶ್ಯಾವೃತ್ತಿಗೆ ಕಳುಹಿಸುತ್ತೀರಾ ಎಂದು ಕೇಳುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಉತ್ತರ ಸಮಾಜದಲ್ಲಿ ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಮತ್ತು ಅದಕ್ಕೆ ಬೇಕಾದ ಮಾನಸಿಕ ಸಿದ್ದತೆಗಳನ್ನು ಮಾಡುವುದು ಅನ್ನುತ್ತಾರೆ. ಇದು ಒಂದು ಅತ್ಯಂತ ಮೌಲಿಕವಾದ ಚಿಂತನೆ.
ಇನ್ನೊಂದು – ಶೀರ್ಷಿಕೆಯ ಹೆಸರಿನ ಲೇಖನ ‘ಅವಳ ನಿಟ್ಟುಸಿರು’ ವರದಕ್ಷಿಣೆಯ ಮೂಲಕ ಹೆಣ್ಣಿನ ಶೋಷಣೆಯ ಕುರಿತಾದದ್ದು. ಇದು ಇಂದು ನಿನ್ನೆಯದಲ್ಲ. ಹಲವು ಕಾಲದಿಂದ ಹೆಣ್ಣುಮಕ್ಕಳ ತಂದೆ ತಾಯಂದಿರ ಕರುಳು ಹಿಂಡಿದ ವಿಚಾರವಿದು. ಲಕ್ಷಗಟ್ಟಲೆ ವರದಕ್ಷಿಣೆ ತೆಗೆದುಕೊಂಡ ನಂತರವೂ ಹೆಂಡತಿಯನ್ನು ವರದಕ್ಷಿಣೆಗಾಗಿ ಪೀಡಿಸುವ ಮತ್ತು ದೌರ್ಜನ್ಯ ನಡೆಸುವ ಗಂಡ-ಅತ್ತೆ-ಮಾವಂದಿರು ಎಷ್ಟು ಮಂದಿಯಿಲ್ಲ? ಅವರು ಹಾಗೆ ಮಾಡಿದರೂ ಸಮಾಜಕ್ಕೆ ಹೆದರಿ ಮಗಳನ್ನು ‘ಹೊಂದಿಕೊಂಡು ಹೋಗು’ ಎಂದು ಉಪದೇಶ ಮಾಡಿ ಗಂಡನ ಮನೆಗೆ ವಾಪಸ್ ಕಳಿಸಿ ಅವಳ ಆತ್ಮಹತ್ಯೆಗೆ ಕಾರಣರಾದ ಎಷ್ಟು ಮಂದಿ ತಾಯಿ ತಂದೆಯರು ನಮ್ಮ ನಡುವೆ ಇಲ್ಲ?, ಈ ರೀತಿ ಮೂರ್ಖತನದಿಂದ ವರ್ತಿಸಿ ಹೆಣ್ಣುಮಕ್ಕಳ ಸಾವಿಗೆ ಕಾರಣವಾಗುವ ವರದಕ್ಷಿಣೆ ಎಂಬ ಪೆಡಂಭೂತದ ಬಗೆಗಿನ ಈ ಲೇಖನ ಮನಮುಟ್ಟುವಂತಿದೆ.
‘ಹತ್ತರ ಬಾಲೆಗೂ ಗರ್ಭಪಾತಕ್ಕೆ ಅನುಮತಿ ಸಿಗಲಿಲ್ಲ’, ‘ಮಹಿಳೆಯರು ಮತ್ತು ಹಾಸ್ಯಪ್ರಜ್ಞೆ’, ‘ಮೀ ಟು ಓರ್ ವೀ ಟೂ’, ‘ಹುಡುಗಿಯರಿಗೇಕೆ ಹೂವೆಂದರೆ ಇಷ್ಟ?’- ಎಂಬ ಲೇಖನಗಳೂ ನರೇಂದ್ರ ಅವರ ಸ್ತ್ರೀ ಪರ ಕಾಳಜಿಗೆ ನಿಚ್ಚಳ ದ್ಯೋತಕವಾಗಿವೆ. ಇನ್ನೂ ಅನೇಕ ಮಹತ್ವದ ವಿಷಯಗಳನ್ನು ಆಯ್ದುಕೊಂಡು ಬರೆದ ಲೇಖನಗಳು ಈ ಕೃತಿಯಲ್ಲಿವೆ. ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಾಗ ಧಾರ್ಮಿಕ ಚಿಹ್ನೆಗಳಿರುವ ವಸ್ತ್ರಧಾರಣೆ ಅಪ್ರಸ್ತುತ ಅನ್ನುವ ಮೊದಲ ಲೇಖನ, ಒಬ್ಬ ಸೆಲೆಬ್ರಿಟಿ ಇನ್ನೊಬ್ಬ ಸೆಲೆಬ್ರಿಟಿ ಬಗ್ಗೆ ಕೊಟ್ಟ ಹೇಳಿಕೆಗಳಿಗೆ ಅನಗತ್ಯ ಪ್ರತಿಭಟನೆ ತೋರಿಸಿ ಗಲಾಟೆ ಎಬ್ಬಿಸುವುದು ಸಭ್ಯತೆಯ ಲಕ್ಷಣವಲ್ಲ ಅನ್ನುವ ‘ಇನ್ನೊಬ್ಬರು ನಮ್ಮ ಬಗ್ಗೆ ಮಾತನಾಡಬಾರದಾ?’ ಎಂಬ ಲೇಖನ. ಕೇರಳದಲ್ಲಿ ಆನೆಗೆ ಕೊಡುವ ಆಹಾರದೊಳಗೆ ಪಟಾಕಿಯಿಟ್ಟು ಸಿಡಿಸಿ ಅದರ ಸಾವಿಗೆ ಕಾರಣರಾದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಲೇಖನ ‘ಮತ್ತೆ ಮತ್ತೆ ಕಾಡಲಿ ಮುಗ್ಧ ಪ್ರಾಣಿಗಳ ಸಾವು’, ಮನುಷ್ಯ ಸಂಬಂಧಗಳನ್ನು ಹಾಳು ಮಾಡುವ ಮೊಬೈಲ್ ಹುಚ್ಚಿನ ಕುರಿತಾದ ಲೇಖನ ‘ಸಂಬಂಧಗಳನ್ನೇ ಹಾಳು ಮಾಡುವ ಫಬ್ಬಿಂಗ್’, ಫೇಸ್ ಬುಕ್ಕಿನಲ್ಲಿ ಟ್ರೋಲ್ ಮಾಡುವುದು ಅತಿಯಾದಾಗ ಆಗುವ ಅನಾಹುತಗಳು ‘ಟ್ರೋಲ್ ಮಾಡುವಾಗ ಇರಲಿ ಕಂಟ್ರೋಲ್, ಮೀ ಟೂನ ಒಳಿತು ಕೆಡುಕುಗಳು, ಮೀ ಟೂ ಓರ್ ವಿ ಟೂ ? ಕನ್ ಫರ್ಮ್ ಟೂ, ದಾನ ಮಾಡುವವರ ಪ್ರಚಾರದ ಖಯಾಲಿ, ಟ್ರಾಫಿಕ್ ಪೋಲೀಸರನ್ನು ಬೈಯುವವರಿಗೆ ಕಿವಿಮಾತು, ಎಳೆಯ ಮಕ್ಕಳ ಖುಷಿಯನ್ನು ಹಾಳು ಮಾಡುವ ಹೋಂ ವರ್ಕ್ ಒತ್ತಡ, ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವ ಹುಡುಗಿಯರನ್ನು ಮೋಸದ ಬಲೆಯಲ್ಲಿ ಕೆಡಹುವುದರ ಕುರಿತಾದ ಲೇಖನ, ರಕ್ಷಾ ಬಂಧನದ ಮೂಲದ ಆದರ್ಶದಲ್ಲಿ ಇಂದು ಆಗುತ್ತಿರುವ ಬದಲಾವಣೆಗಳು, ಗ್ರಾಹಕ ಸುರಕ್ಷತೆಯ ಅರಿವು, ಪರಿಸರ ಅಳಿದರೆ ನಾವು ಉಳಿದೇವಾ?- ಮುಂತಾದ ಎಲ್ಲಾ 50 ಲೇಖನಗಳು ಒಂದಿಲ್ಲೊಂದು ರೀತಿಯಿಂದ ಉಪಯುಕ್ತವಾದ ಬರಹಗಳು. ಪ್ರತಿಯೊಂದು ಲೇಖನದ ಕೊನೆಗೂ ನೀಡಿರುವ ‘ಕೊನೆಯ ಮಾತು’ ಇಡೀ ಲೇಖನದ ಸಾರ-ಸತ್ವವನ್ನು ಎರಡು ಮಾತುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತದೆ. ಒಂದು ಒಳ್ಳೆಯ ಓದಿನ ಸುಖ ನೀಡುವ ‘ಅವಳ ನಿಟ್ಟುಸಿರು’ ಕೃತಿಗಾಗಿ ನರೇಂದ್ರ ಎಸ್. ಗಂಗೊಳ್ಳಿಯವರಿಗೆ ಅಭಿನಂದನೆಗಳು.
ಕೃತಿಯ ಹೆಸರು : ಅವಳ ನಿಟ್ಟುಸಿರು (ಲೇಖನಗಳು)
ಲೇಖಕರು : ನರೇಂದ್ರ ಎಸ್. ಗಂಗೊಳ್ಳಿ
ಪ್ರ : ಜಯರಾಮ ಪಬ್ಲಿಕೇಶನ್ಸ್ ಬೆಂಗಳೂರು
ಪುಟಗಳು : 242. ಬೆಲೆ : ರೂ.250/-

ವಿಮರ್ಶಕರು : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

ಲೇಖಕ : ನರೇಂದ್ರ ಎಸ್. ಗಂಗೊಳ್ಳಿ
ಪ್ರಸ್ತುತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಹಗಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ವಾಗ್ಮಿಯಾಗಿ ನಿರೂಪಣಕಾರನಾಗಿ, ಅಂಕಣಕಾರರಾಗಿ, ತೀರ್ಪುಗಾರರಾಗಿ, ಕಿರುನಾಟಕಗಳ ರಚನೆ ಮತ್ತು ನಿರ್ದೇಶಕರಾಗಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಸ್ಯಾಕ್ಸೋಫೋನಿಸ್ಟ್ ಆಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಇವರ ರಚನೆಯ ಹೇಳದೆ ಹೋದ ಮಗಳಿಗೆ, ನಾಯಿ ನಾನು, ಸುರಗಂಗೆ ಹಾಗೂ ಪ್ರಸಿದ್ಧ ವಿಮರ್ಶಕಿ ಮತ್ತು ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಮತ್ತು ಇತ್ತೀಚಿಗೆ ಬಿಡುಗಡೆಯಾದ ಪತ್ತೆದಾರಿ ಕಾದಂಬರಿ ‘ನಿಭ್ರತ’ ಹೆಸರಿನ ಪುಸ್ತಕಗಳು ಅಪಾರ ಜನ ಮೆಚ್ಚುಗೆ ಗಳಿಸಿವೆ. ಇವರ ರಚನೆ ಮತ್ತು ನಿರ್ದೇಶನದ ಮೈಸೂರು ಮಲ್ಲಿಗೆ, ಬದುಕು ಸಾಗಲೇಬೇಕು, ಮರಣಿ ಮಾಂಟೆ, ಮೃಡ ಹಾಗೂ ಇತ್ತೀಚಿಗೆ ಪ್ರದರ್ಶನ ಕಂಡ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ಹೆಸರಿನ ನಾಟಕಗಳು ದೊಡ್ಡ ಮಟ್ಟದ ಯಶಸ್ಸು ಕಂಡು ಅಪಾರ ಜನ ಮೆಚ್ಚುಗೆ ಪಡೆದಿವೆ. ಹಲವು ರಾಜ್ಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಬಹುಮಾನಗಳಿಗೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
