ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭವು ದಿನಾಂಕ 07 ಫೆಬ್ರುವರಿ 2026ರಂದು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ನಡೆಯಿತು. ಮುಂಬಯಿಯ ಡಾ. ಸುನೀತಾ ಎಂ. ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ ಪ್ರಶಸ್ತಿ’ಯನ್ನು ಕ್ಯಾಥರಿನ್ ರಾಡ್ರಿಗಸ್ ಇವರಿಗೆ ಮತ್ತು ‘ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ’ಯನ್ನು ಸುಖಲಾಕ್ಷಿ ಸುವರ್ಣ ಇವರಿಗೆ ಪ್ರದಾನ ಮಾಡಲಾಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ “ಸಾಹಿತ್ಯದ ಬೆಳವಣಿಗೆಯಲ್ಲಿ ಸಹೃದಯರ ಪಾತ್ರ ಮುಖ್ಯ. ಉತ್ತಮ ಓದುಗರ ಸ್ಪಂದನೆಯಿಂದ ಸಾಹಿತ್ಯ ರಚನೆ ಸಾಕಾರಗೊಳ್ಳುತ್ತದೆ. ಓದುಗರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾದಾಗ ಸಾಹಿತಿಗೆ ಪ್ರೇರಣೆ ಸಿಕ್ಕಿದಂತಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದಾಗ ಸಾಮಾಜಿಕ ಬದ್ಧತೆಯ ಅರಿವಾಗುತ್ತದೆ. ಕೃತಿಗೆ ಹೆಚ್ಚು ಗೌರವವೂ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಸಂತ ಅಲೋಶಿಯಸ್ ಮಹಾ ವಿದ್ಯಾಲಯದ ನಿವೃತ್ತ ಉಪನ್ಯಾಸಕಿ ಸಾಹಿತಿ ಸರಸ್ವತಿ ಕುಮಾರಿ ಮಾತನಾಡಿ “ಉದ್ಯೋಗ, ಸಂಶೋಧನೆ, ಗಂಡ-ಮಕ್ಕಳ ಪಾಲನೆ, ವಾಹನ ಚಾಲನೆ ಇತ್ಯಾದಿ ಹಲವು ಕೆಲಸಗಳನ್ನು ಮಾಡುವ ಹೆಣ್ಣು ಕೈಕಾಲು ಸೋಲುವಷ್ಟು, ಚಪ್ಪಲಿ ಸವೆಯುವಷ್ಟು ಕಷ್ಟಪಡುತ್ತಾಳೆ. ಆದರೂ ಹೋದಲ್ಲೆಲ್ಲ ‘ನೀನು ಸ್ತ್ರೀ’ ಎಂದು ಹೇಳಿ ಮಾತನಾಡುವವರೇ ಹೆಚ್ಚು. ಮಹಿಳೆಯ ಗುಣಗಳನ್ನು ದೌರ್ಬಲ್ಯ ಎಂದು ಪರಿಗಣಿಸುವ ಈ ಸಮಾಜದಲ್ಲಿ ಸಾಮರ್ಥ್ಯ ಅರಿತು ಮುಂದೆ ಸಾಗಬೇಕು” ಎಂದು ಹೇಳಿದರು.
ತೀರ್ಪುಗಾರ, ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ಸುಖಲಾಕ್ಷಿ ಅವರ ಮುಂಬೈ ಮತ್ತು ಮಹಿಳೆ ಸಂಶೋಧನಾ ಕೃತಿ ತಳ ಸಮುದಾಯದ ಇತಿಹಾಸದ ಮರುನಿರೂಪಣೆಯ ಆಯಾಮದಿಂದ ಮುಖ್ಯವಾಗುತ್ತದೆ” ಎಂದರು. “ಕಾವ್ಯ ಬರೆಯುವವರ ಮುಂದೆ ಹೊಸಕಾಲದ ಸವಾಲುಗಳಿದ್ದರೂ ಮಹಿಳೆಯರು ಶಕ್ತಿಯುತವಾಗಿ ಬರೆಯುತ್ತಿದ್ದಾರೆ” ಎಂದು ತೀರ್ಪುಗಾರ, ಸಾಹಿತಿ ವಸಂತಕುಮಾರ ಪೆರ್ಲ ಹೇಳಿದರು.
ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಇವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಮುರ್ತುಜಾ ಬೇಗಂ ಹಾಜರಿರಲಿಲ್ಲ. ಸಾರಾ ಅಬೂಬಕ್ಕರ್ ಅವರ ಸೊಸೆ ಸಾಯಿದಾ ರಹೀಂ, ಕಲೇವಾ ಉಪಾಧ್ಯಕ್ಷೆ ಅರುಣಾ ನಾಗರಾಜ್ ಉಪಸ್ಥಿತರಿದ್ದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಯಶೋದಾ ಮೋಹನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಮೋಲಿ ನಿರಾಂಢ ವಂದಿಸಿ, ಅಕ್ಷಯಾ ಆರ್. ಶೆಟ್ಟಿ ನಿರೂಪಿಸಿದರು.
