ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ 16ನೇ ವರ್ಷದ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ದಿನಾಂಕ 19 ಫೆಬ್ರವರಿ 2026ರಂದು ನಡೆಯಿತು.
ತೆಂಕುತಿಟ್ಟು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಘಟಕ ಡಾ. ಪ್ರದೀಪ್ ಆಟಿಕುಕ್ಕೆ, ತುಳು ಕನ್ನಡ ಸಿನಿಮಾ ಛಾಯಾಗ್ರಾಹಕ ಸಂತೋಷ್ ಆಚಾರ್ಯ ಗುಂಪಲಾಜೆ ಇವರಿಗೆ ‘ಸುವರ್ಣ ರಂಗ ಸಮ್ಮಾನ್-2026’ ಪ್ರದಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿದ ಕೊಳ್ತಿಗೆ ನಾರಾಯಣ ಗೌಡ ಮಾತನಾಡಿ “ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಮಹತ್ತರವಾದುದು. ರಾಜಕೀಯ ಲೇಪನ ಇಲ್ಲದೆ, ವ್ಯಕ್ತಿ ಪ್ರತಿಷ್ಠೆಗೆ ಅವಕಾಶವಿಲ್ಲದೆ ಹಲವು ವರ್ಷಗಳಿಂದ ಪ್ರತಿಷ್ಠಾನ ಕಾರ್ಯಕ್ರಮ ಹಮ್ಮಿಕೊಂಡು ಬಂದಿರುವುದು ಶ್ಲಾಘನೀಯ. ಪಾಶ್ಚಾತ್ಮ ವಿಚಾರಗಳಿಗೆ ಆಸ್ಪದ ನೀಡದೆ ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವುದು ಪ್ರತಿಷ್ಠಾನದ ಹೆಗ್ಗಳಿಕೆಯಾಗಿದೆ” ಎಂದರು. ಡಾ. ಪ್ರದೀಪ್ ಆಟಿಕುಕ್ಕೆ ಮಾತನಾಡಿ, “ಜಗತ್ತಿಗೆ ಅನೇಕ ಸಾಂಸ್ಕೃತಿಕ ಆದರ್ಶಗಳನ್ನು ನೀಡಿದ ದೇಶ ಭಾರತ. ಆ ಸಂಸ್ಕೃತಿಯ ಬೇರುಗಳನ್ನು ಭಾರತೀಯರು ಅರ್ಥೈಸಿಕೊಂಡು ಪಾಲಿಸಬೇಕಾಗಿದೆ” ಎಂದರು.
ಸುವರ್ಣ ಆರ್ಕೇಡ್ ಮಾಲೀಕ ನಾಣ್ಯಪ್ಪ ಪೂಜಾರಿ, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ. ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕಿ ಸುಜಿತಾ ವಿ. ಬಂಗೇರ, ಬಿ. ಭುಜಬಲಿ ಧರ್ಮಸ್ಥಳ, ಪ್ರಜ್ವಲ್ ಕಾಂಪ್ಲೆಕ್ಸ್ ನ ಮಾಲೀಕ ಪ್ರಮೋದ್ ಆರ್. ನಾಯಕ್, ಪತ್ರಕರ್ತರಾದ ಎನ್. ಮಂಜುನಾಥ ರೈ, ತುಕಾರಾಮ ಬಿ., ಮನೋಹರ ಬಳಂಜ, ಸಂತೋಷ್ ಕೋಟ್ಯಾನ್, ಮಡಂತ್ಯಾರು ಜೆಸಿಐ ಅಧ್ಯಕ್ಷೆ ಸಾಯಿ ಸುಮ ನಾವಡ, ಅಶೋಕ್ ಗುಂಡಲಿಕೆ, ಅಮಿತಾ ಅಶೋಕ್, ಸಂತೋಷ್ ಕುಮಾರ್, ಶಶಿಧರ್ ಕಲ್ಮಂಜ, ಬೇಬಿ ನಾಣ್ಯಪ್ಪ ಪೂಜಾರಿ, ವಿಜಯ ಕುಮಾರ್ ಅಳಡಂಗಡಿ, ಜಯರಾಜ್ ಜೈನ್ ಭಾಗವಹಿಸಿದ್ದರು. ದೀಕ್ಷಿತ್ ಗಾಣಿಗ ನಿರೂಪಿಸಿದರು. ಶಿವಶಂಕರ್ ಗೇರುಕಟ್ಟೆ ಸಾರಥ್ಯದಲ್ಲಿ ನಾದಂತರಂಗ ಗಾನವೈಭವ ಮತ್ತು ಉರ್ವ ಶಿರಡಿ ಸಾಯಿಬಾಬಾ ಮಂದಿರದ ಸಾಯಿ ಶಕ್ತಿ ಕಲಾಬಳಗದವರಿಂದ ತುಳು ನಾಟಕ ಪ್ರದರ್ಶನಗೊಂಡಿತು.
