ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 2021ರ ಸಾಲಿನ ಇನಾಂದಾರ್ ಪ್ರಶಸ್ತಿಗೆ ಲೇಖಕಿ, ವಿಮರ್ಶಕಿ ಆರ್. ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ವಿಮರ್ಶಾ ಕೃತಿ ಹಾಗೂ 2022ರ ಸಾಲಿನ ಪ್ರಶಸ್ತಿಗೆ ಹಿರಿಯ ಲೇಖಕ, ಕಾದಂಬರಿಕಾರ ಡಿ.ಎ.ಶಂಕರ್ ಅವರ ವಿಮರ್ಶಾ ಕೃತಿ ‘ವಾಗರ್ಥ’ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ತಾರಿಣಿ ಶುಭದಾಯಿನಿ ಮೈಸೂರಿನವರಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದ್ದಾರೆ. ತೋಡಿ ರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ ಅವರ ಕವನ ಸಂಕಲನಗಳು, ಗಳಿಗೆ ಬಟ್ಟಲು, ಹೆಡೆಯಂತಾಡುವ ಸೊಡರು ವಿಮರ್ಶಾ ಕೃತಿ, ನಿರ್ವಸಾಹತೀಕರಣ, ಸ್ತ್ರೀ ಶಿಕ್ಷಣ-ಚರಿತ್ರೆಯ ಹೆಜ್ಜೆಗಳು ಮುಂತಾದವು ಅವರ ಪ್ರಕಟಿತ ಕೃತಿಗಳು.
ಅವರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿ ನಿಧಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಡಿ.ಎ. ಶಂಕರ್ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ, ಪ್ರೊಫೆಸರ್ ಆಗಿ ಮಂಗಳೂರು ವಿ.ವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಮೈಸೂರು ವಿ.ವಿ.ಯ ಮೊದಲ ಎಮಿರಿಟಸ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಾವ್ಯ, ನಾಟಕ, ಅನುವಾದ, ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಆಸಕ್ತಿ ಹಾಗೂ ಪರಿಶ್ರಮವುಳ್ಳವರು. ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ ಅವರ ಕವನ ಸಂಕಲನಗಳು, ನಿರ್ವಹಣೆ, ವಸ್ತು ವಿನ್ಯಾಸ, ಅನುಕ್ರಮ ವಿಮರ್ಶಾ ಸಂಕಲನಗಳು, ಶಿವಗಣಪ್ರಸಾದಿ ಮಹಾದೇವಯ್ಯಗಳ ಶೂನ್ಯಸಂಪಾದನೆಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಅವರು ಅನಂತಮೂರ್ತಿ, ವೈದೇಹಿ, ತೇಜಸ್ವಿ ಮುಂತಾದವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಅವರ ‘ಕೂಲಿ’ ಹಾಗೂ ಕನಕದಾಸರ ಆಯ್ದ ಕೃತಿಗಳ ಗೋಲ್ಡನ್ ಫ್ಲಾಕ್ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ಕರೀಭಂಟ, ಮುದ್ದುರಾಜರುಗಳ ಪ್ರಸಂಗ ಅವರ ನಾಟಕಗಳು, ‘ಅಮೃತ’ ಅವರ ಕಾದಂಬರಿ. ಇಂಗ್ಲಿಷಿನಲ್ಲಿಯೂ ಅವರು ಬರೆದಿದ್ದಾರೆ.