ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಆಯೋಜಿಸಿದ ‘ದತ್ತಿ ಉಪನ್ಯಾಸ’ ಕಾರ್ಯಕ್ರಮವು ದಿನಾಂಕ 19-05-2023ರಂದು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೊ. ಉಪೇಂದ್ರ ಸೋಮಯಾಜಿಯವರು “ಓದುಗರೆಲ್ಲ ವೀಕ್ಷಕರಾಗಿ ಬದಲಾದ ಈ ಕಾಲಘಟ್ಟದಲ್ಲಿ ದತ್ತಿ ಉಪನ್ಯಾಸಗಳು ಮಹತ್ವವನ್ನು ಪಡೆಯುತ್ತಿದೆ. ಕಾದಂಬರಿಗಳ ಮರು ಓದು ಮತ್ತು ವಿಮರ್ಶೆ ಮಹತ್ವವನ್ನು ಪಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗಳಲ್ಲಿ ನಡೆದರೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಜನರು ಇನ್ನಷ್ಟು ಸ್ಪಂದಿಸುತ್ತಾರೆ” ಎಂದು ಹೇಳಿದರು.
ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕ.ಸಾ. ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ ಹೆಬ್ಬಾರ್ ಭಾಗವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಗಣೇಶ್ ಮೂರ್ತಿ ಹೆಬ್ಬಾರ್ ಇವರು ‘ಕಾರಂತ ಕಾದಂಬರಿ ವಿಮರ್ಶೆ’, ಕೋಟದ ವಿವೇಕ ಪದವಿ ಪೂರ್ವ ಕಾಲೇಜು ಇಲ್ಲಿಯ ಉಪನ್ಯಾಸಕಾರರಾದ ಜಿ. ಸಂಜೀವ ಇವರು ‘ಕುಂದಾಪ್ರ ಕನ್ನಡ ಅಂದು-ಇಂದು’ ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ವೈಕುಂಠ ಹೇರ್ಳೆ ಇವರು ‘ಯಕ್ಷಗಾನದಲ್ಲಿ ಕನ್ನಡ ಅಂದು-ಇಂದು’ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.