ಮಂಗಳೂರು : ದೇರೆಬೈಲು ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಗರದ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಶಿಷ್ಯ ವರ್ಗ ದಿನಾಂಕ :23-05-2023 ಮಂಗಳವಾರ ರಾತ್ರಿ ಪ್ರಸ್ತುತಪಡಿಸಿದ ಭರತನಾಟ್ಯ ಕಾರ್ಯಕ್ರಮ ಕಲೆ ಮತ್ತು ಭಕ್ತಿ ಮೇಳೈಸಿ ಸಂಭ್ರಮದ ವಾತಾವರಣ ಸೃಷ್ಟಿಸಿತು.
ಭಾವಪೂರ್ಣ ನಾಟ್ಯಭಂಗಿ ಮತ್ತು ಮೋಹಕ ಆಂಗಿಕ ಅಭಿನಯದ ಮೂಲಕ ಕಥಾಸಾರವನ್ನು ಪ್ರಸ್ತುತಪಡಿಸಿದ ಕಲಾವಿದರು ಸಹೃದಯಿಗಳನ್ನು ರಸಸಾಗರದಲ್ಲಿ ಮುಳುಗೇಳುವಂತೆ ಮಾಡಿದರು. ಕೃಷ್ಣನ ಲೀಲೆ, ರಾಮನ ಮಹಿಮೆ ಮತ್ತು ಹನುಮನ ನಿಷ್ಠೆ ಇತ್ಯಾದಿಗಳನ್ನು ನೃತ್ಯ ರೂಪಕದ ಮೂಲಕ ಕಂಡ ಕಲಾಪ್ರೇಮಿಗಳ ಮನಸ್ಸು ಭಕ್ತಿ-ಭಾವದಲ್ಲಿ ಆರ್ದ್ರವಾಯಿತು.
ಪುಷ್ಪಾಂಜಲಿಯ ನಂತರ ಗೌಳ ರಾಗದಲ್ಲಿ ಏಕದಂತ ಗಣೇಶನ ಸ್ತುತಿಯ ಮೂಲಕ ಪ್ರೇಕ್ಷಕರ ಮನೋರಂಗಕ್ಕೆ ಕಲಾವಿದರು ಪ್ರವೇಶ ಮಾಡಿದ ಬೆನ್ನಲ್ಲೇ ಚಿಕ್ಕಮಕ್ಕಳು ಪ್ರಸ್ತುತಪಡಿಸಿದ ಗಣೇಶ, ಸರಸ್ವತಿ ಮುಂತಾದವರನ್ನು ಕೊಂಡಾಡುವ ನಾಲ್ಕು ಶ್ಲೋಕಗಳ ಗುಚ್ಛವು ಮುದ ನೀಡಿತು.
ಬೇಹಾಗ್ ರಾಗದಲ್ಲಿ ಡಿವಿಜಿ ಅವರ ಅಂತಃಪುರ ಗೀತೆಗಳ ‘ಏನೇ ಶುಕಭಾಷಿಣಿ’ಯನ್ನು ಪ್ರಸ್ತುತಪಡಿಸಿದ ಕಲಾವಿದರು ಬೇಲೂರಿನ ಶಿಲಾಬಾಲಿಕೆಯರ ಸೌಂದರ್ಯವನ್ನು ವರ್ಣಿಸಿದರು. ರಾಧಾ ಕೃಷ್ಣೆಯರ ನೆನಪಿನಲ್ಲಿ ರಾಧಿಕೆಯರ ಆಟಗಳನ್ನು ಬಣ್ಣಿಸಿದ ನಂತರ ಬೀಜಾಕ್ಷರ ಮಂತ್ರವನ್ನು ಒಳಗೊಂಡ ದೇವಿಸ್ತುತಿಯು ರೇವತಿ, ಹಂಸಧ್ವನಿ, ಗೌಳ, ಕಾಮವರ್ಧಿನಿ ಮತ್ತು ಸಾಮ ರಾಗಗಳ ಮಾಲಿಕೆಯಲ್ಲಿ ಮೂಡಿಬಂದಿತು.
ಕಲ್ಯಾಣಿ ರಾಗದಲ್ಲಿ ಶಾರದೆಯನ್ನು ಪೂಜಿಸುವ ‘ಶೃಂಗಪುರಾಧೀಶ್ವರಿ ಶಾರದೆ’ ಹಾಡು ಕೂಡ ನೃತ್ಯದ ಚೌಕಟ್ಟಿನಲ್ಲಿ ಮೋಹಕವಾಗಿ ಪ್ರಸ್ತುತಗೊಂಡಿತು. ಹರಿಸ್ಮರಣೆಯಲ್ಲಿ ದೌಪದಿ ವಸ್ತ್ರದಾನವನ್ನು ಅಭಿನಯಿಸಿದ ಕಲಾವಿದರು ಹನುಮಂತ ದೇವ ನಮೋ ಎಂಬ ಪೂರ್ವಿಕಲ್ಯಾಣಿ ರಾಗದ ಹಾಡಿಗೆ ಹೆಜ್ಜೆ ಹಾಕಿದಾಗ ಪ್ರೇಕ್ಷಕರು ಲಯ-ಲಾಸ್ಯವನ್ನೊಳಗೊಂಡ ಕಥೆಯ ಲೋಕದಲ್ಲಿ ವಿಹರಿಸಿದರು. ಹನುಮಂತ ಮತ್ತು ರಾಮನ ಭೇಟಿ, ಲಂಕಾದಹನ, ಸೇತುಬಂಧನ ಮುಂತಾದ ಸನ್ನಿವೇಶಗಳನ್ನು ಮನೋಜ್ಞವಾಗಿ ಅಭಿನಯಿಸಿದಾಗ ಸಭಾಂಗಣದಲ್ಲಿ ಚಪ್ಪಾಳೆಯ ಮಳೆ ಸುರಿಯಿತು. ಬೃಂದಾವನಿ ಸಾರಂಗ್ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು.
1 Comment
Thank you so much for the coverage 🙏🏻