ಕುಂದಾಪುರ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಾರಥ್ಯದಲ್ಲಿ ಮೇ 27ರಂದು ‘ರಜಾರಂಗು-ರಂಗಮಂಚ’ ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಹಾಗೂ ‘ಕಾಳಿಂಗ ನಾವುಡರ ಸಂಸ್ಮರಣೆ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿ ಹಿರಿಯ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರು “ಗಗನಂ ಗಗನಾಕಾರಂ. ಸಮುದ್ರಕ್ಕೆ ಸಮುದ್ರವೇ ಸಾಟಿ. ಹಾಗೆಯೇ ನಾವುಡರಿಗೆ ಸಾಟಿ ಮತ್ತೊಂದಿಲ್ಲ. ರಂಗದಲ್ಲಿ ಏನೂ ಅಲ್ಲದ ಕಲಾವಿದನನ್ನು ಮೇಲಕ್ಕೆತ್ತುವ ಸಾಮರ್ಥ್ಯ ಕಾಳಿಂಗ ನಾವುಡರಲ್ಲಿದೆ. ರಂಗದಲ್ಲಿ ರಾಜಿ ಇಲ್ಲದ ಮಹಾನ್ ಕಲಾವಿದ. ಅತೀ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಶಕ್ತಿ ದೈವದತ್ತವಾಗಿ ಅವರಿಗೆ ಅನುಗ್ರಹಿತವಾಗಿದೆ. ಅವರು ಯಕ್ಷಗಾನದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ಸ್ಥಿತರಾದರು” ಎಂದು ಹೇಳಿದರು.
ಬೆಳೆಯುವ ಮಕ್ಕಳಿಗೆ ಕಲೆಯ ಪರಿಚಯವನ್ನು ಮಾಡಿಸಿದರೆ, ಅವರಿಗೆ ಭಾಗವಹಿಸುವುದಕ್ಕೆ ಅವಕಾಶವನ್ನು ಕೊಟ್ಟರೆ, ಒಂದು ತಲೆಮಾರಿಗೆ ನಾವೊಂದು ಕಾಣಿಕೆ ಕೊಟ್ಟ ಹಾಗೆ. ಇಂತಹ ಕೆಲಸವನ್ನು ಮಾಡಿದ ಸಂಸ್ಥೆಯನ್ನು ಶ್ಲಾಘಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನನ್ನನ್ನೂ ಸೇರಿದಂತೆ ಅನೇಕ ಕಲಾವಿದರನ್ನು ಬೆಳಕಿಗೆ ತಂದು ಕಲಾ ಪ್ರಪಂಚಕ್ಕೆ ತೋರಿಸಿಕೊಟ್ಟವರು ಕಾಳಿಂಗ ನಾವುಡರು. ಕಲಾವಿದರ ಸಾಮರ್ಥ್ಯವನ್ನು ತಿಳಿದೂ, ಅಳೆದು ಕಲಾವಿದನಲ್ಲಿರುವ ಕೊರತೆಯನ್ನು ಕಾಣದೇ ಇದ್ದ ಹಾಗೆ ಮಾಡಿ, ಅವನನ್ನು ವಿಜೃಂಭಿಸುವ ಹಾಗೆ ಮಾಡುವುದೇ ನಿಜವಾದ ಭಾಗವತನ ಲಕ್ಷಣ. ಇದನ್ನು ಕಾಳಿಂಗ ನಾವುಡರು ಮಾಡುತ್ತಿದ್ದರು ಎಂದು ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ನ್ಯಾಯವಾದಿ ಶ್ರೀಧರ್ ಪಿ.ಎಸ್. ಕುಂದಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮ, ಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರಂಗದಲ್ಲಿ ಸೀತಾರಾಮ ಶೆಟ್ಟಿ ನಿರ್ದೇಶನದ ತಾಳಮದ್ದಳೆ ‘ದ್ರೌಪದಿ ಪ್ರತಾಪ’ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ನಾಟಕ ‘ಹಕ್ಕಿ ಮಕ್ಕಳು’ ರಂಗದಲ್ಲಿ ಪ್ರಸ್ತುತಿಗೊಂಡಿತು.