ಬೆಂಗಳೂರು: ರಂಗಚಕ್ರ ತಂಡವು ಅಭಿನಯ ಕಾರ್ಯಾಗಾರದ ಮೂಲಕ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುತ್ತ ಹಲವಾರು ನಾಟಕಗಳನ್ನು ಪ್ರಸ್ತುತಪಡಿಸಿದೆ. ಇವರ ಈ ಬಾರಿಯ ಅಭಿನಯ ಕಾರ್ಯಾಗಾರವು ರಂಗಕರ್ಮಿ ಮಧು ಮಳವಳ್ಳಿಯವರ ನಿರ್ದೇಶನದಲ್ಲಿ ಜೂನ್ 16 ರಿಂದ ಜುಲೈ 31ರ ವರೆಗೆ ನಡೆಯಲಿದೆ. ಈ ಕಾರ್ಯಾಗಾರವನ್ನು ಹಿರಿಯ ರಂಗತಜ್ಞ ಡಾ. ಬಿ. ವಿ. ರಾಜಾರಾಮ್ ಇವರು ಉದ್ಘಾಟನೆ ಮಾಡಲಿದ್ದಾರೆ.
18ವರ್ಷ ಮೇಲ್ಪಟ್ಟವರಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದ್ದು, ನಾಡಿನ ಹೆಸರಾಂತ ರಂಗಕರ್ಮಿಗಳಾದ ಡಾ. ರಾಜರಾಮ್, ಸುರೇಶ್ ಆನಗಳ್ಳಿ, ಬಿ. ಸುರೇಶ, ಪ್ರಸನ್ನಕುಮಾರ್ ಕೆರಗೂಡು, ಲವಕುಮಾರ್, ಗುಂಡಣ್ಣ ಚಿಕ್ಕಮಗಳೂರು ಮತ್ತು ಉಮಾಶ್ರೀ ಮಧು ಮಳವಳ್ಳಿ ಮಾರ್ಗದರ್ಶನ ನೀಡಲಿದ್ದಾರೆ.
ಈ ಕಾರ್ಯಾಗಾರವು ಸಂಜೆ 6 ರಿಂದ 9ರ ವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಾಸ್ತಿ ರಂಗ ತಾಲೀಮು ಕೊಠಡಿಯಲ್ಲಿ ನಡೆಯಲಿದ್ದು ಹೆಚ್ಚಿನ ಮಾಹಿತಿ, ನೋಂದಣಿ ಹಾಗೂ ಪ್ರವೇಶಾತಿಗಾಗಿ ಮಹೇಶ್ ಕುಮಾರ್ 8971600558 ಇವರನ್ನು ಸಂಪರ್ಕಿಸಬಹುದು.
ಮಧು ಮಳವಳ್ಳಿ
ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಗಸನಪುರದವರಾದ ಇವರು ಐ.ಟಿ.ಐ ಮುಗಿಸಿ ಆಟೋಮೋಟಿವ್ ಅಕ್ಸಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ರಂಗಭೂಮಿಯ ಗೀಳು ಹಿಡಿಸಿಕೊಂಡವರು. 16 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿರುವ ಇವರು ಸರಿ ಸುಮಾರು 60 ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ ಹಾಗೂ 20 ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.
ಬೆಳಕಿನ ವಿನ್ಯಾಸದಲ್ಲಿ ಪರಿಣತಿ ಹೊಂದಿದ ಇವರು ಸುಮಾರು 350 ಕಿಂತಲೂ ಹೆಚ್ಚು ನಾಟಕಗಳಿಗೆ ಮತ್ತು ನೃತ್ಯ ರೂಪಕಗಳಿಗೆ ಬೆಳಕಿನ ವಿನ್ಯಾಸ ಮಾಡಿರುತ್ತಾರೆ. ಶ್ರೀಯುತರು ‘ ರಂಗಬಂಡಿ ಮಳವಳ್ಳಿ ‘ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 6 ವರ್ಷಗಳಿಂದ ಮಳವಳ್ಳಿ ಭಾಗದ ಸರ್ಕಾರಿ ಶಾಲೆಯ 120 ರಿಂದ 150 ಮಕ್ಕಳಿಗೆ ಉಚಿತವಾಗಿ ‘ ಮಕ್ಕಳ ಹಬ್ಬ ’ ಎಂಬ ಬೇಸಿಗೆ ಶಿಬಿರಗಳನ್ನು ಮಾಡುತ್ತಾ ಬಂದಿದ್ದಾರೆ. ಯುವ ಜನತೆಗೆ ಪ್ರತಿವರ್ಷ ಒಂದು ತಿಂಗಳ ರಂಗತರಬೇತಿ ಶಿಬಿರವನ್ನು ಮಾಡಿ ಆ ಶಿಬಿರಾರ್ಥಿಗಳಿಗೆ ರಂಗ ಪ್ರಯೋಗಗಳನ್ನು ನಿರ್ದೇಶನ ಮಾಡಿ ರಾಜ್ಯದ ಹಲವಾರು ಕಡೆ ಪ್ರದರ್ಶನವನ್ನು ಮಾಡಿಸಿದ್ದಾರೆ. ಭಾರತದ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಇವರು ಧಾರವಾಡ ರಂಗಾಯಣದಲ್ಲಿ ಬೆಳಕಿನ ಮತ್ತು ಧ್ವನಿ ವಿಭಾಗದ ತಂತ್ರಜ್ಞರಾಗಿದ್ದರು.