ಮೂಡುಬಿದಿರೆ : ಕಳೆದ ನಲುವತ್ತೆರಡು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2022ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು, ದಕ್ಷಿಣ ಕನ್ನಡ ಮೂಲದವರಾದ ಡಾ. ಅಜಕ್ಕಳ ಗಿರೀಶ್ ಭಟ್ ಅವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಮತ್ತು ಬೆಂಗಳೂರಿನ ಎಂ.ಆರ್.ದತ್ತಾತ್ರಿ ಅವರಿಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಿದೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಯು ರೂಪಾಯಿ ಇಪ್ಪತೈದು ಸಾವಿರ ಗೌರವ ಧನ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದರೆ ವರ್ಧಮಾನ ಉದಯೋನ್ಮುಖ ಪ್ರಶಸ್ತಿಯು ರೂಪಾಯಿ ಹದಿನೈದು ಸಾವಿರ ಗೌರವ ಧನ, ತಾಮ್ರಪತ್ರದ ಜೊತೆ ಸನ್ಮಾನವನ್ನು ಒಳಗೊಂಡಿವೆ.
ಮೂಡುಬಿದಿರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠದ ಮಹಾಸಭೆಯು ಪೀಠದ ಅಧ್ಯಕ್ಷರಾದ ಶ್ರೀ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನ ತೀರ್ಪುಗಾರರಾದ ವಿಮರ್ಶಕ ಡಾ. ಬಿ. ಜನಾರ್ದನ ಭಟ್, ಪ್ರಾಧ್ಯಾಪಕ ಪ್ರೊ. ಬಿ.ಪಿ. ಸಂಪತ್ ಕುಮಾರ್ ಮತ್ತು ವಿಮರ್ಶಕ ಬೆಳಗೋಡು ರಮೇಶ ಭಟ್ ಅವರುಗಳುಳ್ಳ ತ್ರಿಸದಸ್ಯ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ. ಮೂಡುಬಿದಿರೆಯ ಸಮಾಜ ಮಂದಿರ ಸಭಾ (ರಿ.) ಸಪ್ಟೆಂಬರ್ ತಿಂಗಳಲ್ಲಿ ನಡೆಸುವ ದಸರಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ. ನಾ.ಮೊಗಸಾಲೆ ಅವರು ತಿಳಿಸಿದ್ದಾರೆ.
ಡಾ. ಅಜಕ್ಕಳ ಗಿರೀಶ ಭಟ್ : ದಕ್ಷಿಣ ಕನ್ನಡ ಮೂಲದ ಡಾ. ಅಜಕ್ಕಳ ಗಿರೀಶ್ ಭಟ್ಟರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು. ಮೂರು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನಗಳೊಂದಿಗೆ ಪ್ರಥಮ ರ್ಯಾಂಕಕಿನೊಂದಿಗೆ ಕನ್ನಡ ಸ್ನಾನಕೋತ್ತರ ಪದವಿಯನ್ನು ಪಡೆದಿರುವ ಅವರು ಇಂಗ್ಲೀಷಿನಲ್ಲಿಯೂ ಸ್ನಾನಕೋತ್ತರ ಪದವಿ ಮತ್ತು ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದು ಕಳೆದ ಮೂವತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಬೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೆಂಡಿನಲ್ಲಿಯೂ ಆಮಂತ್ರಿತ ಉಪನ್ಯಾಸ ನೀಡಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಕರ್ತವ್ಯ ನಿರ್ವಹಿಸಿದ್ದು, ಪ್ರಾಧಿಕಾರದಿಂದ ಅನೇಕ ಮಹತ್ವದ ಪ್ರಕಟಣೆಗಳು ಹೊರಬರಲು ಕಾರಣರಾಗಿದ್ದಾರೆ. ಮಂಗಳೂರು ವಿ.ವಿ ಅಕಾಡೆಮಿಕ್ ಕೌನ್ಸಿಲ್‌ನ ಮಾಜಿ ಸದಸ್ಯರಾದ ಅವರು ಹಂಪಿ ಕನ್ನಡ ವಿ.ವಿ.ಯ ಪಿ.ಎಚ್.ಡಿ, ಎಂಫಿಲ್ ಮಾರ್ಗದರ್ಶಕರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ಕರ್ನಾಟಕ ರಾಜ್ಯದ ಭಾಷಾ ಬೋಧನೆಗೆ ಸಂಬಂಧಿಸಿದ ಪೊಸಿಶನ್ ಪೇಪರ್ ಸಿದ್ಧತಾ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೀಷ್ ಪಳಗಿಸೋಣ, ಅಗೆ ಬಗೆ, ಅಗ್ನಿರಸ, ಡಿಆರ್ ಮೂಡುಪಡು, ಅಸತ್ಯ ಅಥವಾ ಸತ್ಯ, ಹಿತಸಾಹಿತ್ಯ, ಸಹಿತಸಂವಾದ, ಬಹುವಚನಕ್ಕೊಂದೇ ತತ್ವ, ಒರೆದ ದನಿ ಮುಂತಾದವು ಅವರ ಪ್ರಮುಖ ಕೃತಿಗಳು.
ಶ್ರೀ ಎಂ.ಆರ್. ದತ್ತಾತ್ರಿ : ಚಿಕ್ಕಮಗಳೂರು ಮೂಲದ ಶ್ರೀ ಎಂ.ಆರ್. ದತ್ತಾತ್ರಿ ಅವರು ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿಯೂ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡವರು. ಮೈಸೂರು ವಿ.ವಿ.ಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕೆ.ಜಿ.ಎಫ್, ಪುಣೆ, ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲೀಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಪ್ರಸ್ತುತ ಬೆಂಗಳೂರಿನಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಇ.ಆರ್.ಪಿ. ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಕೆಲಸ ನಿರ್ವಹಿಸಿದ ಅನುಭವ ಇವರದ್ದು. ಅಮೇರಿಕ ಮತ್ತು ಭಾರತದ ಅನೇಕ ಕಂಪೆನಿಗಳಿಗೆ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಲ್ಕು ಕಾದಂಬರಿ, ಮೂರು ಅಂಕಣ ಬರಹಗಳ ಸಂಕಲನ, ಒಂದು ಕವನ ಸಂಕಲನದ ಜೊತೆಗೆ ಸಂಪಾದನೆ ಮತ್ತು ಅನುವಾದ ಕೃತಿಗಳೂ ಪ್ರಕಟಗೊಂಡಿದ್ದು ಹಲವು ಪ್ರತಿಷ್ಠಿತ ಪ್ರಶಸ್ತಿಗಳೂ ಅವರ ಮುಡಿಗೇರಿವೆ.