ಹೂವೊಂದು ಸೂರ್ಯನ ಮೃದುಸ್ಪರ್ಶಕ್ಕೆ ಮೆಲ್ಲನೆ ಅರಳಿ ಸುತ್ತೆಲ್ಲ ಪರಿಮಳವನ್ನು ಹರಡುವಂತೆ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಪ್ರಭೆ ಹೊರ ಜಗತ್ತಿಗೆ ಹರಡಿ ತನ್ನ ಅಸ್ತಿತ್ವವನ್ನು ಸಾರುತ್ತದೆ. ತನ್ನತ್ತ ಆಕರ್ಷಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತಳಾಗಿ ತನ್ನ ಕ್ರಿಯಾಶೀಲತೆ ಹಾಗೂ ಸಾಮರ್ಥ್ಯದಿಂದ ಹೆಜ್ಜೆ ಗುರುತು ಮೂಡಿಸುತ್ತಿರುವ ಪ್ರತಿಭೆ ಉಪಾಸನಾ ಪಂಜರಿಕೆ.
27.03.2008ರಂದು ಅರವಿಂದ ಪಂಜರಿಕೆ ಹಾಗೂ ಚಂದ್ರಿಕ ಇವರ ಮಗಳಾಗಿ ಉಪಾಸನ ಪಂಜರಿಕೆ ಜನನ. ೧೦ನೇ ತರಗತಿಯನ್ನು A+ ಗ್ರೇಡ್ ಗಳೊಂದಿಗೆ (97%) ಪೂರ್ಣಗೊಳಿಸಿರುತ್ತಾರೆ. ಸೂರ್ಯನಾರಾಯಣ ಪದಕಣ್ಣಾಯ ಅವರಿಂದ ಯಕ್ಷಗಾನ ಬಾಲಪಾಠ ಕಲಿತು, ರಕ್ಷಿತ್ ಪಡ್ರೆ ಅವರಿಂದ ಹೆಚ್ಚಿನ ಹೆಜ್ಜೆಗಾರಿಕೆ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರಿಂದ ಭಾಗವತಿಕೆ ಅಭ್ಯಾಸವನ್ನು ಮಾಡುತ್ತಿದ್ದಾರೆ.
ಕಥೆಯ ಬಗ್ಗೆ ಮೊದಲು ತಿಳಿದುಕೊಳ್ಳುವುದು, ನಂತರ ಪಾತ್ರದ ಪೂರ್ವಾಪರಗಳ ಬಗ್ಗೆ ಅರಿತುಕೊಳ್ಳುವುದು. ಯಾವ ರೀತಿ ಪಾತ್ರ ಪ್ರಸ್ತುತಿ ಮಾಡುವುದೆಂದು ನಿರ್ಧರಿಸುವುದು. ಚೌಕಿಯಲ್ಲಿರುವ ಹಿರಿಯರಿಂದ ಸಲಹೆಗಳನ್ನು ಪಡೆದುಕೊಳ್ಳುವುದು. ಹೆಚ್ಚಿನ ವಿಷಯಗಳನ್ನು ಹಿಮ್ಮೇಳದವರಿಂದ ತಿಳಿದುಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಉಪಾಸನಾ.
ಸುದರ್ಶನ ವಿಜಯ, ಶಶಿಪ್ರಭಾ ಪರಿಣಯ ಇವರ ನೆಚ್ಚಿನ ಪ್ರಸಂಗಗಳು. ಸುದರ್ಶನ, ಮಕರಿ, ತಿಲೋತ್ತಮೆ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಪ್ರಸಂಗ ಆರಂಭವಾಗುವುದರ ಮೊದಲು ಪೂರ್ವರಂಗವೆನ್ನುವ ಕ್ರಮವೊಂದು ಪರಂಪರಾಗತವಾಗಿ ಬಂದಿದ್ದು ಹಲವಾರು ಮೇಳಗಳು ಪೂರ್ವರಂಗದ ಕೆಲವು ಭಾಗಗಳನ್ನು ವಿಪೇಕ್ಷಿಸಿ ಶಾಸ್ತ್ರವೆಂಬಂತೆ ಬಾಲಗೋಪಾಲರು, ಮುಖ್ಯ ಸ್ತ್ರೀವೇಷ, ಪೀಠಿಕೆ ಸ್ತ್ರೀವೇಷಗಳಂತಹ ಭಾಗಗಳನ್ನು ಮಾತ್ರ ಪ್ರಸ್ತುತ ಪಡಿಸುತ್ತವೆ. ಅರ್ಧನಾರೀಶ್ವರ, ಚಪ್ಪರಮಂಚಗಳಂತಹ ಭಾಗಗಳನ್ನು ನಾನು ಕಂಡದ್ದೇ ಇಲ್ಲ. ಇಂತಹ ಸಮಯದಲ್ಲಿ ಕಾಲಮಿತಿ ಯಕ್ಷಗಾನದ ಪ್ರಸ್ತುತಿಯಿಂದ ಪೀಠಿಕೆ ಸ್ತ್ರೀವೇಷದ ಪ್ರಸ್ತುತಿಯೂ ಅಳಿದು ಹೋಗಿದೆ. ಭಾಗವತಿಕೆ, ಮದ್ದಳೆ, ಚೆಂಡೆಗಳ ಅಭ್ಯಾಸಕ್ಕೆ ಪೂರ್ವರಂಗವೇ ಆಧಾರವಾಗಿದ್ದು ಅದರ ಅಳಿವು ಅತ್ಯಂತ ಖೇದಕರವಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನ ಹಲವು ರಸಭಾವಗಳ ಸಂಗಮವಾಗಿದ್ದರಿಂದ ಹಲವಾರು ಬಗೆ ಕಣ್ಣುಗಳು ಇದನ್ನು ಆಸ್ವಾದಿಸುತ್ತದೆ.
ಬಪ್ಪನಾಡು, ಧರ್ಮಸ್ಥಳ, ದೇಂತಡ್ಕ, ಸುಂಕದಕಟ್ಟೆ, ಮಲ್ಲ, ಬೆಂಕಿನಾಥೇಶ್ವರ, ಮೇಳಗಳಲ್ಲಿ ಅತಿಥಿಯಾಗಿ ತಿರುಗಾಟ ಮಾಡಿರುತ್ತಾರೆ ಹಾಗೂ ನಾಟ್ಯ ವೈಭವಗಳಲ್ಲಿ ಪಾತ್ರವನ್ನು ಮಾಡಿರುತ್ತಾರೆ ಉಪಾಸನಾ.
5ನೇ ತರಗತಿಯಲ್ಲಿರುವಾಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಯಕ್ಷಗಾನದ 50 ದಿಗಿಣ ಹಾರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ, ತುಳುನಾಡ ಸಿರಿ ಕೇದಗೆ ಎಂಬ ಬಿರುದು, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಸನ್ಮಾನ ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕಥೆ, ಕವನಗಳ ರಚನೆ, ಯಕ್ಷಗಾನ ಭಾಗವತಿಕೆ, ಸಂಗೀತ ಇವರ ಹವ್ಯಾಸಗಳು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.