ಮಂಗಳೂರು: ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಮೂರನೇ ಚತುರ್ಮಾಸದ ಏಳು ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ದಿನಾಂಕ 21-06-2023ರಂದು ಸಿಂಡಿಕೇಟ್ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಮಂಗಳ ಪಠ್ಯಪುಸ್ತಕ ಮಾಲಿಕೆಯಡಿ ಪ್ರಕಟಿಸಲಾದ ಕಲಾಮಂಗಳ, ವಾಣಿಜ್ಯ ಮಂಗಳ, ಮುಕ್ತ ಮಂಗಳ, ನಿರ್ವಹಣಾ ಮಂಗಳ, ಗಣಕ ಮಂಗಳ, ಸೌಂದರ್ಯ ಮಂಗಳ, ವಿಜ್ಞಾನ ಮಂಗಳ ಎಂಬ ಕೃತಿಗಳನ್ನು ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಬಿಡುಗಡೆಗೊಳಿಸಿ ಮಾತನಾಡುತ್ತಾ “ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯ ಪುಸ್ತಕಗಳಿಗೆ ಅತೀ ಹೆಚ್ಚು ಮಹತ್ವವಿದ್ದು ಅದು ತಲೆಮಾರುಗಳ ಆಲೋಚನೆಯನ್ನು ರೂಪಿಸುತ್ತದೆ. ಅಂತಹ ಪಠ್ಯರಚನೆಯಲ್ಲಿ ಪೂರ್ವಾಗ್ರಹಗಳು, ಜ್ಞಾನಕಿಂತ ಹೊರತಾದ ಹಿತಾಸಕ್ತಿ ಇರಬಾರದು. ಮಂಗಳೂರು ವಿವಿಯ ಕನ್ನಡ ಪಠ್ಯಗಳನ್ನು ಎಲ್ಲರ ಸಹಭಾಗಿತ್ವದಲ್ಲಿ ಸಕಾಲದಲ್ಲಿ ಸಂಪಾದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಅಧ್ಯಯನ ಮಂಡಳಿ ಮತ್ತು ಪ್ರಸಾರಾಂಗದ ಕಾರ್ಯ ಶ್ಲಾಘನೀಯ” ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ “ಮಂಗಳೂರು ವಿವಿಯ ಕನ್ನಡ ಪಠ್ಯ ಕರಾವಳಿಯ ಅಸ್ಮಿತೆ ಮತ್ತು ಮುದ್ರಣದ ಗುಣಮಟ್ಟದಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಎನ್.ಇ.ಪಿ. ಪೂರಕವಾಗುವಂತೆ ಶ್ರದ್ಧೆಯಿಂದ ರೂಪಿಸಿದ ಇಲ್ಲಿನ ಪಠ್ಯಗಳು ಮಾದರಿಯಾಗಿವೆ” ಎಂದರು.
ಸಮಾರಂಭದಲ್ಲಿ ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ, ಸಿಂಡಿಕೇಟ್ ಸದಸ್ಯ ರವಿಚಂದ್ರ, ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಪಠ್ಯ ಪುಸ್ತಕ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಎಂ.ಕೆ, ನಾರಾಯಣ ಗುರು ಅಧ್ಯಯನ ಕೇಂದ್ರದ ಸಂಯೋಜಕ ಡಾ. ಗಣೇಶ್ ಅಮೀನ್ ಸಂಕಮಾರ್, ಪೂರ್ಣಪ್ರಜ್ಞ ಕಾಲೇಜು ಉಡುಪಿ ಇಲ್ಲಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಬಂಟ್ವಾಳ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ಚಂದ್ರ ಶಿಶಿಲ, ಕವಿ ಜ್ಯೋತಿ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.