ಸುಳ್ಯ : ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸುಳ್ಯ ಶಾಖೆಯ ವಾರ್ಷಿಕ ನೃತ್ಯೋತ್ಸವ ‘ಆರೋಹಣ 2023’ ಕಾರ್ಯಕ್ರಮವು ಸುಳ್ಯದ ರಂಗ ಮನೆಯಲ್ಲಿ ಮೇ 27 ಶನಿವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಕಿರಿಯ ಹಿರಿಯ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಿ ಜೊತೆಗೆ ಮಂಗಳೂರು ಶಾಖೆಯ ಮಾಧ್ಯಮಿಕ ಹಂತದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನವು ನಡೆಯಿತು.
ಸುಳ್ಯದಂತಹ ಪ್ರದೇಶದಲ್ಲಿ ಭರತನಾಟ್ಯದಂತಹ ಕಲೆಯನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ವೇದಿಕೆಯೇರಲು ಅವಕಾಶ ನೀಡಿದ್ದು ಶ್ಲಾಘನೀಯ. ಪ್ರಥಮ ಬಾರಿ ವೇದಿಕೆ ಏರಿದ ಪುಟಾಣಿ ಕಲಾವಿದೆಯರ ಜೊತೆಗೆ ಮಾಧ್ಯಮಿಕ ಹಂತದ ಕಲಾವಿದೆಯರ ನೃತ್ಯ ಕಾರ್ಯಕ್ರಮವು ಅತ್ಯಂತ ಮನೋಜ್ಞವಾಗಿ ಮೂಡಿ ಬಂತು. ಜೊತೆಗೆ ಕರ್ನಾಟಕ ಸರಕಾರದಿಂದ ನಡೆಸಲ್ಪಟ್ಟ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು. ನೃತ್ಯ ಗುರುಗಳ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ ಭಟ್ ಹಾಗೂ ಪದ್ಮನಾಭ ಭಟ್ ದಂಪತಿಗಳ ವತಿಯಿಂದ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ಜೊತೆಗೆ ಸುಳ್ಯ ಶಾಖೆಯ ಸಹ ಶಿಕ್ಷಕಿಯರಾದ ವಿದುಷಿ ಅಂಕಿತಾ ರೈ, ವಿದುಷಿ ಮಂಜುಶ್ರೀ ರಾಘವ್, ಕು. ಅನ್ವಿತಾ ಎನ್, ಕು. ಅನಘ ಆರ್.ಯು. ಮತ್ತು ಕು. ಜಯಶ್ರೀ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಮಂಗಳೂರಿನ ಮಯೂರ ತಂಡದ ಕಲಾವಿದೆಯರಿಂದ ಪ್ರಸ್ತುತ ಪಡಿಸಲಾದ ನಾಲ್ಕು ನೃತ್ಯಬಂಧಗಳು ಪ್ರೇಕ್ಷಕರನ್ನು ಮೈ ನವಿರೇಳಿಸುವಂತಿತ್ತು.
ಕಾರ್ಯಕ್ರಮದಲ್ಲಿ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿಯಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಕಾರ್ಯದರ್ಶಿಗಳಾದ ರಾಧಾಕೃಷ್ಣ ಭಟ್ ಹಾಗೂ ರಂಗಮನೆಯ ರೂವಾರಿ ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು. ಕು. ಮಹಿಮಾ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.