ಪೆರ್ಲ : ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಇವುಗಳ ಸಹಯೋಗದಲ್ಲಿ ಪೆರ್ಲದ ವ್ಯಾಪಾರಿ ಭವನದಲ್ಲಿ ನುಡಿನಮನ ಹಾಗೂ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ದಿನಾಂಕ 25-06-2023ರಂದು ಹಮ್ಮಿಕೊಳ್ಳಲಾಯಿತು. ಸಾಹಿತಿ, ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎನ್. ಭಟ್ ಸೈಪಂಗಲ್ಲು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ವ್ಯಕ್ತಿಯ ಸಾವು ಜನಮಾನಸದಲ್ಲಿ ಪರಿಣಾಮ ಬೀರಬೇಕು. ಈ ರೀತಿಯ ಶ್ರೀಮಂತ ಸಾವನ್ನು ಪಡೆಯಬೇಕಾದರೆ ಬದುಕಿನಲ್ಲಿ ಅಪಾರ ಪರಿಶ್ರಮಪಟ್ಟಿರಬೇಕು” ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಿಧನರಾದ ವ್ಯಾಪಾರಿ ಹಾಗೂ ಸಾಹಿತ್ಯ ಪೋಷಕರಾಗಿದ್ದ ಅಬ್ದುಲ್ ರಹಿಮಾನ್ ಅವರಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಪೆರ್ಲ ಘಟಕದ ಉಪಾಧ್ಯಕ್ಷ ಪ್ರಸಾದ್ ಟಿ. ಪೆರ್ಲ ಅವರು ನುಡಿನಮನ ಸಲ್ಲಿಸಿ ಅಬ್ದುಲ್ ರಹಿಮಾನ್ ಅವರ ಸಂಘಟನಾ ಸಾಮರ್ಥ್ಯ, ಸಾಧನೆ ಹಾಗೂ ನಿಸ್ವಾರ್ಥ ಮನೋಭಾವವನ್ನು ಸ್ಮರಿಸಿದರು. ಬಜಕೂಡ್ಲು ಕೃಷ್ಣ ಪೈ ಮಾತನಾಡಿ, ಅಬ್ದುಲ್ ರಹಿಮಾನ್ ಅವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಆ ಬಳಿಕ ನಡೆದ ಮುಂಗಾರು ಕವಿಗೋಷ್ಠಿಯಲ್ಲಿ ನರಸಿಂಹ ಭಟ್ ಕಟ್ಟದ ಮೂಲೆ, ಶಂಕರ ನಾರಾಯಣ ಭಟ್ ಕಕ್ಕೆಪ್ಪಾಡಿ, ನಿರ್ಮಲಾ ಶೇಷಪ್ಪ ಖಂಡಿಗೆ, ನಳನಿ ಟೀಚರ್, ಹರ್ಷಿತಾ ಪಿ., ರಿತೇಶ್ ಕಿರಣ್ ಕಾಟುಕುಕ್ಕೆ, ಸವಿತಾ ರಾಮ ಕುಂಜ, ನಾರಾಯಣ ನಾಯ್ಕ ಕುದ್ಕೋಳಿ, ಸುಜಯಾ ಸಜಂಗದ್ದೆ, ಪ್ರಮೀಳಾ ಚುಳ್ಳಿಕಾನ, ಬಾಲಕೃಷ್ಣ ನಾಯ್ಕ ಏಳ್ಕಾನ ಅವರು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು. ಹಿರಿಯ ಸಾಹಿತಿ, ವಿಶ್ರಾಂತ ಜಿಎಚ್ಎಸ್‌ಎಸ್‌ನ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಹಿರಿಯ ಸಾಹಿತಿ ಹರೀಶ್ ಪೆರ್ಲ ಉಪಸ್ಥಿತರಿದ್ದರು. ಹರ್ಷಿತಾ ಪ್ರಾರ್ಥಿಸಿದರು. ಸಮತಾ ಸಾಹಿತ್ಯ ವೇದಿಕೆಯ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ನಳಿನಿ ಟೀಚರ್ ಸೈಪಂಗಲ್ಲು ನಿರೂಪಿಸಿದರು.