ಆಂಧ್ರ ಪ್ರದೇಶ: ನವದೆಹಲಿಯ ಗೋಲ್ಡನ್ ಗ್ಲೋಬ್ ಟ್ರಸ್ಟ್ ಮತ್ತು ವಿಶಾಖಪಟ್ಟಣದ ಪ್ರತಿಮಾ ಫೌಂಡೇಶನ್ ಜಂಟಿ ಸಹಯೋಗದಲ್ಲಿ ಆಗಸ್ಟ್ ತಿಂಗಳ 5 ಮತ್ತು 6ನೇ ತಾರೀಕಿನಂದು ಆಂಧ್ರ ಪ್ರದೇಶದ ಗುಂಟೂರಿನಲ್ಲಿ ‘ದಕ್ಷಿಣ ಭಾರತೀಯ ಭಾಷೆಗಳ ಸಮಕಾಲೀನ ಕಥನ ಸಾಹಿತ್ಯ’ದ ಕುರಿತು ನಡೆಯಲಿರುವ ಒಂದು ದಿನದ ರಾಷ್ಟ್ರಮಟ್ಟದ ವಿಚಾರಗೋಷ್ಠಿಗೆ ಯುವ ವಿಮರ್ಶಕ ಮತ್ತು ಲಲಿತ ಪ್ರಬಂಧಕಾರರಾದ ವಿಕಾಸ ಹೊಸಮನಿಯವರು ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ‘ಸಮಕಾಲೀನ ಕನ್ನಡ ಕಥಾ ಸಾಹಿತ್ಯ’ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಲಿದ್ದಾರೆ.
ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದರೂ ಆಧುನಿಕ ಕನ್ನಡ ಸಾಹಿತ್ಯ, ಭಾರತೀಯ ಸಾಹಿತ್ಯ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಓದಿಕೊಂಡಿರುವ ವಿಕಾಸ ಹೊಸಮನಿಯವರು ಹೊಸ ಒಳನೋಟಗಳಿಂದ ಕೂಡಿದ ಸಾಹಿತ್ಯಿಕ ಲೇಖನಗಳ ಮೂಲಕ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸಿದ ಯುವ ಪ್ರತಿಭೆಯಾಗಿದ್ದಾರೆ. ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸಂಚಾಲಕರಾಗಿ, ರಾಜ್ಯಮಟ್ಟದ ಸಾಹಿತ್ಯಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇವರ ‘ಕನ್ನಡಿ ಮತ್ತು ಕಂದೀಲು’ ಎಂಬ ವಿಮರ್ಶಾ ಲೇಖನಗಳ ಸಂಕಲನ ಶೀಘ್ರದಲ್ಲೇ ಪ್ರಕಟವಾಗಲಿದೆ. ‘ಉತ್ತರ ಕರ್ನಾಟಕದ ಮಂದಿ’ ಮತ್ತು ‘ಹೃದಯದ ಹಾದಿ’ ಕೃತಿಗಳು ಈ ವರ್ಷ ಪ್ರಕಟವಾಗಲಿವೆ.