ಹವ್ಯಾಸಿ ಯಕ್ಷಗಾನ ರಂಗದಲ್ಲಿ ಎಲ್ಲಾ ರೀತಿಯ ವೇಷಗಳನ್ನು ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದರಲ್ಲಿಯೂ ಇತ್ತಿಚಿನ ದಿನಗಳಲ್ಲಿ ಸ್ತ್ರೀ ವೇಷ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಇಂತಹ ಸಮಯದಲ್ಲಿ ಅನೇಕ ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪ್ರದಾಯ ಶೈಲಿಯಲ್ಲಿಯೇ ನಾಟ್ಯ, ಅಭಿನಯ, ಮಾತು ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಲ್ಲಿಯೂ ಕಲಾಭಿಮಾನಿಗಳ ಮನದಲ್ಲಿ ಸಂತಸವನ್ನುಂಟು ಮಾಡಿದ ಹವ್ಯಾಸಿ ಯಕ್ಷ ಕಲಾವಿದ ಕೆ ಶಂಕರ ದೇವಾಡಿಗ.
10.05.1967ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ಕಡದ ಗೋವಿಂದ ದೇವಾಡಿಗ ಹಾಗೂ ಪದ್ದು ದೇವಾಡಿಗ ಮಗನಾಗಿ ಜನನ. ಆರನೇ ತರಗತಿವರೆಗೆ ವಿದ್ಯಾಭ್ಯಾಸ. ಕಾರ್ಕಡದಲ್ಲಿ ಯಕ್ಷಗಾನ ತರಬೇತಿ ನಡೆಯುತಿತ್ತು, ಕುಟುಂಬದಲ್ಲಿ ಯಕ್ಷಗಾನ ಹಿನ್ನಲೆ ಇಲ್ಲದೇ ಇದ್ದರೂ ಯಕ್ಷಗಾನದ ಆಸಕ್ತಿ ತುಂಬಾ ಇತ್ತು. ಹಾಗಾಗಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದರು. ಯಕ್ಷಗಾನದ ಪ್ರಥಮ ಗುರುಗಳು ಸುಬ್ರಾಯ ಮಲ್ಯ ಹಳ್ಳಾಡಿಯವರು.
ಯಕ್ಷಗಾನ ರಂಗದ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಅಂಬೆ, ದ್ರೌಪದಿ, ಸುಭದ್ರೆ, ಸುರುಚಿ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಪೌರಾಣಿಕ ಹಾಗೂ ಸಾಮಾಜಿಕ ಎರಡೂ ಕೂಡ ಅನಿವಾರ್ಯ.
ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ.
ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.
ಶಂಕರ ದೇವಾಡಿಗರು ಮಣೂರು ಮಹಾಲಿಂಗೇಶ್ವರ ಕಲಾ ಸಂಘ, ಅಘೋರೇಶ್ವರ ಕಲಾ ರಂಗ ಚಿತ್ರಪಾಡಿ, ಕುಲಮಹಾಸ್ತಿ ಅಮ್ಮ ಬೆಣ್ಣೆಕುದ್ರು, ರಾಮ ಪ್ರಸಾದಿತ ಯಕ್ಷಗಾನ ಮಂಡಳಿ ಕೋಡಿ ಕನ್ಯಾನ ಹೀಗೆ ಅನೇಕ ಸಂಘಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಶ್ರೀ ಪ್ರಸಾದ್ ಮೊಗೆಬೆಟ್ಟು ಸಾರಥ್ಯದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾ ರಂಗ ಕೋಟ ಇಲ್ಲಿಯ ಪ್ರಧಾನ ಸ್ತ್ರೀವೇಷಧಾರಿಯಾಗಿ ಸೇವೆಯನ್ನು ಮಾಡುತ್ತಿದ್ದಾರೆ. ತಮ್ಮ ಯಕ್ಷಗಾನ ಪಯಣದಲ್ಲಿ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಶಂಕರ ದೇವಾಡಿಗ.
ಇವರ ಯಕ್ಷಗಾನ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
10.04.2000ರಂದು ಶಂಕರ ದೇವಾಡಿಗ ಅವರು ತಾರಾ ಅವರನ್ನು ಮದುವೆಯಾಗಿ ಮಗಳು ಶ್ವೇತಾ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು