ಡಾ. ಅಕ್ಷತಾ ರಾವ್ ಹುಟ್ಟಿ ಬೆಳೆದದ್ದು ಮಂಗಳೂರು. ಎಳವೆಯಲ್ಲಿಯೇ ಎಲ್ಲಾ ರಂಗದಲ್ಲೂ ಆಸಕ್ತಿ ಬೆಳೆಸಿಕೊಂಡು ಬಂದಿರುವ ಅಕ್ಷತಾ ಹುಟ್ಟು ಕಲಾವಿದೆ ಎಂದರೂ ತಪ್ಪಾಗಲಾರದು. ಇವರು ಕಾವಿನಕಲ್ಲು ಹೊಸಬೆಟ್ಟು ಶ್ರೀನಿವಾಸ್ ಪ್ರಸಾದ್ ಹಾಗೂ ಶ್ರೀಮತಿ ವೀಣಾ ದಂಪತಿಯ ಸುಪುತ್ರಿ. ಕುಟುಂಬದ ಏಕೈಕ ಕಣ್ಮಣಿಯಾದ ಅಕ್ಷತಾರ ಕಲಾಸಕ್ತಿಗೆ ಎಲ್ಲಾ ರೀತಿಯಿಂದ ನೀರೆರೆದು ಪೋಷಿಸಿದವರು ಹೆತ್ತವರು.
ತನ್ನ ಬಾಲ್ಯದ ಶಿಕ್ಷಣವನ್ನು ತಿಪಟೂರು ಜಿಲ್ಲೆ ತುರುವೆಕೆರೆ ತಾಲೂಕಿನಲ್ಲಿ ಮತ್ತು ಬಾಗಲಕೋಟೆಯ ಇಲೆಕಲ್ ಗ್ರಾಮದಲ್ಲಿ ಮುಗಿಸಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮಂಗಳೂರಿನ ಕೆನರಾ ಉರ್ವ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದ ಅಕ್ಷತಾಳ ಪ್ರತಿಭೆಗೆ ಕೆನರಾ ಶಾಲೆ ಉತ್ತಮ ವೇದಿಕೆ ಆಗಿತ್ತು. ನಂತರ ಪದವಿ ಪೂರ್ವ ಅಧ್ಯಯನವನ್ನು ಕೆನರಾ ಕಾಲೇಜಿನಲ್ಲಿ ಮುಗಿಸಿ ತನ್ನ ಎಂ.ಬಿ.ಬಿ.ಎಸ್. ಪದವಿಯನ್ನು ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ (ಕಿಮ್ಸ್ ಬೆಂಗಳೂರು) 3 ಚಿನ್ನದ ಪದಕದೊಂದಿಗೆ ಮುಗಿಸಿ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರ ಬಂದವರು. ವಿದುಷಿ ಸತ್ಯವತಿ ಮೂಡಂಬಡಿತ್ತಾಯ ಹಾಗೂ ವಿದ್ವಾನ್ ಕೃಷ್ಣ ಪವನ್ ಕುಮಾರ ಅವರ ಬಳಿ ತನ್ನ ಸಂಗೀತದ ಅಭ್ಯಾಸವನ್ನು ಮಾಡಿ ಕರ್ನಾಟಕ ಸಂಗೀತದ ವಿದ್ವತ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಭರತನಾಟ್ಯವನ್ನು ವಿದುಷಿ ಪ್ರತಿಮಾ ಶ್ರೀಧರ್ ರವರಲ್ಲೂ ಹಾಗೂ ಪಿಟೀಲು ವಾದನವನ್ನು ವಿದ್ವಾನ್ ಟಿ.ಜಿ. ಗೋಪಾಲಕೃಷ್ಣರವರಲ್ಲಿ ಅಭ್ಯಾಸ ಮಾಡಿರುವರು. ಚಿತ್ರಕಲೆಯಲ್ಲೂ ತನ್ನ ಛಾಪನ್ನು ತೋರಿಸಿ ಸೀನಿಯರ್ ಗ್ರೇಡ್ ಪರೀಕ್ಷೆ ಪಾಸಾಗಿ ಅನೇಕ ಕಲಾಕೃತಿ ರಚಿಸಿ ಜನಮೆಚ್ಚುಗೆ ಪಡೆದಿದ್ದಾರೆ. ತಂದೆ ಸ್ಟೇಟ್ ಬ್ಯಾಂಕಿನ ಅಧಿಕಾರಿಯಾಗಿದ್ದು, ಬೇರೆ ಬೇರೆ ಊರಿಗೆ ವರ್ಗಾವಣೆಯಾಗುತ್ತಿದ್ದ ಕಾರಣ ಅಕ್ಷತಾ ಎಲ್ಲಾ ಕಡೆ ತನ್ನ ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಯಿತು.
ವೈದ್ಯಕೀಯ ಶಿಕ್ಷಣದ ಜೊತೆಗೆ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ ಮುಂತಾದ ಕಡೆ ಸಂಗೀತ ಕಛೇರಿಗಳನ್ನು ನೀಡಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಅಕ್ಷತಾ ತನ್ನ ಎಂ.ಡಿ. ಪದವಿಯನ್ನು ದೆಹಲಿಯ ಪ್ರತಿಷ್ಠಿತ AIIMS (All India Institute of Medical Science) ಕಾಲೇಜಿನಲ್ಲಿ Geriatric Medicine (ಹಿರಿಯ ನಾಗರಿಕರ ವೈದ್ಯೆ)ನಲ್ಲಿ ಮಾಡಿ ಅಲ್ಲಿಯೂ ಕೂಡ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಏಮ್ಸ್ ನಲ್ಲಿಯೇ ಸೀನಿಯರ್ ಡಾಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೋನದ ಸಮಯದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಮಾಡಿ ಪ್ರಶಂಸೆಗೆ ಪಾತ್ರವಾಗಿರುವ ಅಕ್ಷತಾ ದೆಹಲಿಯ ಸುಪ್ರಿಂ ಕೋರ್ಟ್ ನ ಒಂದು ಸಮಾರಂಭದಲ್ಲಿ ಭಾಗವಹಿಸಿ ಅಲ್ಲಿನ ಜನರಿಗೆ ಸಂಗೀತದ ರಸದೌತಣ ನೀಡಿದ್ದು ಶ್ಲಾಘನೀಯ.
ಮಾರ್ಚ್ 9, 2023ರಂದು ಡಾ. ಶೋಧನ್ ಐತಾಳರನ್ನು ವಿವಾಹವಾದ ಶ್ರೀಮತಿ ಅಕ್ಷತಾ ತನ್ನ ಜೀವನದ ಇನ್ನೊಂದು ಘಟ್ಟಕ್ಕೆ ಕಾಲಿರಿಸಿದ್ದಾರೆ. ಕಲಾ ಪೋಷಕರಾಗಿರುವ ಶ್ರೀ ರಘುರಾಮ್ ಐತಾಳ್ ಹಾಗೂ ಶ್ರೀಮತಿ ವಿಜಯಾ ಇವರ ಸುಪುತ್ರರಾದ ಡಾ. ಶೋಧನ್ ವೀಣಾ ವಾದನದಲ್ಲಿ ಪ್ರತಿಭಾವಂತರಾಗಿದ್ದು, ತನ್ನ ಕಲಾ ಪ್ರೌಢಿಮೆಯೊಂದಿಗೆ ಅನೇಕ ಕಾರ್ಯಕ್ರಮ ನೀಡಿ ಜನಮೆಚ್ಚುಗೆ ಪಡೆದವರು. ಇದೆಲ್ಲವೂ ಶ್ರೀಮತಿ ಅಕ್ಷತಾರ ಕಲಾಸಕ್ತಿಗೆ ಇನ್ನೂ ಹೆಚ್ಚಿನ ಸ್ಪೂರ್ತಿ ದೊರೆಯುವಲ್ಲಿ ಸಹಕಾರಿಯಾಗಲಿದೆ.
ದೆಹಲಿಯ ಕಾಲೇಜಿನಲ್ಲಿ ಕಾರ್ಡಿಯೊಲೋಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಡಾ. ಶೋಧನ್ ಮತ್ತು ಶ್ರೀಮತಿ ಅಕ್ಷತಾರ ಮುಂದಿನ ಭವಿಷ್ಯ ಉಜ್ವಲವಾಗಲಿ, ಈ ಪತಿ ಪತ್ನಿಯರು ಸಮಾಜಕ್ಕೆ ಮಾದರಿಯಾಗಿ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಹಾರೈಸೋಣ.