ಮಂಗಳೂರು : ಯಕ್ಷ ರಂಗದ ಪ್ರತಿಭಾವಂತ ಕಲಾವಿದ ದೀಪಕ್ ರಾವ್ ಪೇಜಾವರ ಅವರ ಪರಿಕಲ್ಪನೆ, ನಿರ್ಮಾಣ, ನಿರ್ದೇಶನದಲ್ಲಿ ‘ಹರಿ ದರುಶನ’ ಏಕವ್ಯಕ್ತಿ ನವ ರೂಪಂ ಎಂಬ ಯಕ್ಷಗಾನದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ದಿನಾಂಕ : 16-07-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡುತ್ತಾ “ಯಕ್ಷಗಾನ ವಿಮರ್ಶೆ ಅಂದರೆ ಕಲಾಕೃತಿಯನ್ನು ಅರ್ಥ ಮಾಡುವ ಪ್ರಯತ್ನವೇ ಹೊರತು ದೋಷ ಹೇಳುವುದಲ್ಲ ಪ್ರಯೋಗ ರಂಗಭೂಮಿಯಲ್ಲಿ ಅನೇಕ ಸವಾಲುಗಳಿವೆ. ಕಲಾವಿದರು ತಮ್ಮ ವೇಷದಲ್ಲಿ ತನ್ನನ್ನೇ ಮೀರುವ ಪ್ರಯತ್ನ ಮಾಡಲು ಮುಂದಾಗಬೇಕು” ಎಂದು ಹೇಳಿದರು.
ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್, ಅಶೋಕ್ ಭಟ್ ಉಜಿರೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮ೦ಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರ ಸಮಿತಿ ಮ೦ಗಳೂರಿನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಅಂಕಣಕಾರ, ಉದ್ಯಮಿ ಕಿರಣ್ ಉಪಾಧ್ಯಾಯ ಉಪಸ್ಥಿತರಿದ್ದರು.
ಹಿರಿಯ ಯಕ್ಷಗಾನ ಕಲಾವಿದರಾದ ಪಿ.ವಿ. ಪರಮೇಶ್, ಪಿ. ಸತ್ಯಾನಂದ ರಾವ್ ಪೇಜಾವರ ಅವರಿಗೆ ಗುರುವಂದನೆ ನಡೆಯಿತು. ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಮಾಧವ ಶೆಟ್ಟಿ ಬಾಳ, ದಿ. ದಿಲೀಪ್ ಸುವರ್ಣ, ರಮೇಶ್ ಕುಲಶೇಖರ, ಜನಾರ್ದನ ಅಮ್ಮುಂಜೆ, ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ, ಕೋದಂಡರಾಮ ಯಕ್ಷಗಾನ ಕಲಾಮಂಡಳಿ, ಮೋಹಿನಿ ಕಲಾಸಂಪದ ಕಿನ್ನಿಗೋಳಿ, ಶರತ್ ಕದ್ರಿ, ರವಿ ಅಲೆವೂರಾಯ, ವಿದ್ಯಾ ಕೋಳ್ಯೂರು, ಸುಮಂಗಲಾ ರತ್ನಾಕರ್ ಅವರನ್ನು ತುಲಾಭಾರದೊಂದಿಗೆ ಅಭಿನಂದಿಸಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ಸ್ವಾಗತಿಸಿ, ಪ್ರಸ್ತಾವನೆಗೈದರು.
ಉದ್ಘಾಟನೆಗೂ ಮುನ್ನ ಬಹರೇನ್ ಕನ್ನಡ ಸಂಘದ ‘ಯಕ್ಷೋಪಾಸನ ಯಕ್ಷಗಾನ ಅಧ್ಯಯನ ಕೇಂದ್ರ’ದ ವಿದ್ಯಾರ್ಥಿಗಳಿಂದ ದೀಪಕ್ ಪೇಜಾವರ ನಿರ್ದೇಶನದಲ್ಲಿ ‘ಗಿರಿಜಾ ಕಲ್ಯಾಣ’ ಅದ್ಭುತವಾಗಿ ಪ್ರದರ್ಶನಗೊಂಡಿತು. ಬಹುತೇಕ ಬಾಲಕಿಯರೇ ಇದ್ದ ತಂಡವು ಪ್ರಸಂಗದ ಉದ್ದಕ್ಕೂ ಪ್ರಬುದ್ಧತೆಯನ್ನು ಮೆರೆದು ಕಲಾಭಿಮಾನಿಗಳಿಗೆ ರಸದೌತಣ ನೀಡಿದತು.
ಅನುಭವಿ ಕಲಾವಿದರು ಭಾಗವತಿಕೆ, ಚಂಡೆ ಮದ್ದಳೆಯ ಹಿಮ್ಮೇಳ ಒದಗಿಸಿದ ಪ್ರಸಂಗದಲ್ಲಿ ಲಯಬದ್ಧ ಕುಣಿತ, ವೀರ- ಶೃಂಗಾರ ರಸವನ್ನು ಮನೋಜ್ಞವಾಗಿ ಸೂಸಿದ ಕಲಾವಿದರು ಯುದ್ಧ ರಂಗದಂಥ ಗಂಭೀರ ಸಂದರ್ಭಗಳನ್ನೂ ಸುಲಲಿತವಾಗಿ ಅಭಿನಯಿಸಿ, ಮೆಚ್ಚುಗೆ ಗಳಿಸಿದರು.
ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ, ರೋಹಿತ್ ಉಚ್ಚಿಲ ಮದ್ದಳೆಯಲ್ಲಿ, ಕೌಶಿಕ್ ರಾವ್ ಪುತ್ತಿಗೆ ಚೆಂಡೆಯಲ್ಲಿ ಮತ್ತು ಹರೀಶ್ ಆಚಾರ್ಯ ಚಕ್ರತಾಳದಲ್ಲಿ ಮಿಂಚಿದರು. ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರಾತ್ರಿ ನಡೆದ ‘ಶಶಿಪ್ರಭ ಪರಿಣಯ’ ಪ್ರಸಂಗವು ಯಕ್ಷಪ್ರಿಯರ ಹೃದಯ ತಣಿಸಿತು.
ಶ್ರೀ ದೀಪಕ್ ರಾವ್ ಪೇಜಾವರ :
ಕರ್ನಾಟಕದ ಗಂಡುಕಲೆಯಾದ ಯಕ್ಷಗಾನವು ಹಲವು ಧೀಮಂತ ಪ್ರತಿಭೆಗಳಿಗೆ ಸಾಧನೆಯ ವೇದಿಕೆಯಾಗಿದೆ. ಯಕ್ಷಗಾನದ ಎಲ್ಲಾ ವೇಷಗಳನ್ನು ಲೀಲಾಜಾಲವಾಗಿ ಅಭಿನಯಿಸಿ, ಅರ್ಥಪೂರ್ಣ ಮಾತುಗಾರಿಕೆ ಮತ್ತು ಅಭಿನಯದಿಂದ ಪಾತ್ರಕ್ಕೆ ಜೀವ ತುಂಬುವ ಬಹುಮುಖ ಪ್ರತಿಭೆಯೇ ಕಲಾವಿದ ದೀಪಕ್ ರಾವ್ ಪೇಜಾವರ.
ಬಾಲ್ಯದಲ್ಲೇ ಕಲಾಸಕ್ತರಾಗಿದ್ದ ಇವರು ಯಕ್ಷಗಾನ ಕಲಾವಿದರಾದ ಚಿಕ್ಕಪ್ಪ ಪೇಜಾವರ ಶ್ರೀ ಸತ್ಯಾನಂದ ರಾವ್ ಅವರಿಂದ ಬಾಲಪಾಠವನ್ನು ಪಡೆದರು. ಮುಂದೆ ಹಿರಿಯ ಗುರುಗಳಾದ ಶ್ರೀ ಪಿ.ವಿ. ಪರಮೇಶ್ ಇವರ ಶಿಷ್ಯನಾಗಿ ನಾಟ್ಯಾಭ್ಯಾಸವನ್ನು ಮುಂದುವರಿಸಿದರು. ತನ್ನ ಎಂಟನೆಯ ವಯಸ್ಸಿನಲ್ಲಿ ದೇವೇಂದ್ರ ಬಲದ ಪಾತ್ರದಲ್ಲಿ ಬಾಲಕಲಾವಿದನಾಗಿ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿ, ಹಲವಾರು ಅವಕಾಶ ಪಡೆದು ಕಲಾಪಕ್ವತೆ ಹೊಂದಿ ಇದೀಗ ಕಳೆದ ಮೂರು ದಶಕಕ್ಕೂ ಮಿಕ್ಕಿದ ರಂಗಾನುಭವದಿಂದ ಬಹುಬೇಡಿಕೆಯ ಕಲಾವಿದರಾಗಿ ಪ್ರಸಿದ್ಧರಾಗಿದ್ದಾರೆ.
ಎಲ್ಲಾ ತರದ ಪಾತ್ರಗಳನ್ನೂ ಸಮರ್ಥವಾಗಿ ರಂಗದಲ್ಲಿ ಮೆರೆಸಿದವರು ದೀಪಕ್ ರಾವ್. ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ವೇಷಗಳನ್ನು ಮಾಡಿ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಮುಡಿಗೇರಿಸಿದ ಹಿರಿಮೆ ಇವರದ್ದು.
ಹಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿ ತಂಡಗಳಿಗೆ ಯಕ್ಷಗಾನ ಕಲಿಸುವ ನಿರ್ದೇಶಕರಾಗಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಅನುಭವಿ ಗುರು. ಯಕ್ಷಪುರುಷೋತ್ತಮ, ಯಕ್ಷಮಣಿ, ಯಕ್ಷಸೂಡ, ಯಕ್ಷನಿಧಿ, ಯಕ್ಷಪ್ರದೀಪ ಮುಂತಾದ ಪುರಸ್ಕಾರಗಳು ಇವರ ಸಾಧನೆಗೆ ಸಂದ ಗೌರವ.
ಪ್ರವೃತ್ತಿಯಲ್ಲಿ ಯಕ್ಷಗಾನದಲ್ಲಿ ಸಕ್ರಿಯರಾಗಿರುವ ದೀಪಕ್ ವೃತ್ತಿಯಲ್ಲಿ ಉಪನ್ಯಾಸಕ. ಅನೇಕ ವರ್ಷಗಳ ಕಾಲ ಮಂಗಳೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದು, ಕಳೆದ ಏಳು ವರ್ಷಗಳಿಂದ ಕೊಲ್ಲಿರಾಷ್ಟ್ರ ಬಹರೇನ್‌ಗೆ ಬಂದು ಇಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯೊಂದರಲ್ಲಿ ತಮ್ಮ ವೃತ್ತಿಯನ್ನು ಮಾಡುತ್ತಿದ್ದಾರೆ. ಇವರ ಪತ್ನಿ ಶ್ವೇತಾ ರಾವ್ ಕೂಡ ಉಪನ್ಯಾಸಕಿ. ಇವರ ಮಗ ಮಹಸ್ವಿನ್ ರಾವ್ ಸಹ ತನ್ನ ತಂದೆಯಂತೆಯೇ ಕಲಾಸಕ್ತಿ ಹೊಂದಿ ಈಗಾಗಲೇ ರಂಗವನ್ನೇರಿ ಭವಿಷ್ಯತ್ತಿನ ಭರವಸೆಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ.
ಬಹರೇನ್ ಕನ್ನಡ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ‘ಯಕ್ಷೋಪಾಸನ ಅಧ್ಯಯನ ಕೇಂದ್ರ’ದ ನಾಟ್ಯಗುರುಗಳಾಗಿ ಹಿರಿಕಿರಿಯರಾದಿ ಅನೇಕ ಮಂದಿಗೆ ಯಕ್ಷಗಾನ ಕಲೆಯನ್ನು ಧಾರೆ ಎರೆಯುತ್ತಾ ಬಂದಿದ್ದಾರೆ. ಬಹರೇನ್ ಯಕ್ಷಗಾನ ಕಲಾವಿದರ ಅನೇಕ ಯಶಸ್ವೀ ಪ್ರದರ್ಶನಗಳು ಇವರ ದಕ್ಷ ನಿರ್ದೇಶನಕ್ಕೆ ಸಾಕ್ಷಿಯಾಗಿವೆ.