ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಎರಡು ದಿನಗಳ ತರಗತಿವಾರು ಸಾಂಸ್ಕೃತಿಕ ಸ್ಪರ್ಧೆ ‘ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮವು ದಿನಾಂಕ : 10-07-2023 ಮತ್ತು 11-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಕಾಮಿಡಿ ಕಿಲಾಡಿಗಳು ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಯೋಜಕ ವಿನ್ಯಾಸ್ ಹೊಸೊಳಿಕೆ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾ ಕೆ. ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕಲಾವಿದ ದೀಕ್ಷಿತ್ ಗೌಡ ಕುಂತೂರು ಪದವು ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ತದನಂತರ ದೀಕ್ಷಿತ್ ಗೌಡ ಇವರಿಂದ ಮಿಮಿಕ್ರಿ, ಪೂರ್ವ ವಿದ್ಯಾರ್ಥಿಗಳಾದ ಸ್ವರಾಜ್ ಇವರಿಂದ ಗಾಯನ, ದೇವಿ ದಾಸ್ ಇವರಿಂದ ಕೊಳಲು ವಾದನ, ಹರ್ಷಿತ್ ಇವರಿಂದ ತಬಲಾ ವಾದನ ನಡೆಯಿತು. ಸ್ಪರ್ಧೆಯಲ್ಲಿ ಒಂಬತ್ತು ತರಗತಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು, ದ್ವಿತೀಯ ಬಿಕಾಂ ‘ಎ’ – ಪ್ರಥಮ ಸ್ಥಾನ, ಪ್ರಥಮ ಬಿಎ – ದ್ವಿತೀಯ ಸ್ಥಾನ ಹಾಗೂ ತೃತೀಯ ಬಿಕಾಂ ‘ಬಿ’ – ತೃತೀಯ ಸ್ಥಾನ ಗಳಿಸಿತು.
ಸಮಾರೋಪ ಸಮಾರಂಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ತೀರ್ಪುಗಾರರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ನಿರೂಪಕ ಹರ್ಷಿತ್ ಪಡ್ರೆ, ಕಲಾವಿದ ಪುರುಷೋತ್ತಮ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಲವೀನಾ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪುಷ್ಪಾ ಡಿ ಸ್ವಾಗತಿಸಿ, ಸಮಾಜಶಾಸ್ತ್ರ ಉಪನ್ಯಾಸಕಿ ಆರತಿ ವಂದಿಸಿ, ಕನ್ನಡ ಉಪನ್ಯಾಸಕಿ ಸುಮಿತ್ರಾ ಕೆ. ಕಾರ್ಯಕ್ರಮ ನಿರ್ವಹಿಸಿದರು.