ಮುಡಿಪು : ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಆಶ್ರಯದಲ್ಲಿ ‘ಸಂಭ್ರಮ-2023’ ಸಾಂಸ್ಕೃತಿಕ ಸ್ಪರ್ಧೆಯು ದಿನಾಂಕ 17-07-2023 ಸೋಮವಾರ ಉದ್ಘಾಟನೆಗೊಂಡು 18 ಮತ್ತು 19-07-2023ರಂದು ಮೂರು ದಿನಗಳ ಕಾಲ ನಡೆಯಿತು.
ಈ ಕಾರ್ಯಕ್ರಮವನ್ನು ಮಂಗಳಾ ಸಭಾಂಗಣದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಅವರು ಉದ್ಘಾಟಿಸಿ ಮಾತನಾಡುತ್ತಾ “ಕಾಲ ಬದಲಾದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯದೆ ಸಂಸ್ಕಾರದ ಮೌಲ್ಯವನ್ನು ಅರಿತುಕೊಂಡು ನಾವು ಮುನ್ನಡೆಯಬೇಕು. ನಾವು ಯಾವುದೇ ಸಾಧನೆ ಮಾಡಿದರೂ ನಮ್ಮ ತಂದೆ ತಾಯಿಗೆ ಕೊಡುವ ಗೌರವದ ಮೌಲ್ಯ ನಮಗೆ ತಿಳಿದಿರಬೇಕು. ಇಂದಿನ ಆಧುನಿಕ ಯುಗದಲ್ಲಿ ಸಾಧನೆಗೆ ಬಹಳಷ್ಟು ಮಾರ್ಗಗಳಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಬದುಕನ್ನು ಕಂಡುಕೊಳ್ಳಬೇಕು” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಲಪತಿ ಪ್ರೊ. ಜಯರಾಜ್ ಅಮೀನ್ ಅವರು ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು” ಎಂದರು.
ರಾಷ್ಟ್ರಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜಯಗಳಿಸಿದ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಗೋವಿಂದ ದಾಸ ಕಾಲೇಜು ಮತ್ತು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ. ಪರಮೇಶ್ವರ ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಅವರು ವಂದಿಸಿ, ಪ್ರಗತಿ ಕಾರ್ಯಕ್ರಮ ನಿರೂಪಿಸಿದರು.