ಮಂಗಳೂರು : ಬೆಂಗಳೂರಿನ ರಂಗಪಯಣ ತಂಡ ತನ್ನ ನಿರಂತರ ರಂಗ ಚಟುವಟಿಕೆಗಳ ನಡುವೆ ಈ ಬಾರಿ 31-07-2023 ರಂದು ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ 55 ನಿಮಿಷಗಳ ಪ್ರೇಮಕಥೆ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಂಗಮಂದಿರದಲ್ಲಿ ಶಿವರಾಜ್.ಎನ್ ಅಭಿನಯಿಸಿದ ನಾಟಕ ಪ್ರದರ್ಶನಗೊಂಡಿತು. ಉಸ್ತಾದ್ ಬಿಸ್ಮಿಲ್ಲಾಖಾನ್ ಪ್ರಶಸ್ತಿ ಪುರಸ್ಕೃತ ಕಲಾವಿದ ದಂಪತಿಗಳಾದ ಶ್ರೀ ರಾಜಗುರು ಹೊಸಕೋಟೆ ಹಾಗೂ ಶ್ರೀಮತಿ ನಯನ ಸೂಡ ಇವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರಂಗಪಯಣದ ವಿಶಿಷ್ಟ ದಾಖಲೆಯ ಕಾರ್ಯಕ್ರಮ ಇದಾಗಿತ್ತು. ಕಳೆದ ಹಲವು ವರ್ಷಗಳಿಂದ ತಮ್ಮ ಹೊಸ ನಾಟಕಗಳೊಂದಿಗೆ ಕರಾವಳಿಗೆ ಭೇಟಿ ನೀಡುತ್ತಿರುವ ರಂಗಪಯಣ ಅರೆಹೊಳೆ ಪ್ರತಿಷ್ಠಾನ ಹಾಗೂ ಗೋವಿಂದದಾಸ್ ಕಾಲೇಜುಗಳ ಸಹಯೋಗದೊಂದಿಗೆ ಈ ನಾಟಕವನ್ನು ಆಯೋಜಿಸಿತ್ತು. ಸಂಜು ಎಂಬ ಯುವಕ ಶಾಂತಿ ಎಂಬ ತರುಣಿಯನ್ನು ಮೋಹಿಸಿ ಅವಳನ್ನು ಪಡೆಯಲು ಪ್ರಯತ್ನ ಪಡುವ ಒಂದು ಪ್ರೇಮ ಕಥೆಯೇ ಇದು. ಶಿವರಾಜ್ ನಾಟಕದ ಆರಂಭದಿಂದ ಕಡೆಯವರೆಗೂ ಅತ್ಯಂತ ಪರಿಣಾಮಕಾರಿಯಾಗಿ ವಿವಿಧ ಭಾವಗಳನ್ನ ಸಂದರ್ಭೋಚಿತವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಸರಳ ರಂಗಸಜ್ಜಿಕೆ ಸಾಮಾನ್ಯ ಬೆಳಕಿನ ವ್ಯವಸ್ಥೆಯೊಂದಿಗೆ ಅರ್ಥಪೂರ್ಣ ರಂಗಸಂಗೀತ ಈ ಯಶಸ್ಸಿಗೆ ಕಾರಣವಾಯಿತು. ನಯನ ಸೂಡ ಅವರ ನಿರ್ವಹಣೆಯ ಈ ನಾಟಕದ ರಚನೆ, ಸಂಗೀತ ಮತ್ತು ನಿರ್ದೇಶನ ರಾಜಗುರು ಅವರದ್ದು. ಸುಮಾರು ಒಂದೂವರೆ ದಶಕದಿಂದ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಈ ತಂಡ ಗುಲಾಬಿ ಗ್ಯಾಂಗ್, ಚಂದ್ರಗಿರಿ ತೀರದಲ್ಲಿ, ಹೇ ರಾಮ್, ಭೂಮಿ ಮುಂತಾದ ಸ್ತ್ರೀಪರ ವಿಷಯಗಳ ವಿಶಿಷ್ಟ ನಾಟಕಗಳನ್ನ ದೇಶಾದ್ಯಂತ ಹಲವಾರು ಬಾರಿ ಪ್ರದರ್ಶಿಸಿದೆ. ಈ ಹಿಂದೆ ರಾಜಗುರು ಅವರ ಅಭಿನಯದಲ್ಲಿ ಬೆಂಗಳೂರಿನ ಪ್ರದರ್ಶನವಾಗಿ ಲಿಮ್ಕಾ ದಾಖಲೆ ಮಾಡಿದ್ದ ಈ 55 ನಿಮಿಷಗಳ ಪ್ರೇಮಕಥೆ ಇಂದು 31 ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಪ್ರೇಕ್ಷಕರ ಜೊತೆ ಗೆಜಿಟೆಡ್ ಅಧಿಕಾರಿಗಳ ಸಮಕ್ಷಮದಲ್ಲಿ ಪ್ರದರ್ಶನಗೊಂಡು ಇನ್ನೊಂದು ದಾಖಲೆ ನಿರ್ಮಿಸಿತು. ವಿಶೇಷವೆಂದರೆ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದು, ಇದಕ್ಕೆ ಕಾರಣವಾದ ಅರೆಹೊಳೆ ಪ್ರತಿಷ್ಠಾನ ಹಾಗೂ ಗೋವಿಂದದಾಸ್ ಕಾಲೇಜು ಸಹಜವಾಗಿ ಅಭಿನಂದನೀಯವಾಗಿದೆ.