ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 31-07-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಕನ್ನಡ ಹಾಗೂ ತುಳು ಚಿತ್ರರಂಗದ ಪ್ರಶಸ್ತಿ ವಿಜೇತ ಯುವ ಸಂಕಲನಕಾರ ಶ್ರೀ ರಾಹುಲ್ ವಸಿಷ್ಠರವರು ತಮ್ಮ ತಬಲಾ ವಾದನದ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. “ಚಲನಚಿತ್ರ ರಂಗದಲ್ಲಿ ಸಣ್ಣಪುಟ್ಟ ಹೆಜ್ಜೆಗಳನ್ನಿಡುತ್ತಾ, ದೊಡ್ಡ ಕನಸಿನ ಬುತ್ತಿಯನ್ನು ಕಟ್ಟಿಕೊಂಡು ಬಂದೆ. ಸತತ ಪ್ರಯತ್ನದ ಫಲವಾಗಿ ಆ ಕನಸುಗಳು ನನಸಾಗಿ ನಾನಿಲ್ಲಿ ನಿಂತಿರುವೆ” ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮೀ ಪಿ. ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮ ಪಾಲಕಿ ಶ್ರೀಮತಿ ಪಲ್ಲವಿ, ಉಪನ್ಯಾಸಕರಾದ ಶ್ರೀಮತಿ ಚೈತ್ರ ಶೆಟ್ಟಿ, ಶ್ರೀಮತಿ ಶೈಲಾಜಾ, ಶ್ರೀಮತಿ ಜಯಂತಿ ಅಮೀನ್ ಹಾಗೂ ಮತ್ತಿತರ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಲಲಿತಕಲಾ ಸಂಘದ ಸಂಯೋಜಕರಾದ ಶ್ರೀ ರಾಕೇಶ್ ಹೊಸಬೆಟ್ಟು ಅವರು ಶ್ರೀ ರಾಹುಲ್ ವಸಿಷ್ಠ ಅವರ ಜೊತೆ ಸಂವಾದ ನಡೆಸಿಕೊಟ್ಟರು. ಇದರ ಸಲುವಾಗಿ ವಿದ್ಯಾರ್ಥಿ ಸಮೂಹ ಹಾಗೂ ಉಪನ್ಯಾಸಕರಿಂದ ಕೇಳಲಾದ ಅನೇಕ ಪ್ರಶ್ನೆಗಳಿಗೆ ಶ್ರೀ ರಾಹುಲ್ ಅವರು ತಮ್ಮ ಅನುಭವದ ಅಮೃತಧಾರೆಯನ್ನು ಹರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿತ್ರಯರಾದ ಶ್ರೀ ಸುಪ್ರೀತ್ ಸ್ವಾಗತಿಸಿ, ಕು.ಚಿನ್ಮಯಿ ಎಸ್. ನಿರೂಪಿಸಿ, ಶ್ರೀ ವಿನೀತ್ ರಾಜ್ ವಂದಿಸಿದರು.