ಬಂಟ್ವಾಳ : ದಿನಾಂಕ 29-07-2023 ಶನಿವಾರ ದಿನ ನಮ್ಮ ‘ನಿರತ’ ಆಪ್ತ ರಂಗಮನೆ ವೇದಿಕೆಯಲ್ಲಿ ಗ್ರಹಿಕೆಯನ್ನು ಮೀರಿ ಅದ್ಭುತ ಯಶಸ್ಸಿನ ಪ್ರದರ್ಶನ ‘ಸಂಪೂರ್ಣ ರಾಮಾಯಣ’. ಕ್ರಿಯಾಶೀಲ ಪ್ರತಿಭಾನ್ವಿತ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಶ್ರೀಮತಿ ಪ್ರೀತಿಕಲಾ ಇವರು ಒಂದು ಗಂಟೆಯ ಅವಧಿಯಲ್ಲಿ ತ್ರೇತಾಯುಗದ ಶ್ರೀ ರಾಮನ ಜೀವನದ ಪ್ರಮುಖ ಘಟನೆಗಳಿಗೆ ಜೀವತುಂಬಿ ಅಭಿನಯಿಸಿದ ಪ್ರತಿಯೊಂದು ದೃಶ್ಯಗಳೂ ಮೈರೋಮಾಂಚನಗೊಳಿಸಿತು. ಈ ಮೊದಲು ಕಾರ್ಯಕ್ರಮವನ್ನು ನೋಡಿದ್ದರೂ ಪ್ರತಿಸಲವೂ ಹೊಸತಾಗುವ ಭಾವ….ಶ್ರೀ ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆ..ಕೈಕೇಯಿ..ದಶರಥನ ಪಾತ್ರಗಳು, ಸೀತಾ ಸ್ವಯಂವರ, ರಾಮ ಭರತರ ನಡುವಿನ ಭಾವುಕ ಸನ್ನಿವೇಶ, ಶೂರ್ಪನಖಿಯ ಆಗಮನ, ಮಾರೀಚ-ಸೀತೆ-ರಾಮ-ಲಕ್ಷ್ಮಣ.. ಸೀತಾಪಹರಣದ ಜಟಾಯು, ಹನುಮಂತ-ರಾಮನ ಭೇಟಿ, ಲಂಕಾ ಪ್ರವೇಶದ ಹನುಮಂತನ ಭಾವ.. ಶ್ರೀರಾಮ ಪಟ್ಟಾಭಿಷೇಕ.. ಎಲ್ಲ ದೃಶ್ಯಗಳಿಗೂ ಶ್ರೇಷ್ಠ ಅಭಿನಯ ನೀಡಿ ಸಂಯೋಜಿಸಿದ ನೃತ್ಯ, ಸಾಂದರ್ಭಿಕ ಜತಿಗಳು….ಎಲ್ಲರಿಗೂ ಅರ್ಥವಾಗುವಂತೆ ನಿರೂಪಿಸುವ ಶಕ್ತಿ ಇವರಿಗೆ ಮಾತ್ರ ಸಾಧ್ಯ ಎಂದೆನಿಸಿತು. ಶ್ರೇಷ್ಠ ಕಲಾವಿದರಾಗಿಯೂ ಅಷ್ಟೇ ಸರಳವಾಗಿ ಬೆರೆಯುವ ಮತ್ತು ಪ್ರತಿದಿನವೂ ಬೆಳೆಯುವ ಸ್ಫೂರ್ತಿಯ ಗುರುದಂಪತಿಗಳು ಕಲೆಯ ಹಾದಿಗೆ ಮಾದರಿ ವ್ಯಕ್ತಿತ್ವ.
ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿದ ಶ್ರೀಮತಿ ಸುಧಾ ಕಶೆಕೋಡಿ ಅವರ ಹಾರೈಕೆಯ ನುಡಿಗಳು ಎಂದಿಗೂ ಶಕ್ತಿ. ಮಕ್ಕಳೊಡನೆ ನೆಲದಲ್ಲಿಯೇ ಕುಳಿತುಕೊಂಡು ಸಮಾನತೆ ಮೆರೆದ ಶ್ರೇಷ್ಠ ವ್ಯಕ್ತಿತ್ವ, ಸರಳ ನಡೆ ನುಡಿಯ, ಸಾಮಾಜಿಕ ಸಂಸ್ಕಾರವನ್ನು ಪಸರಿಸುತ್ತಿರುವ, ಅತ್ಯಂತ ವಿನೀತ ಭಾವದ ಇಂತಹ ವ್ಯಕ್ತಿತ್ವಗಳ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನವಾಯಿತು.
ಸ್ವತಃ ಕಲಾವಿದೆಯಾಗಿರುವ ಸಾಹಿತಿ ಮಂಗಳೂರು ಸ್ವರೂಪ ಅಧ್ಯಯನ ಸಂಸ್ಥೆಯ ಶ್ರೀಮತಿ ಸುಮಾಡ್ಕರ್ ಮೇಡಂ ಹೇಳಿದಂತೆ ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಅಂತರ, ಅಂತಸ್ತು ಕಡಿಮೆಯಾದಷ್ಟು ಕಲೆಯ ಭಾವ ಹೃದಯವನ್ನು ತಟ್ಟುತ್ತದೆ. ‘ನಿರತ’ ಆಪ್ತ ರಂಗಮನೆಗಿರುವ ಶಕ್ತಿ ಈ ಸಾಧ್ಯತೆಯನ್ನು ಅನಾವರಣಗೊಳಿಸಿದೆ. ಹಿರಿಯರು ಕಿರಿಯರೆನ್ನದೆ ನೆಲದಲ್ಲಿಯೇ ಕುಳಿತು ಕಲಾವಿದರಿಗೆ ಸಮಾನಾಗಿ ಇದ್ದಾಗ ಸಂಚರಿಸುವ ಭಾವ ಈ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಸಭಾ ಕಾರ್ಯಕ್ರಮವನ್ನು ಸರಳವಾಗಿ ನಿರ್ವಹಿಸುವ ಮಾದರಿ ನಮ್ಮ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯದ್ದು. ಮಾರ್ಗದರ್ಶನದ ಪ್ರೀತಿಗೆ ಗುರುಗಳಾದ ದೀಪಕ್ ಸರ್, ಪ್ರೀತಿ ಮೇಡಂ, ಗಿರೀಶ್ ಸರ್ ಹಾಗೂ ಪ್ರಭಾ ಅಮ್ಮನಿಗೆ ಎಂದಿಗೂ ಆಭಾರಿ.
ನೂರಕ್ಕೂ ಹೆಚ್ಚು ಪ್ರಬುದ್ಧ ಪ್ರೇಕ್ಷಕರಿಂದ ತುಂಬಿದ ಸಂಭಾಗಣದಲ್ಲಿ ‘ಸಂಪೂರ್ಣ ರಾಮಾಯಣ’ ಮುಗಿದ ಕೂಡಲೇ ಒಮ್ಮಿಂದೊಮ್ಮೆಲೇ ಆವರಿಸಿದ ಮೌನ……! ಕೈ ಚಪ್ಪಾಳೆಯೊಂದೇ ಎಲ್ಲವನ್ನೂ ಹೇಳಿತು. ಮಾತು ಮೌನಗಳನ್ನು ಮೀರಿದ ಧನ್ಯತೆ, ಸಾಕ್ಷಾತ್ ಸೀತಾರಾಮ ಕಣ್ತುಂಬಿಕೊಂಡ ರೋಮಾಂಚನ.. ನೃತ್ಯ ದಂಪತಿಗಳ ಅದ್ಭುತವಾದ ಸುಂದರವಾದ ಅಭಿನಯವನ್ನು ಕಣ್ಣು ಮಿಟುಕಿಸದೆ ನೋಡಿದ ಭಾವುಕ ನೋಟಗಳು…. ಸಭಾಂಗಣಕ್ಕೆ ದೈವಿಕ ಕಳೆ ನೀಡಿದ ಕಾರ್ಯಕ್ರಮವಾಗಿ ‘ಸಂಪೂರ್ಣ ರಾಮಾಯಣ’ ಮೆಲ್ಕಾರ್ ಪರಿಸರದ ಸಾಂಸ್ಕೃತಿಕ ಸಾಧ್ಯತೆಗೆ ಸಾಕ್ಷಿಯಾಯಿತು. ಈ ಕಾರ್ಯಕ್ರಮವನ್ನು ಸಂಯೋಜಿಸಿ ಆಹ್ವಾನಿಸಿದ್ದಕ್ಕಾಗಿ ಹರಿದು ಬಂದ ಸಂದೇಶಗಳು, ಮೆಚ್ಚುಗೆಯ ಮಾತುಗಳು, ಕಣ್ಣಂಚನ್ನು ಒದ್ದೆ ಮಾಡಿಕೊಂಡು ಸಾರ್ಥಕತೆಯನ್ನು ಅನುಭವಿಸಿ ಹರಸಿದ ಎಲ್ಲ ಬಂಧುಗಳಿಗೂ ಆಂತರ್ಯದ ನಮನಗಳು.
ಕಾರ್ಯಕ್ರಮವನ್ನು ಆಯೋಜಿಸಲು ಶಕ್ತಿ ಮತ್ತು ಧೈರ್ಯ ತುಂಬಿದ ದೀಪಕ್ ಸರ್ ಮತ್ತು ಮನೆಮಂದಿಯ ಆಶೀರ್ವಾದಕ್ಕೆ ನಾವು ಎಂದಿಗೂ ಆಭಾರಿ. ಈ ದಿನದ ಪ್ರಮುಖ ಆಕರ್ಷಣೆಯಾಗಿ ವಿಶೇಷವಾಗಿ ಗುರುತಿಸಿಕೊಂಡು, ನಿರತ ಆಪ್ತ ರಂಗಮನೆ ವೇದಿಕೆಯನ್ನು ಆವರಿಸಿದ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಸರ್, ಸುಮಾಡ್ಕರ್ ಮೇಡಂ ಮತ್ತು ಸಾಧನೆಯ ಕಡೆಗೆ ಹೊರಟಿರುವ ಸ್ವರೂಪದ ಕನಸುಗಳಿಗೆ ಮತ್ತು ಪ್ರೀತಿಯ ಕರೆಗೆ ಆಗಮಿಸಿದ, ಬರಲಾಗದಿದ್ದರೂ ಶುಭಹಾರೈಸಿದ ಎಲ್ಲಾ ಪ್ರೀತಿಪಾತ್ರರಿಗೆ ಅಂತರಾಳದ ನಮನಗಳು.
- ಶ್ರೀಮತಿ ತೇಜಸ್ವಿ ಅಂಬೆಕಲ್ಲು, ಅಕ್ಷಿನಿಕೇತನ, ಮೆಲ್ಕಾರ್