ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ.) ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿಯ ಆಶ್ರಯದಲ್ಲಿ ದಿನಾಂಕ 06-08-2023 ರವಿವಾರದಂದು ‘ಸಮರಸ ಸಾಹಿತ್ಯದೊಂದಿಗೆ ಕುಟುಂಬೋತ್ಸವ’ ಕಾರ್ಯಕ್ರಮವು ಅ.ಭಾ.ಸಾ.ಪ. ಮಂಗಳೂರು ವಿಭಾಗ ಸಂಯೋಜಕರಾಗಿರುವ ಉರುವಾಲು ಗ್ರಾಮದ ಎಂಜಿರಪಳಿಕೆ ಶ್ರೀ ಸುಂದರ ಶೆಟ್ಟಿಯವರ ಸ್ವಗೃಹದಲ್ಲಿ ನಡೆಯಿತು.
ಮುಖ್ಯ ಅತಿಥಿಯಾದ ಉಪನ್ಯಾಸಕಿ ಶ್ರೀಮತಿ ವಸಂತಿ ಕುಳಮರ್ವ ಇವರು ಯುವಜನತೆಗೆ ಸಂಸ್ಕಾರದ ಪಾಠವು ಮನೆಯಿಂದಲೇ ನಡೆಯಬೇಕು ಎನ್ನುವುದನ್ನು ರಾಮಾಯಣದ ಭರತನ ಕಥೆಯ ನಿರೂಪಣೆಯೊಂದಿಗೆ ಮನಮುಟ್ಟುವಂತೆ ವಿವರಿಸಿದರು. ಸಮಿತಿ ಅಧ್ಯಕ್ಷರಾದ ಪ್ರೊ.ಗಣಪತಿ ಭಟ್ ಕುಳಮರ್ವರವರು ಸಾಹಿತ್ಯದಿಂದ ಸಾಮರಸ್ಯವನ್ನು ಸಾಧಿಸುವ ಬಗ್ಗೆ ಮತ್ತು ಡಾ.ಮಾಧವ ಎಂ.ಕೆ. ಇವರು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡಿದರು.
ಮನೆಯ ಹಿರಿಯ ಮಾತೆ ಶ್ರೀಮತಿ ವಾಸಮ್ಮ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವು ಕು.ಅನನ್ಯರವರ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡಿತು. ಕು.ದಿವ್ಯ, ಕು.ಆದಿರ, ಕು.ವೈಭವಿ, ಶ್ರೀಮತಿ ರಾಧಿಕ, ಶ್ರೀಮತಿ ದೀಕ್ಷ ಇವರು ಭಕ್ತಿಗೀತೆಗಳನ್ನು ಹಾಡಿದರೆ, ಶ್ರೀಮತಿ ಸುನಂದರವರು ಶ್ರೀ ರಾಮರಕ್ಷಾ ಸ್ತೋತ್ರವನ್ನು ಹೇಳಿದರು. ಶ್ರೀಮತಿ ವಾಸಮ್ಮ ಮತ್ತು ಮಕ್ಕಳು ತುಳು ಜನಪದ ಸಮೂಹ ಗೀತೆ ಹಾಡಿದರು. ಇವೆಲ್ಲದರ ಜೊತೆಗೆ ಶ್ರೀ ಹರ್ಷನಾರಾಯಣ ಬಳ್ಳಮಂಜರವರ ತಾಳಮದ್ದಳೆ ಪ್ರಸ್ತುತಿಯು ಮನಸ್ಸನ್ನು ಸೂರೆಗೊಂಡಿತು.
ಅ.ಭಾ.ಸಾ.ಪ. ರಾಜ್ಯ ಕಾರ್ಯದರ್ಶಿ ಶ್ರೀ ಶೈಲೇಶ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ವಿಶೇಷತೆಯೆಂದರೆ ಸ್ಥಳೀಯವಾಗಿ ಗುಡ್ಡ ತೋಟದಲ್ಲಿ ದೊರೆಯುವ ಸೊಪ್ಪು, ನಾರು, ದಂಟು, ಹಣ್ಣುಗಳನ್ನೇ ಬಳಸಿ ತಯಾರಿಸಿದ ಪಾನೀಯ, ವಿವಿಧ ತಿನಿಸು, ಊಟ, ಸಿಹಿತಿಂಡಿಗಳ ವ್ಯವಸ್ಥೆಯನ್ನು ಮನೆ ಮಂದಿಯೇ ತಯಾರಿಸಿ ಬಂದವರನ್ನು ಸತ್ಕರಿಸಿ, ಎಲ್ಲರಿಗೂ ಶಾಲನ್ನು ನೀಡಿ ಗೌರವಿಸಿದರು.
ಭಾಗವಹಿಸಿದ ಎಲ್ಲರಿಗೂ ಶ್ರೀ ಸುಂದರ ಶೆಟ್ಟಿಯವರು ಧನ್ಯವಾದವನ್ನು ಅರ್ಪಿಸಿದರು. ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಸುಭಾಷಿಣಿಯವರು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟಂತೆ ಕೆಲವು ಆಟಗಳನ್ನು ಆಡಿಸುವುದರ ಮೂಲಕ ವಿವರಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.