ಉಡುಪಿ: ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಯಿಂದ ಕೊಡಮಾಡುವ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್ ಅವರ ಸಹಕಾರದೊಂದಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮೇರು ಕಲಾವಿದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರಿಗೆ ಪ್ರದಾನ ಮಾಡಲಾಯಿತು.
ಅಜ್ಜರಕಾಡಿನ ಪುರಭವನದಲ್ಲಿ ದಿನಾಂಕ 12-08-2023ರಂದು ನಡೆದ ಈ ಪ್ರಶಸ್ತಿ ಪ್ರದಾನ ಸಂಮಾರಂಭಕ್ಕೆ ಮಾಹೆಯ ಕುಲಪತಿಗಳಾದ ಡಾ. ಎಂ.ಡಿ ವೆಂಕಟೇಶ್ ಅವರು ಚೆಂಡೆ ವಾದನದ ಮೂಲಕ ಚಾಲನೆ ನೀಡಿದರು. ಅವರು ಮಾತನಾಡಿ ‘ಯಕ್ಷಗಾನ ಎಂಬುದು ಒಂದು ಕಲೆ . ಇದು ಕರಾವಳಿ ಭಾಗದ ಸಾಂಸ್ಕೃತಿಕ ಪ್ರತೀಕವಾಗಿದೆ ಹಾಗೂ ಈಗಲೂ ಸಹ ಜನರ ಪ್ರೋತ್ಸಾಹ ಬೆಂಬಲದಿಂದ ಕಲೆ ಉಳಿದು ಬೆಳೆಯುವುದಕ್ಕೆ ಸಹಕಾರಿಯಾಗಿದೆ” ಎಂದರು. ಸಮ್ಮಾನ ಸ್ವೀಕರಿಸಿದ ಕೊಂಡದಕುಳಿ ಅವರು ಯಕ್ಷಗಾನ ಕಲೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಾ “ಕಲಾವಿದರು ನಾವು ಯಕ್ಷಗಾನದಿಂದ ಏನನ್ನು ಪಡೆಯುತ್ತೇವೋ ಅದರಲ್ಲಿ ಒಂದು ಭಾಗವನ್ನು ಕಲೆಯ ಬೆಳವಣಿಗೆಗೆ ಹಾಗೂ ಹಿಂತಿರುಗಿಸಿದರೆ ಆಗ ನಾವು ಸಮಾಜದ ಋಣವನ್ನು ತೀರಿಸಿದಂತಾಗುತ್ತದೆ” ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಹಾಗೂ ಬೇಳಂಜೆ ಸಂಜೀವ ಹೆಗ್ಡೆ, ಟ್ರಸ್ಟಿನ ವಿಶ್ವಸ್ಥ ಡಾ.ಎಚ್.ಎಸ್. ಬಲ್ಲಾಳ್ ಬಾಳೆ ಅವರು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಲು ಟ್ರಸ್ಟ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದ್ದಲ್ಲದೆ ಮಾಹೆಯ ವತಿಯಿಂದಲೂ ಯಕ್ಷಗಾನ ಕಲೆಯ ಬೆಳವಣಿಗೆಗೆ ಹೆಚ್ಚಿನ ನೆರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ. ಜಿ.ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಜ್ವಲ್ ಡೆವಲಪರ್ಸ್ ನ ಎಂ.ಡಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ, ಪಳ್ಳಿ ಕಿಶನ್ ಹೆಗ್ಡೆ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು, ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ ನಿರೂಪಿಸಿದರು. ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಪೂರ್ವ ರಂಗ ನಡೆಸಿಕೊಟ್ಟರು. ಕಲಾವಿದರ ಅಭಿನಂದನೆಯ ನಂತರ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.