ಸೋಮವಾರಪೇಟೆ : ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿ ರಥ ಯಾತ್ರೆಯ ರಥವನ್ನು ದಿನಾಂಕ 11 ನವೆಂಬರ್ 2024ನೇ ಸೋಮವಾರ ಅಪರಾಹ್ನ 3-00 ಗಂಟೆಗೆ ಐಗೂರು ಗ್ರಾಮ ಪಂಚಾಯತಿಗೆ ಒಳಪಟ್ಟ ಯಡವನಾಡು ಗ್ರಾಮದಲ್ಲಿ ಸೋಮವಾರಪೇಟೆ ಕ.ಸ.ಬಾ. ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ರವರು ರಥದ ಜೊತೆಗೆ ಭಾಗವಹಿಸಿದ್ದರು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ರಾದ ಶ್ರೀ ಶ್ರೀಧರ್ ಕಂಕನವಾಡಿ, ಐಗೂರು ಕೇಂದ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನಂಗಾರು ಕೀರ್ತಿ ಪ್ರಸಾದ್ ರವರು ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿದರು. ಯಡವನಾಡು ಆಶ್ರಮ ಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಹೋಗಿ ಕುಂಭ ಮೇಳ ಸ್ವಾಗತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವ ಕಾಮತ್ ರವರು ಈ ಕನ್ನಡ ರಥ ಯಾತ್ರೆಯ ಮಹತ್ವವನ್ನು ವಿವರಿಸಿದರು. ಕಾಜೂರು ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಅಜಿತ್ ಕುಮಾರ್ ರವರು ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಶ್ರೀ ಕೆ.ಪಿ. ದಿನೇಶ್, ಐಗೂರು ಕ.ಸಾ.ಪ. ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ರಾಜೇ ಅರಸ್, ಕೋಶಾಧಿಕಾರಿ ಎಸ್.ಎಂ. ಬೆಳ್ಯಪ್ಪ, ಕವಿ ಹೇಮಂತ್ ಪಾರೇರಾ, ಜೈನುದ್ದೀನ್ ತಿಮ್ಮಯ್ಯ, ಚಂದ್ರಶೇಖರ್ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು, ಯಡವನಾಡಿನ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಕೆ.ಎಂ. ಗಣೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ.ಎಂ. ರಮೇಶ್, ಜಿ.ಕೆ. ಸುಬ್ರಮಣಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ. ಜೋಯಪ್ಪ, ಗ್ರಾಮದ ಮುಖಂಡರಾದ ಟಿ.ಕೆ. ರಮೇಶ್ ಸೇರಿದಂತೆ ಬಹಳಷ್ಟು ಗ್ರಾಮಸ್ಥರು ಹಾಗೂ ಆಶ್ರಮ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಒಟ್ಟಾಗಿ ಹೇಳಬೇಕೆಂದರೆ ಸ್ವಾಗತ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನೆರವೇರಿಸಿ ವಂದನಾರ್ಪಣಾ ಕಾರ್ಯಕ್ರಮದೊಂದಿಗೆ ರಥವನ್ನು ಸೋಮವಾರಪೇಟೆಗೆ ಬೀಳ್ಕೊಡಲಾಯಿತು.