ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಇಲ್ಲಿನ ವಿದ್ಯಾರ್ಥಿಗಳ ವಾರ್ಷಿಕ ಪ್ರತಿಭಾ ಪ್ರದರ್ಶನ ‘ಆರೋಹಣ’ ನೃತ್ಯ ಪ್ರದರ್ಶನವು ದಿನಾಂಕ 24 ಆಗಸ್ಟ್ 2025ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ದೇಶ ವಿದೇಶಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ನೀಡಿರುವ ಅಕಾಡೆಮಿಯ ಆರಂಭಿಕ ಹಾಗೂ ಮಾಧ್ಯಮಿಕ ಹಂತದ ವಿದ್ಯಾರ್ಥಿಗಳ ತಂಡಗಳು ಸುಮಾರು 3 ಗಂಟೆಗಳ ಕಾಲ ಭರತನಾಟ್ಯ, ಲಘು ಶಾಸ್ತ್ರೀಯ ಹಾಗೂ ಜನಪದ ಶೈಲಿಯ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಕೊನೆಯಲ್ಲಿ ಪ್ರದರ್ಶಿಸಿದಂತಹ ‘ನರ್ತನ – ಪರಿವರ್ತನ’ ನೃತ್ಯ ರೂಪಕವು ಎಲ್ಲರ ಮನಸೂರೆಗೊಂಡಿತು. ಭರತನಾಟ್ಯದಂತಹ ಶಾಸ್ತ್ರೀಯ ಕಲೆಯ ಮೂಲಕ ಈ ಬಾಲಸ್ನೇಹಿ ಪ್ರಸ್ತುತಿಯನ್ನು ಜನರಿಗೆ ಎಷ್ಟು ಪರಿಣಾಮಕಾರಿಯಾಗಿ ತಲುಪಿಸಬಹುದು ಎಂಬ ವಿಚಾರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರು ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವಂತಹ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ, ಉಡುಪು, ಸಂಸ್ಕೃತಿ, ಭಾರತೀಯತೆಯ ಬಗ್ಗೆ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಇವರು ಧನ್ಯವಾದ ಸಮರ್ಪಿಸಿದರು. ಭಾಗವಹಿಸಿದಂತಹ ಎಲ್ಲ ವಿದ್ಯಾರ್ಥಿನಿಯರಿಗೆ, ಶಿಕ್ಷಕ ವೃಂದದವರಿಗೆ ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕೇಂದ್ರದ ನೃತ್ಯ ಶಿಕ್ಷಕಿಯರಾದ ವಿದುಷಿ ಅಂಕಿತಾ ರೈ ಪ್ರಣಾಮ್, ವಿದುಷಿ ಮಂಜುಶ್ರೀ ರಾಘವ್, ವಿದುಷಿ ಬಿಂದಿಯಾ ಪ್ರತೀಕ್, ಕುಮಾರಿ ಪೂರ್ವೀ ಕೃಷ್ಣಾ, ಕುಮಾರಿ ಮಹತಿ ಎಚ್. ಪವನಾಸ್ಕರ್, ಕುಮಾರಿ ಸಮನ್ವಿತಾ ಹಂದೆ, ಕುಮಾರಿ ಗೌತಮಿ ಸುಧಾಕರ್, ಕುಮಾರಿ ಅನ್ವಿತಾ ರಾವ್ ಇವರನ್ನು ಅಭಿನಂದಿಸಲ್ಪಟ್ಟರು. ಗೌತಮಿ ಸುಧಾಕರ್ ಹಾಗೂ ಅನ್ವಿತಾ ರಾವ್ ಕಾರ್ಯಕ್ರಮ ನಿರೂಪಿಸಿದರು.