ಶಶಿಧರ ಹಾಲಾಡಿಯವರ ಎರಡನೆಯ ಕಾದಂಬರಿ ‘ಅಬ್ಬೆ’. ವರ್ಷದ ಹಿಂದೆ ಪ್ರಕಟವಾದ ಮೊದಲ ಕಾದಂಬರಿ ‘ಕಾಲಕೋಶ’ದಂತೆಯೇ ಬ್ಯಾಂಕ್ ನೌಕರನೊಬ್ಬನ ಉತ್ತಮ ಪುರುಷ ನಿರೂಪಣೆಯಲ್ಲಿರುವ ಕಾದಂಬರಿ. ಮೇಲ್ನೋಟಕ್ಕೆ ಇದು ಬ್ಯಾಂಕ್ ನೌಕರರ ಅಸಹಾಯಕತೆಯ, ದುರಿತ ದುಮ್ಮಾನಗಳ ಕಥೆಯೆಂದು ಅನ್ನಿಸಿದರೂ, ಪರಾಂಬರಿಸಿ ನೋಡಿದರೆ, ಪಶು, ಪಕ್ಷಿ, ಪ್ರಾಣಿಗಳ ಮತ್ತು ಮರ, ಗಿಡ, ಬಳ್ಳಿಗಳ ಕುರಿತು ಕುತೂಹಲ ಹುಟ್ಟಿಸುವ ಬರಹವಾಗಿದೆ. ಇಲ್ಲಿನ ಕಥೆ ನಮ್ಮನ್ನು ತೆರೆದಿಡುವುದೇ ಪ್ರಕೃತಿಯನ್ನು ಮತ್ತು ಮನುಷ್ಯೇತರ ಜೀವವೈವಿಧ್ಯವನ್ನು ಕಾಪಿಡಬೇಕಾದ ಅಗತ್ಯಕ್ಕಾಗಿ ಈ ಭೂಮಿ ಇರುವುದು ತನಗೊಬ್ಬನಿಗೆಂದೇ ಬದುಕುತ್ತಿರುವ ಮನುಷ್ಯರ ಸಣ್ಣತನದೆದುರು ಇಲ್ಲಿ ಬರುವ ಔದ್ಯೋಗಿಕ ರಂಗದಲ್ಲಿ ನಡೆವ ಶೋಷಣೆಯ ಕಥೆ ಈ ನಿಟ್ಟಿನ ಒಂದು ಉಪ ಉತ್ಪನ್ನ ಅಷ್ಟೇ.
ಬಹುದಿನಗಳ ಬಳಿಕ ಪೂರ್ಣಚಂದ್ರ ತೇಜಸ್ವಿಯವರ ಬರವಣಿಗೆಯ ಲವಲವಿಕೆಯನ್ನು ಮತ್ತು ಆಶಯವನ್ನು ನೆನಪಿಸುವ ಅಪರೂಪದ ಕಾದಂಬರಿಯಿದು. ಬಯಲು ಸೀಮೆಯ ಕಲ್ಕೆರೆಯಲ್ಲಿ ಹುಟ್ಟಿಬೆಳೆದಿದ್ದ ಅದೇ ಊರಿನ ಶಾಲೆಯಲ್ಲಿ ಓದಿದ್ದ ನರಸಿಂಹಯ್ಯನ ಮಗನಿಗೆ ಆ ಊರಿನ ಕುರಿತು ಆಸಕ್ತಿಯೇ ಇದ್ದಂತಿಲ್ಲ, ‘ಆ ಹಳ್ಳೀಲಿ ಏನಿದೆ ಅಪ್ಪ, ನನಗೆ ಬೋರಾಗುತ್ತದೆ. ನೀನೇ ಬೇಕಾದರೆ ಬಾಂಬೆಗೆ ಬಂದುಬಿಡು’ ಎಂದು ಹೇಳುತ್ತಿದ್ದಾನೆ. ಆದರೆ ಹಸಿರು ನಾಡಿನಿಂದ ಬ್ಯಾಂಕ್ ಉದ್ಯೋಗಿಯಾಗಿ ಅಂತಹ ಊರಿಗೆ ಬಂದಿರುವ ನಿರೂಪಕನನ್ನು ಕಲ್ಕೆರೆಯ ಜೀವವೈವಿಧ್ಯವು ಆವರಿಸಿಕೊಂಡು ಬಿಡುತ್ತದೆ. ಇಲ್ಲೂ ಬದುಕಿದೆ, ಪರಿಸರವಿದೆ, ಹಕ್ಕಿಗಳಿವೆ, ಹಾಡೂ ಇದೆ ಎಂದೂ ಸಷ್ಟವಾಗುತ್ತದೆ. ಇಲ್ಲಿನ ಪರಿಸರವನ್ನೂ ಮನುಷ್ಯನನ್ನೂ ಕಂಡು ಸಂತಸಪಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ನಿರೂಪಕ ಸಿದ್ಧನಾಗುತ್ತಿರುವ ಹಾಗೇ, ಅಬ್ಬೆಜೇಡ (Poisonous spider)ದ ಮಾಹಿತಿ ಸಿಗುತ್ತದೆ. ಕಟ್ಟುಕಥೆಯ ವ್ಯಾಪ್ತಿಯಿಂದ ಒಟ್ಟು ಕಥೆಯನ್ನು ಹೊರಗಿಡುವ ಎರಡು ಆಯಾಮಗಳನ್ನು ಇಲ್ಲಿನ ಕಥಾಶಿಲ್ಪದಿಂದ ಪ್ರತ್ಯೇಕಿಸಿ ಗುರುತಿಸಿದಾಗ ಶಶಿಧರ ಹಾಲಾಡಿಯವರ ಕಥನಕಲೆಯ ವೈವಿಧ್ಯ ಮತ್ತು ವೈಶಿಷ್ಟ್ಯ ಮನದಟ್ಟಾಗುತ್ತದೆ. ಡಾ ಕಲ್ಲೂರಾಯ, ಭಾಸ್ಕರ, ಕೆಂಚಪ್ಪ ಮೊದಲಾದ ಪಾತ್ರಗಳು ಮಾತ್ರವಲ್ಲ, ಕೆಂಚಪ್ಪನ ಗುಡಿಸಲಲ್ಲಿ ಅಡಗಿಸಿಟ್ಟ ಗೋಣಿಚೀಲಗಳು, ಬೆಟ್ಟದ ಮೂಲೆಯ ಪುರಾತನ ಕಟ್ಟಡದಲ್ಲಿ ಕ೦ಡ ಸಂನ್ಯಾಸಿಗಳು, ಸಾಧಕರು, ನಿರ್ಜನ ಹಾದಿಯಲ್ಲಿ ಈ ಎದುರಾಗುವ ಸ್ವಾಮಿ, ಆಗಾಗ ಅಬ್ಬೆ ಕಚ್ಚಿ ಸಾಯುವ ಹಳ್ಳಿಗರು ಇವೆಲ್ಲ ಸಕಾರಣವಾಗಿ ತೇಜಸ್ವಿಯವರು ಸೃಷ್ಟಿಸಿ ಕೈ ಬಿಟ್ಟ ನಿಗೂಢ ಜಗತ್ತೊಂದರ ಮುಂದುವರಿಕೆಯಂತೆ ಕಾಣಿಸುತ್ತದೆ.
ಲೇಖಕರ ಬಗ್ಗೆ : ಶಶಿಧರ ಹಾಲಾಡಿಯವರು ಉಡುಪಿ ಜಿಲ್ಲೆಯ ಹಾಲಾಡಿಯವರು. ಪ್ರಥಮ ರ್ಯಾಂ ಕ್ ಮತ್ತು ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ. ಪದವಿ ಪಡೆದವರು. ಸ್ಟೇಟ್ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ, ಸ್ವಯಂನಿವೃತ್ತಿ ಪಡೆದು, ಕಳೆದ ಆರು ವರ್ಷಗಳಿಂದ ಪತ್ರಿಕೆಯೊಂದರ ಭಾನುವಾರದ ಪುರವಣಿ ನಿರ್ವಹಿಸುತ್ತಿದ್ದಾರೆ.
ಅಬ್ಬೆ, ಕಾಲಕೋಶ (ಕಾದಂಬರಿ), ಉರುಳಿದ ಕಟ್ಟಡ ಮರಳಿದ ನೆನಪು, ಚಿತ್ತ ಹರಿದತ್ತ, ಮನದ ಹಾಯಿದೋಣಿ, ಓಲಿ ಕೊಡೆ, ಪ್ರಕೃತಿ ಪ್ರಪಂಚ (ಅಂಕಣ ಬರಹಗಳು), ನಾ ಸೆರೆಹಿಡಿದ ಕನ್ಯಾಸ್ತ್ರೀ, ಅಮ್ಮಮ್ಮನ ದೀಪಾವಳಿ, ಬೆನಗಲ್ ನರಸಿಂಗರಾವ್, ಟುವ್ವಿ ಹಕ್ಕಿಯ ಗೂಡು, ದೇವರು ಎಚ್ಚರಗೊಂಡಾಗ, ಹಿತ್ತಲಿನಿಂದ ಹಿಮಾಲಯಕ್ಕೆ ಇತ್ಯಾದಿ ಇವರ ಪ್ರಕಟಿತ ಕೃತಿಗಳು.
ಬೆರಗು ಪುಸ್ತಕ ಪ್ರಶಸ್ತಿ, ಸ್ವಾಭಿಮಾನಿ ಕರ್ನಾಟಕ ಪುಸ್ತಕ ಪ್ರಶಸ್ತಿ, ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಹಾಮಾನಾ ಅಂಕಣ ಬರಹ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ಕರುನಾಡು ಸೇವಾ ರತ್ನ ಪ್ರಶಸ್ತಿ ಮುಂತಾದವು ಇವರ ಶ್ರದ್ಧಾ ಪ್ರೀತಿಯ ಸಾಹಿತ್ಯ ಸೇವೆಗೆ ದೊರೆತ ಗೌರವ.
ಅಬ್ಬೆ ಕಾದಂಬರಿ ಲೇಖಕ : ಶಶಿಧರ ಹಾಲಾಡಿ ಮೊ.8310937028, ಪ್ರ : ಅಂಕಿತ ಪುಸ್ತಕ ಬೆಂಗಳೂರು, ಪುಟ : 264, ಬೆಲೆ ರೂ.250/-
ವಿಮರ್ಶಕ: ಬೆಳಗೋಡು ರಮೇಶ ಭಟ್
ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಗಳಾಗಿದ್ದು, ಬ್ಯಾಂಕಿನ ಪ್ರತಿಷ್ಠಿತ ಬ್ಯಾಂಕ್ ಮೆನೇಜ್‌ಮೆಂಟ್ ಕಾಲೇಜು ಎಸ್.ಐ.ಬಿ.ಎಂ. ಮಣಿಪಾಲ ಇದರ ಪ್ರಾಂಶುಪಾಲರಾಗಿದ್ದು ಈಗ ನಿವೃತ್ತರಾಗಿರುವ ಬೆಳಗೋಡು ರಮೇಶ ಭಟ್ಟರು ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿದವರು ಮತ್ತು ಪ್ರಬುದ್ಧ ವಿಮರ್ಶಕರು. ಸಾಹಿತ್ಯಿಕ ಮೌಲ್ಯದ ಹದಿನೆಂಟು ಕೃತಿಗಳನ್ನು ರಚಿಸಿರುವ ಇವರಿಗೆ ‘ಜರಾಸಂಧ’ ಕವನ ಸಂಕಲನಕ್ಕೆ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’, ‘ಅಂಬಿಗನ ಹಂಗಿಲ್ಲ’ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’, ಕಥಾ ಸಂಕಲನ ‘ಮನುಷ್ಯರನ್ನು ನಂಬಬಹುದು’ ಇದಕ್ಕೆ ‘ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ನಿಧಿ ಪುರಸ್ಕಾರ’ ಮತ್ತು ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’ ಹಾಗೂ ವಿಮರ್ಶಾಲೇಖನಗಳ ಸಂಕಲನ ‘ಸೃಷ್ಟಿಯ ಮೇಲಣ ಕಣಿ’ಗೆ ‘ಕಾವ್ಯಾನಂದ ಪುರಸ್ಕಾರ’ ಪ್ರಾಪ್ತವಾಗಿದೆ. ಇವೆಲ್ಲಾ ಪ್ರಶಸ್ತಿ ಗೌರವಗಳು ಇವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಸಂದ ಗೌರವ.