ಪುತ್ತೂರು : ಪುತ್ತೂರಿನ ರೋಟರಿ ಜಿ.ಎಲ್. ಸಭಾಭವನದಲ್ಲಿ ಶಿಕ್ಷಕ ಕವಿಗಳಿಗಾಗಿ ಏರ್ಪಡಿಸಿದ ಅಂತಾರಾಜ್ಯ ಮಟ್ಟದ ಆಚಾರ್ಯ ಕವಿಗೋಷ್ಠಿಯು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲಾ ಘಟಕ, ಕಥಾ ಬಿಂದು ಪ್ರಕಾಶನ ಮಂಗಳೂರು ಮತ್ತು ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ ಶತಮಾನೋತ್ಸವ ಸಮಿತಿ ಪುತ್ತೂರು ಇದರ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ “ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು. ಮಾತನಾಡುವಾಗ ಅರ್ಥ ಸಹಿತ ತಿಳಿದುಕೊಂಡು ಪದ ಬಳಕೆ ಮಾಡಬೇಕು. ರಸಭರಿತ ವಿಚಾರದಿಂದ ಕೂಡಿದ ಮಾತುಗಳನ್ನು ಹಾಸ್ಯಾಸ್ಪದ ಎಂದು ಟೀಕೆ ಮಾಡಬಾರದು. ವಿವಿಧ ಬಗೆಯ ಸಾಹಿತ್ಯ ಓದು ಕಡಿಮೆಯಾಗುತ್ತಿದೆ. ಶಿಕ್ಷಕರು ಸಾಹಿತ್ಯದ ಬಗೆಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬರೆವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಸೌಂದರ್ಯವನ್ನು ಉಳಿಸಿಕೊಳ್ಳಬೇಕು” ಎಂದು ಶಿಕ್ಷಕ ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಪುತ್ತೂರಿನ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಇದರ ಮಾಲಕ ಜಿ.ಎಲ್. ಬಲರಾಮ ಆಚಾರ್ಯರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ‘ಗೀತಾಚಾರ್ಯ ಶ್ರೀಕೃಷ್ಣ ಜಗದ್ಗುರು ಶಿಕ್ಷಕರೆಲ್ಲಾ ಆಚಾರ್ಯರು. ಅವರ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಗೌರವವಿದೆ” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಭಾಗವಹಿಸಿದ ಕವಿಗಳಿಗೆ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಜಯಾನಂದ ಪೆರಾಜೆ ಸಂಪಾದಕತ್ವದ ಭಗವದ್ಗೀತೆಯ ಬಗ್ಗೆ ಕವಿಗಳಿಂದ ರಚಿತವಾದ ಕವನಸಂಕಲನ ‘ಗೀತಾ ಫಲ’ ಕೃತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಬಿಡುಗಡೆಗೊಳಿಸಿ ಪುಸ್ತಕದ ಹೂರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿಗಳು ತಮ್ಮ ಕೃತಿಗಳಿಂದ ಗುರುತಿಸ್ಪಡಬೇಕೇ ಹೊರತು ಹೆಸರಿನಂದಲ್ಲ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಡಾ. ಶಾಂತಾ ಪುತ್ತೂರು ಅವರು ಹಿರಿಯ ಆಚಾರ್ಯ ವಿ.ಬಿ. ಅರ್ತಿಕಜೆಯವರಿಗೆ ರಕ್ಷಾಬಂಧನ ಮಾಡಿದರು. ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ, ಹಾ.ಮ. ಸತೀಶ ಬೆಂಗಳೂರು, ವಿಜಯ ಕುಮಾರ ಹೆಬ್ಬಾರಬೈಲು ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಣ ಸೌರಭ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕಥಾಬಿಂದು ಪ್ರಕಾಶನ ಮಂಗಳೂರಿನ ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮರ್ ಶುಭಾಸಂಶನೆ ಮಾಡಿ ವಂದಿಸಿದರು. ಡಾ. ವಾಣಿಶ್ರೀ ಕಾಸರಗೋಡು ತಂಡದಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವಕಿ ಜಯಾನಂದ ಉಪ್ಪಿನಂಗಡಿ ನಿರೂಪಿಸಿದರು.