05 ಏಪ್ರಿಲ್ 2023, ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರ ಹಳ್ಳಿ ಅಂಚೆ, ಕೋಲಾರ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದೊಂದಿಗೆ ಹುಣ್ಣಿಮೆ ಹಾಡು 191 ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 06-04-2023 ಗುರುವಾರ ಸಂಜೆ 7-00ಕ್ಕೆ ರಂಗ ಪ್ರದರ್ಶನ ಕಲಾ ಕೇಂದ್ರ, ಬೆಂಗಳೂರು ಇವರಿಂದ ವಿಲಿಯಮ್ ಶೇಕ್ಸ್ ಪಿಯರ್ ರಚನೆಯ “ಮ್ಯಾಕ್ ಬೆತ್” ನಾಟಕ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಂಗ ನಿರ್ದೇಶಕರಾದ ಮೈಕೊ ಶಿವಶಂಕರ್, ಶಿಕ್ಷಕರ ಗೆಳೆಯರ ಬಳಗ ಕೋಲಾರ ಇದರ ಅಧ್ಯಕ್ಷರಾದ ಎಸ್. ನಾರಾಯಣ ಸ್ವಾಮಿ ಹಾಗೂ ರಂಗ ಇಂಚರ ಟ್ರಸ್ಟ್, ಕೋಲಾರ ಇದರ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ.
ಈ ನಾಟಕವನ್ನು ರಾಮಚಂದ್ರ ದೇವ ಕನ್ನಡಕ್ಕೆ ಅನುವಾದಿಸಿದ್ದು, ಮೈಕೊ ಶಿವಶಂಕರ್ ನಿರ್ದೇಶಿಸಿ, ವೆಂಕಟೇಶ್ ಜೋಶಿ ಮತ್ತು ಸುಮುಖ್ ಭಾರದ್ವಾಜ್ ರವರ ಸಂಗೀತ ಈ ನಾಟಕಕ್ಕಿದೆ. ರಾಮಕೃಷ್ಣ ಬೆಳ್ತೂರು ವಸ್ತ್ರ ವಿನ್ಯಾಸ/ ಪ್ರಸಾಧನದಲ್ಲಿ ಸಹಕರಿಸಲಿದ್ದು, ರವಿಶಂಕರ್ ಮತ್ತು ಏಸುಪಾದಂರವರು ಬೆಳಕಿನ ವಿನ್ಯಾಸ ಮಾಡಲಿದ್ದಾರೆ.
ಭೂಮಿಕೆ:
‘ಮನೆಗೊಂದು ಹುಂಡಿ, ದಿನಕ್ಕೊಂದು ರೂಪಾಯಿ’ ಎಂಬ ನೇಮವನ್ನು 1995ರಲ್ಲಿ ತನ್ನದಾಗಿಸಿಕೊಂಡು ಪ್ರಾರಂಭವಾದ ‘ಆದಿಮ’ ತನ್ನ ಹತ್ತು ವರ್ಷಗಳಲ್ಲಿ 36 ಸಾವಿರ ರೂಗಳನ್ನು ಸಂಗ್ರಹಿಸಿ, ಅದರಿಂದ ಭೂಮಿ ಕೊಂಡು ಅಲ್ಲಿ ಕಟ್ಟಿದ ಕನಸಿನ ಕೇಂದ್ರವೇ ‘ಆದಿಮ ಸಾಂಸ್ಕೃತಿಕ ಕೇಂದ್ರ’. ಇದು ಕೋಲಾರದ ಶತಶೃಂಗ ಬೆಟ್ಟ ಸಾಲಿನಲ್ಲಿರುವ ‘ಶಿವಗಂಗೆ’ ಎಂಬ ಸಣ್ಣ ಗ್ರಾಮದ ಪಕ್ಕದಲ್ಲಿದೆ. ಕಳೆದ ಮೂರು ದಶಕಗಳಿಂದ ಸಾಂಸ್ಕೃತಿಕ ಆಂದೋಲನಗಳಲ್ಲಿ ಗುರ್ತಿಸಿಕೊಂಡು ಬಂದಿರುವಂತಹ, ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಸಮಾನ ಮನಸ್ಕರ ತಂಡ.
ಆದಿಮದ ನಡೆ
ಆ ಬೆಟ್ಟದ ಬೆಳದಿಂಗಳಲ್ಲಿ ಹುಣ್ಣಿಮೆ ಹಾಡು…
ದಿನಾಂಕ 10 ಆಗಸ್ಟ್ 2006ರಂದು ಪ್ರಾರಂಭವಾದ ಹುಣ್ಣಿಮೆ ಹಾಡಿನ ಈ ಸರಣಿ ಆದಿಮದ ಬಹು ಮುಖ್ಯವಾದ ಸಾಂಸ್ಕೃತಿಕ ನಡೆಯಲ್ಲೊಂದು. ಪ್ರತಿ ಹುಣ್ಣಿಮೆ ರಾತ್ರಿ ಬೆಟ್ಟದ ಮೇಲೆ ನಡೆಯುವ ನಾಟಕ, ಹಾಡು, ಹಸೆ, ನೃತ್ಯರೂಪಕ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನಗಳು, ಗದ್ದುಗೆ ಗೌರವ, ನುಡಿ ನಮನ ಹೀಗೆ ಬಹು ವಿದಧ ಸಾಂಸ್ಕೃತಿಕ ಕಾರ್ಯಕ್ರಮಗಳು ತಪ್ಪದೆ ನಡೆಯುತ್ತಾ ಬಂದಿದೆ. ಹೀಗೆ 50, 100 ಮತ್ತು 150ನೇ ಹುಣ್ಣಿಮೆ ಹಾಡುಗಳೂ ವೈವಿಧ್ಯತೆಯಿಂದ ಕೂಡಿದ್ದು ನೂರಾರು ಪ್ರತಿಭೆಗಳಿಗೆ ದಾರಿ ದೀವಿಗೆಯಾಗಿವೆ.
ಆದಿಮ ಪ್ರಕಾಶನ
ಅರ್ಥ ಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ, ಜೀವಪರ ಚಟುವಟಿಕೆಗೆ ಪುಸ್ತಕ ಪ್ರಕಟಣೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಕಾವ್ಯ, ಸಂಸ್ಕೃತಿ, ವಿಚಾರ, ಸ್ಥಳೀಯ ಜ್ಞಾನಕ್ಕೆ ಪೂರಕವಾದ ವಿವಿಧ ರೀತಿಯ ಪುಸ್ತಕಗಳನ್ನು ಹೊರತಂದಿದೆ. ಈ ಪ್ರಕಟಣೆಯ ಕಾಯಕ್ಕೆ ಅನೇಕ ಸಹೃದಯ ಮನುಸ್ಸುಗಳು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಈ ತನಕ ಸುಮಾರು 12ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಹೊರತರಲಾಗಿದೆ.