Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ‘ಸ್ವರಾನಂದ ಪ್ರತಿಷ್ಠಾನ’ದಿಂದ ಅಹೋರಾತ್ರಿ ನಾದಾನುಭವ
    Music

    ಮಂಗಳೂರಿನಲ್ಲಿ ‘ಸ್ವರಾನಂದ ಪ್ರತಿಷ್ಠಾನ’ದಿಂದ ಅಹೋರಾತ್ರಿ ನಾದಾನುಭವ

    January 11, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನಲ್ಲಿ ಹೊಸದಾಗಿ ರೂಪುಗೊಂಡ ‘ಸ್ವರಾನಂದ ಪ್ರತಿಷ್ಠಾನ’ವು ಬಿಇಎಮ್ ಹೈಸ್ಕೂಲಿನ ಸಭಾಂಗಣದಲ್ಲಿ ತನ್ನ ಮೊದಲನೆಯ ಕಾರ್ಯಕ್ರಮವನ್ನು ದಿನಾಂಕ 16-12-2023ರಂದು ಆಯೋಜಿಸಿತ್ತು. ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮವಾಗಿ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 7ರವರೆಗಿನ ಸಂಗೀತ ನೀಡಿದ ರಸಾನುಭವ ಬಹುಕಾಲ ನೆನಪಿನಲ್ಲುಳಿಯುವಂಥದ್ದು. ‘ಬನಮ ಚರಾವತ ಗಯ್ಯಾ’ ಎಂಬ ಸಾಲಿನೊಂದಿಗೆ ರಾಗ ಮಾಲಗುಂಜಿಯ ಸ್ವರಗಳು ಮಧ್ಯರಾತ್ರಿ 12ರ ಸುಮಾರಿನಲ್ಲಿ ಸಭಾಂಗಣವನ್ನು ಆವರಿಸುತ್ತಿದ್ದಂತೆ, ಎದುರಿಗಿದ್ದ ಶ್ರೋತೃಗಳು ನಿದ್ರೆಯ ಆಯಾಸವನ್ನೂ ಮರೆತು ವಿದುಷಿ ಅಪೂರ್ವಾ ಗೋಖಲೆ ಮತ್ತು ಪಲ್ಲವಿ ಜೋಶಿ ಸಹೋದರಿಯರ ಮೋಹಕ ಗಾಯನದಲ್ಲಿ ಲೀನರಾಗಿದ್ದರು.

    ಹಿಂದೂಸ್ಥಾನಿ ಸಂಗೀತ ಪರಂಪರೆಯಲ್ಲಿ ಹಿಂದೆ ರೂಢಿಯಲ್ಲಿದ್ದು ಈಗ ಕಡಿಮೆಯಾಗುತ್ತಿರುವ ಬೈಠಕ್ ಕಾರ್ಯಕ್ರಮಗಳನ್ನು ಮಂಗಳೂರು ಪ್ರದೇಶದಲ್ಲಿ ಆರಂಭಿಸುವ ಹುಮ್ಮಸ್ಸಿನಿಂದ ಸಮಾನ ಸಂಗೀತಾಸಕ್ತರು ಸೇರಿ ಆರಂಭಿಸಿದ ಸಂಸ್ಥೆಯೇ ‘ಸ್ವರಾನಂದ ಪ್ರತಿಷ್ಠಾನ’. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ಕಲಾವಿದರ ವಿಭಿನ್ನ ಪ್ರಸ್ತುತಿ ಕೇಳಲು ಲಭ್ಯವಾಯಿತು. ಮಾತ್ರವಲ್ಲದೆ, ರಾಗ-ಸಮಯ ಪದ್ಧತಿಗನುಸಾರವಾಗಿ ರಾತ್ರಿಯಿಂದ ಬೆಳಗಿನವರೆಗಿನ ತುಂಬಾ ವಿರಳವಾಗಿ ಕೇಳ ಸಿಗುವ ರಾಗಗಳನ್ನು ಆಸ್ವಾದಿಸುವ ಅವಕಾಶವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮೊದಲ ಕಾರ್ಯಕ್ರಮ ನೀಡಿದವರು 79ರ ವಯಸ್ಸಿನ ಪಂ.ಸೋಮನಾಥ ಮರ್ಡೂರ್, ಅವರು ರಾಗ, ದುರ್ಗಾದ ಸೌಂದರ್ಯವನ್ನು ತಮ್ಮ ಗಾಯನದ ವಿಶೇಷತೆಯಾದ ಭಾವಯುಕ್ತ ‘ಪುಕಾರ್’ಗಳ ಮೂಲಕ ತೆರೆದಿಟ್ಟರು. ತಬಲಾದಲ್ಲಿ ಪಂ.ಅರವಿಂದ ಕುಮಾರ್ ಆಜಾದ್ ಹಾಗೂ ಹಾರ್ಮೋನಿಯಂನಲ್ಲಿ ಪಂ.ಸುಧೀರ್ ನಾಯಕ್‌ ಅವರು ಸಹಕರಿಸಿದರು. ಆ ನಂತರ ಪಂ. ಸುಧೀರ್ ನಾಯಕ್ ಅವರು ಹಾರ್ಮೋನಿಯಂ ಸೋಲೋನಲ್ಲಿ ಜೈಜೈವಂತಿ ಹಾಗೂ ಕೀರವಾಣಿ ರಾಗಗಳಲ್ಲಿ ತಮ್ಮ ಮೇಧಾವಿತನ ಮತ್ತು ಕೈಚಳಕವನ್ನು ಮನಮುಟ್ಟುವಂತೆ ಬಿಡಿಸಿಟ್ಟರು. ಪಂ. ಗುರುಮೂರ್ತಿ ವೈದ್ಯ ಅವರು ತಬಲಾದಲ್ಲಿ ಸಹಕರಿಸಿದರು.

    ಆ ಬಳಿಕ ವೇದಿಕೆಗೆ ಬಂದವರು ಗ್ವಾಲಿಯರ್ ಘರಾಣೆಯ ಪಕ್ವ ಗಾಯಕಿಯರಾದ ವಿದುಷಿ ಅಪೂರ್ವಾ ಗೋಖಲೆ ಮತ್ತು ಪಲ್ಲವಿ ಜೋಶಿ ಸಹೋದರಿಯರು. ವಿಚಾರಯುಕ್ತ, ಶಿಸ್ತುಬದ್ಧ, ಸುಸಂಬದ್ಧ ಮತ್ತು ಅಷ್ಟೇ ಆನಂದದಾಯಕವಾದ ಪ್ರಸ್ತುತಿಗೆ ಹೆಸರಾದ ಈ ಗಾಯಕಿಯರು ರಾಗ ಮಾಲಗುಂಜಿ, ನಾಯಕಿ ಕಾನಡಾ ಮತ್ತು ಭಾಗೇಶ್ರೀ ಅಂಗದ ಚಂದ್ರಕೌನ್ಸ್ ಈ ಅಪರೂಪದ ರಾಗಗಳನ್ನು ಆಯ್ದುಕೊಂಡದ್ದು ಕೇಳುಗರಿಗೆ ದೊರಕಿದ ರಸದೌತಣವಾಗಿತ್ತು. ರಾಗ, ಲಯದ ಕುರಿತ ಅವರ ಚಿಂತನೆ, ಆವರ್ತನವನ್ನು ಅವರು ತುಂಬುವ ರೀತಿಯಲ್ಲಿ ಕಲಿಯುವಂತಹ ಅನೇಕ ವಿಷಯಗಳಿವೆ. ಇವರ ಗಾಯನದಲ್ಲಿ ಉತ್ಸಾಹವಿದೆ, ಚಮತ್ಕಾರವಿದೆ ಜೊತೆಗೆ ಸ್ವರದ ಆನಂದವಿದೆ. ಅಪೂರ್ವಾ ಅವರು ಕೆಳಗಿನ ಸ್ವರಗಳಲ್ಲಿನ ಸಂಚಾರವನ್ನು ಗಂಭೀರವಾಗಿ ನಡೆಸಿ ರಾಗದ ಚೌಕಟ್ಟನ್ನು ನಿಲ್ಲಿಸುವ ಕೆಲಸ ಮಾಡಿದರೆ, ಪಲ್ಲವಿ ಅವರು ಆ ಚೌಕಟ್ಟಿನ ಮೇಲೆ ಸೌಧವನ್ನು ಕಟ್ಟುವ ಕಾರ್ಯವನ್ನು ತಾರ ಸಪ್ತಕದಲ್ಲಿ ಲೀಲಾಜಾಲವಾಗಿ ಮಾಡಿದರು. ಅಪರೂಪದ ತಾಳಗಳಾದ ತಿಲವಾಡಾ, ಝೂಮ್ರಾಗಳ ಮೇಲಿನ ಅವರ ಹಿಡಿತ ಅಸಾಮಾನ್ಯ. ತಬಲಾದಲ್ಲಿ ಗುರುಮೂರ್ತಿ ವೈದ್ಯ, ಹಾರ್ಮೋನಿಯಂನಲ್ಲಿ ಸುಧೀರ್ ನಾಯಕ್‌ ಅವರದ್ದು ಸಮರ್ಥ ಸಾಥ್ ಸಂಗತ್.

    ಈ ಪ್ರಸ್ತುತಿಯ ನಂತರ ಸರೋದ್‌ ವಾದನ ನಡೆಸಿಕೊಟ್ಟವರು ಅಭಿಷೇಕ್ ಬೋರ್‌ಕ‌ರ್, ನುಡಿಸಲು ಕಠಿಣವಾದ ಈ ವಾದ್ಯದ ಮೇಲೆ ಮಧ್ಯರಾತ್ರಿಯ ‘ರಾಜ’ನೆನಿಸಿದ ದರಬಾರಿ ಕಾನಡಾವನ್ನು, ಆ ರಾಗಕ್ಕೆ ಸಲ್ಲುವ ಗಂಭೀರವಾದ ಮೀಂಡ್‌ಯುಕ್ತ ಅಲಾಪ್ ದೊಂದಿಗೆ ಅತ್ಯಂತ ಕೌಶಲದಿಂದ ನುಡಿಸಿದರು. ನಂತರದಲ್ಲಿ ರಾಗ ಝೀಝೋಟಿ ನುಡಿಸಿದ ಅಭಿಷೇಕ್ ಅವರ ಜೊತೆ ತಬಲಾದಲ್ಲಿ ಉದಯ್ ಕುಲಕರ್ಣಿ ಅತ್ಯಂತ ಪ್ರಬುದ್ಧ ಸಾಥ್ ನೀಡಿದರು.

    ಮಧ್ಯರಾತ್ರಿ ಸರಿದು ಬೆಳಗು ಹಣಕಿ ಹಾಕುವ ಮಂಗಳ ಸಮಯದಲ್ಲಿ ಬೆಳಗಿನ ರಾಗಗಳ ಮಧುರ ಸ್ವರಗಳೊಂದಿಗೆ ಜನಮನಸೂರೆಗೊಂಡವರು ಕುಮಾರ್ ಮರ್ಡೂರ್. ತಮ್ಮ ತಂದೆ ಸೋಮನಾಥ ಮರ್ಡೂರ್ ಅವರಿಂದ ಒಳ್ಳೆಯ ವಿದ್ಯೆ ಪಡೆದು ಸ್ವಲ್ಪ ಕಾಲ ಕೋಲ್ಕತ್ತದ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಕುಮಾರ್ ಅವರ ಗಾಯನವು ಕಿರಾನಾ ಘರಾಣೆಯ ಸ್ವರ ಪ್ರಧಾನ ಗಾಯಕಿಯ ಜೊತೆ ಗ್ವಾಲಿಯರ್‌ನ ಲಯ-ಚೌಕಟ್ಟು ಪ್ರಧಾನ ಗಾಯಕಿಯ ಅಂಶಗಳನ್ನೂ ಒಳಗೊಂಡಿರುವುದು ಅವರ ಗಾಯನಕ್ಕೆ ಹೊಸ ಹೊಳಪನ್ನು ಕೊಟ್ಟಿದೆ. ಜ್ಞಾನೇಶ್ವರ ಸೋನಾವನೆ ಮತ್ತು ಉದಯ್ ಕುಲಕರ್ಣಿ ಅವರುಗಳ ಅತ್ಯಂತ ಲವಲವಿಕೆಯ ಸಾಥ್‌ನೊಂದಿಗೆ ಭಟಿಯಾರ್ ಮತ್ತು ಹಿಂಡೋಲ್ ರಾಗಗಳನ್ನು ಕುಮಾರ್ ಪ್ರಸ್ತುತಪಡಿಸಿದರು.

    ಮಾರವಾ ಥಾಟ್ ನ ಬೆಳಗಿನ ರಾಗಗಳಾದ ಭಟಿಯಾರ್, ಹಿಂಡೋಲ್‌ಗಳ ನಂತರದಲ್ಲಿ ಸಮಯ ಚಕ್ರವನ್ನು ಪ್ರವೇಶಿಸುವುದು ಭೈರವ್ ಥಾಟ್‌ನ ಕೋಮಲ ಸ್ವರಗಳು, ನಸುಕಿನ ಮಾರ್ದವತೆಯನ್ನು ಹಿಡಿದಿಟ್ಟುಕೊಂಡ ಈ ರಾಗಗಳು ತುಂಬಾ ಅಪ್ಯಾಯಮಾನವೆನಿಸುತ್ತವೆ. ರಾಗ ‘ಲಲತ್’, ರವಿಕಿರಣ್ ಮಣಿಪಾಲ್ ಅವರ ಪ್ರಸ್ತುತಿಯಲ್ಲಿ ಆರಂಭವಾದಾಗ ಹೊರಗಡೆ ಭಾನುವಿನ ಉಗಮವಾಗತೊಡಗಿತ್ತು. `ಮನವಾ ತೂ ಕಾಹ ಡೂಂಡ್ ಫಿರೆ, ಮಾಟಿ ಕ ಮಠ ಮಂದಿರ ಮೆ’ ಎಂಬ ಬಂದಿಶ್ ಎತ್ತಿಕೊಂಡು ಅವರು ರಾಗವನ್ನು ವಿಸ್ತರಿಸಿದರು. ವಿಶೇಷವಾದ ಹಾಗೂ ವಿಚಾರಾತ್ಮಕವಾದ ಸಾಹಿತ್ಯವುಳ್ಳ ಬಂದಿಶ್ ಅನ್ನು ಅಯ್ದುಕೊಂಡು ಅಲ್ಲಿನ ವಿಚಾರವನ್ನು ಸ್ವರ ಹಾಗೂ ರಾಗಭಾವದ ಮೂಲಕ ಸ್ಥಾಪಿಸುವ ಪ್ರಯತ್ನವನ್ನು ಮಾಡುವ ರವಿಕಿರಣ್‌ ಅವರದ್ದು ವಿಭಿನ್ನವಾದ ಗಾಯನ ಶೈಲಿ. ಇಲ್ಲಿ ಬುದ್ಧಿ-ಭಾವಗಳ ಸಂಗಮವಿದೆ, ಮನಸ್ಸನ್ನು ಮುಟ್ಟುವ ಆರ್ತತೆಯಿದೆ.

    ರವಿಕಿರಣ್ ಅವರ ಪ್ರಸ್ತುತಿಯ ಬಸಂತ್ ಮುಖಾರಿ ರಾಗದ ಬಂದಿಲ್‌ನೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಹಿಂದೂಸ್ತಾನಿ ಸಂಗೀತದಲ್ಲಿ ಎಲ್ಲಾ ರಾಗಗಳು ಸಮಯ ಚಕ್ರ ಅಧಾರಿತವಾಗಿವೆ. ಈ ಕಾರಣದಿಂದಾಗಿ, ಅನೇಕ ರಾಗಗಳು ಕೇಳಲು ದೊರಕುವುದಿಲ್ಲ. ಆಹೋರಾತ್ರಿ ಕಾರ್ಯಕ್ರಮಗಳಲ್ಲಿ ದಿನ-ರಾತ್ರಿಗಳ ಬದಲಾವಣೆಯ ಜೊತೆಯಲ್ಲೇ ರಾಗದಲ್ಲಿ ಪ್ರಯೋಗವಾಗುವ ಸ್ವರಗಳು ಬದಲಾಗುತ್ತಾ ಹೋಗುವ ಅದ್ಭುತದ ಅನುಭವ ಸಾಧ್ಯವಾಗುತ್ತದೆ.

    ರಾತ್ರಿಯಿಂದ ಬೆಳಗಿನವರೆಗೆ ವೇದಿಕೆಯ ಮೇಲೆ ಪ್ರವೇಶಿಸುವ ಕಲಾವಿದರು ರಾಗದ ಪರಕಾಯ ಪ್ರವೇಶ ಮಾಡುವಂಥವರು. ಪ್ರತಿಯೊಬ್ಬರ ಕಂಠದ ಅಥವಾ ಅವರು ನುಡಿಸುವ ವಾದ್ಯದ ಟೋನಲ್ ಕ್ವಾಲಿಟಿ ವಿಭಿನ್ನವಾದದ್ದು. ಅವರು ಪಡೆದ ಪಾಠ, ತಾಲೀಮು, ಅವರು ಮಾಡಿದ ಅಭ್ಯಾಸ, ಅವರ ಪರಿಣತಿ, ಪ್ರತಿಭೆ, ಅನುಭವ ಎಲ್ಲವೂ ಬೇರೆ ಬೇರೆ. ಮಾತ್ರವಲ್ಲದೆ ಸ್ವರ-ರಾಗ-ಲಯ ಕುರಿತು ಪ್ರತಿಯೊಬ್ಬ ಕಲಾವಿದನ ಚಿಂತನೆ-ಕಲ್ಪನೆ ಬೇರೆ ಬೇರೆಯದೇ ಆಗಿದೆ. ಇವೆಲ್ಲದರ ಸಾರದಂತಿರುವ ವೇದಿಕೆ ಮೇಲಿನ ‘ಪ್ರಸ್ತುತಿ’ ಇನ್ನೂ ಬೇರೆಯದೇ ಆಗಿರುತ್ತದೆ. ಆದರೆ, ಪ್ರತಿಯೊಬ್ಬ ಕಲಾವಿದನ ಗುರಿ ಮಾತ್ರ ‘ರಸಾಭಿವ್ಯಕ್ತಿ’ಯೇ ಆಗಿರುತ್ತದೆ. ಅವಸರದ ಬದುಕಿಗೆ ಒಗ್ಗಿಕೊಂಡಂತೆ ಆಗಿರುವ ದಕ್ಷಿಣ ಕನ್ನಡದಲ್ಲಿ ಒಂದಷ್ಟು ಸಮಯವನ್ನು ಹುಡುಕಿ ತೆಗೆದು, ಅದನ್ನು ಶಾಸ್ತ್ರೀಯ ಸಂಗೀತಕ್ಕಾಗಿ ವಿನಿಯೋಗಿಸುವ ಧೈರ್ಯ ತೋರಿದ ಸ್ವರಾನಂದ ಪ್ರತಿಷ್ಠಾನದ ಆಯೋಜಕರು ಅಭಿನಂದನಾರ್ಹರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ‘ಸಮರ್ಪಣ’ ಕವನಸಂಕಲನ ಲೋಕಾರ್ಪಣೆ
    Next Article ಕರಂದಕ್ಕಾಡಿನ ಪದ್ಮಗಿರಿಯಲ್ಲಿ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.