ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಅಜಿತ್ ಕುಮಾರ್ ಸ್ಮಾರಕ – 2025ನೇ ಸಾಲಿನ ಅಜಿತಶ್ರೀ, ನಾಟ್ಯಶ್ರೀ ಮತ್ತು ಯೋಗಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಏಳು ಸಾಧಕರು ಭಾಜನರಾಗಿದ್ದಾರೆ. ‘ಅಜಿತಶ್ರೀ ಪ್ರಶಸ್ತಿ’ಗೆ ಹಿರಿಯ ರಂಗಕರ್ಮಿ ಡಾ. ಬಿ. ಜಯಶ್ರೀ, ಭರತನಾಟ್ಯ ಕಲಾವಿದೆ ಪದ್ಮನಿ ರವಿ ಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಪಾತ್ರರಾಗಿದ್ದಾರೆ. ತಲಾ ರೂ.50 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ.
‘ನಾಟ್ಯಶ್ರೀ ಪ್ರಶಸ್ತಿ’ಗೆ ಭರತನಾಟ್ಯ ಕಲಾವಿದೆ ಪೂರ್ಣಿಮಾ ಕೆ. ಗುರುರಾಜ್, ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಹಾಗೂ ರಂಗಭೂಮಿ ಸಂಘಟಕ ಎಂ.ಎಸ್. ಶ್ಯಾಮಸುಂದರ್ (ಅಂಕಲ್ ಶ್ಯಾಮ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂ.20 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ.
‘ಯೋಗಶ್ರೀ ಪ್ರಶಸ್ತಿ’ಗೆ ಶಿವಮೊಗ್ಗದ ಯೋಗ ಶಿಕ್ಷಕ ಭಾ.ಸು. ಅರವಿಂದ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.10 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ದಿನಾಂಕ 14 ಡಿಸೆಂಬರ್ 2025ರಂದು ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಿತ್ ಕುಮಾರ್ ಸ್ಮಾರಕ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಕೆ.ಆರ್. ಮುರಳೀಧರ ತಿಳಿಸಿದ್ದಾರೆ.
