ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕು ಘಟಕ ಇದರ ವತಿಯಿಂದ ದಿನಾಂಕ 12 ಜನವರಿ 2025 ಭಾನುವಾರದಂದು ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ‘ಆಲೂರು ತಾಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ಹಿರಿಯ ಪತ್ರಕರ್ತೆ, ಲೇಖಕಿ ಲೀಲಾವತಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ರವಿ ನಾಕಲಗೂಡು ಉದ್ಘಾಟಿಸಲಿದ್ದು, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡರವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಮಾಜ ಸೇವಕರಾದ ಕಟ್ಟೆಗದ್ದೆ ನಾಗರಾಜ್ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ ಆಶಯ ನುಡಿಗಳನ್ನಾಡುವರು. ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರುರವರು ಕವಿ ವಿಶ್ವಾಸ್ ಡಿ. ಗೌಡರವರ “ನೆನಪುಗಳ ಖಾತೆ” ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ. ಶಿವಣ್ಣ ಅಧಿಕಾರ ಹಸ್ತಾಂತರ ಮಾಡಲಿದ್ದು, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದಾರೆ. ವೇದಿಕೆಯ ತಾಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿಯವರು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ. ನಂತರ ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾರ್ಧಯಕ್ಷೆ ಲೀಲಾವತಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾ ಲೋಕೇಶ್, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ತಾಲೂಕು ಪತ್ರಕರ್ತರ ಸಂಘದ ಅರ್ಧಯಕ್ಷ ಎಚ್.ಜೆ. ಪೃಥ್ವಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ. ಅಮೃತೇಶ್, ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರ ಕೆ.ಎಂ. ಹರೀಶ್, ಎಸ್.ಕೆ.ಎನ್.ಆರ್. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಎಂ.ಪಿ. ಶಿವಕುಮಾರ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಡಿ. ಗೋಪಾಲ್, ಮಂಗಳಾ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಆರ್. ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ.
ಅಪರಾಹ್ನ 1-30 ಗಂಟೆಗೆ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಪ್ರಸಿದ್ದ ಸಾಹಿತಿ ಎನ್. ಶೈಲಜಾ ಹಾಸನ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಾಹಿತಿ ವಾಸು ಸಮುದ್ರವಳ್ಳಿ ಆಶಯ ನುಡಿಗಳನ್ನಾಡುವರು. ಶಿಕ್ಷಕ ಹಾಗೂ ಜಾನಪದ ಕಲಾವಿದ ಎಚ್.ಡಿ. ಸೋಮೇಶ್ “ಜಾನಪದ ಮತ್ತು ರಂಗಭೂಮಿಗೆ ಆಲೂರು ತಾಲೂಕಿನ ಕೊಡುಗೆ”; ಕವಯಿತ್ರಿ ಎಂ. ಚಂದ್ರಕಲಾರವರು “ಸಾಹಿತ್ಯ ಕ್ಷೇತ್ರಕ್ಕೆ ಆಲೂರು ತಾಲೂಕಿನ ಕೊಡುಗೆ”; ಕವಿ ಧರ್ಮ ಕೆರಲೂರುರವರು “ಆಲೂರು ತಾಲೂಕಿನ ಐತಿಹ್ಯಗಳು” ಎಂಬ ವಿಷಯದಡಿಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್ ಸಮಾರೋಪ ನುಡಿಗಳನ್ನಾಡಲಿದ್ದು, ಬಿ.ಎಂ. ಭಾರತಿ ಹಾದಿಗೆಯವರು ಸಾಧಕರಿಗೆ ವಿಶೇಷ ಸನ್ಮಾನ ಮಾಡಲಿದ್ದಾರೆ. ರೈತ ಸಂಘದ ತಾಲೂಕು ಕಾರ್ಯದರ್ಶಿ ಜಯಣ್ಣ ಹೈದುರ್ ಹಾಗೂ ಸಮಾಜ ಸೇವಕ ಗೋಲ್ಡ್ ರಮೇಶ್ ಅವರುಗಳು ಸನ್ಮಾನಕ್ಕೆ ಭಾಜನವಾಗಲಿದ್ದಾರೆ. ಹಿರಿಯ ಸಾಹಿತಿ ಎಸ್.ಎಂ. ದೇವರಾಜೇಗೌಡರವರು ಆಯ್ದ ಹನ್ನೆರಡು ಸಾಧಕರಿಗೆ ವಿಜಯದುರ್ಗ ಸಾಧನಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಎಲ್ಲಾ ತಾಲೂಕು ಅಧ್ಯಕ್ಷರುಗಳು ಸೇರಿದಂತೆ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರುಗಳು, ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನ ಎಲ್ಲಾ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ತಾಲೂಕು ಅಧ್ಯಕ್ಷ ಎಸ್.ವಿ. ಕೃಷ್ಣೇಗೌಡ ಮಣಿಪುರ ಭಿನ್ನವಿಸಿಕೊಂಡಿದ್ದಾರೆ.