02 ಮಾರ್ಚ್ 2023, ಮಂಗಳೂರು : ನೆಯ್ಗೆಯ ನೂಲಿನಂತೆ ಮುದ್ರಾಡಿಯವರ ಜೀವನವೂ ಸಾಹಿತ್ಯ ಕೃತಿಗಳೂ ಸಾಧನೆಗಳೂ ಸ್ಪುಟವಾಗಿದ್ದವು. ಪ್ರಾಥಮಿಕ ಶಾಲಾ ಶಿಕ್ಷಕರಾದ ಮುದ್ರಾಡಿಯವರ ಕೃತಿ ವಿ.ವಿ.ಯ ಕನ್ನಡ ಐಚ್ಚಿಕ ವಿಷಯ ಪಠ್ಯವಾಗಿ ಆಯ್ಕೆಗೊಂಡಿದ್ದು, ಅವರ ಪ್ರತಿಭೆಗೆ ಸಾಕ್ಷಿ ಎಂದು ದ.ಕ. ಜಿಲ್ಲಾ ಕ.ಸಾ.ಪ.ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಕಚೇರಿಯಲ್ಲಿ ದಿನಾಂಕ 28-02-2023ರಂದು ಆಯೋಜಿಸಲಾದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು. ಹಿರಿಯ ಕಲಾವಿದ, ಸಾಹಿತಿ, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿಯವರು ಅಂಬಾತನಯರ ಬಹುಮುಖ ಪ್ರತಿಭೆಯನ್ನು ವಿವರಿಸುತ್ತಾ ‘ಪರಿತ್ಯಕ್ತ’ ಕೃತಿಯನ್ನು ಕನ್ನಡದ ಮೇರು ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರು ಶ್ಲಾಘಿಸಿರುವುದು ಅವರಿಗೆ ಸಂದ ಪ್ರಶಸ್ತಿಯೇ ಆಗಿದೆ. ನಟ, ನಾಟಕಕಾರ, ಪ್ರಸಂಗಕರ್ತೃ, ಯಕ್ಷಗಾನ ಕಲಾವಿದ ಅರ್ಥಧಾರಿ ಪ್ರವಚನಕಾರ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಂಬಾತನಯರಿಗೆ ಪಾರ್ತಿ ಸುಬ್ಬ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಹಲವಾರು ಪ್ರಶಸ್ತಿಗಳು ದೊರಕಿವೆ. 28 ಕೃತಿಗಳನ್ನು ರಚಿಸಿರುವ ಅವರ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದರು.
ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ಪ್ರಸ್ತಾವನೆಗೈದರು. ಗಮಕಿ ಸುರೇಶ ರಾವ್ ಅತ್ತೂರು ಗಾನ ನಮನ ಸಲ್ಲಿಸಿದರು. ಕ.ಸಾ.ಪ. ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಹರಿಕಥಾ ಪರಿಷತ್ ನ ಅಧ್ಯಕ್ಷ ಹರಿದಾಸ ಕೂಡ್ಲು, ಮಹಾಬಲ ಶೆಟ್ಟಿ, ಜನಾರ್ದನ ಹಂದೆ, ಪ್ರಸಂಗ ಕರ್ತ ನಿತ್ಯಾನಂದ ಕಾರಂತ ಪೊಳಲಿ, ಮಧುಸೂದನ ಅಲೆವೂರಾಯ, ಚಂದ್ರಶೇಖರ ಮಯ್ಯ, ಯೋಗೀಶ್ ಆಚಾರ್ ಮಣ್ಣಗುಡ್ಡೆ, ಗೆಳೆಯರ ಬಳಗದ ತಾರಾನಾಥ ಹೊಳ್ಳ ಮೊದಲಾದವರು ಪುಷ್ಪಾಂಜಲಿ ಸಲ್ಲಿಸಿದರು. ಸೇರಾಜೆ ಜಿ.ಕೆ. ಭಟ್ ವಂದಿಸಿದರು.
Subscribe to Updates
Get the latest creative news from FooBar about art, design and business.
ಸಾಹಿತ್ಯ ಲೋಕದ ದಿಗ್ಗಜ ಅಂಬಾತನಯ ಮುದ್ರಾಡಿಯವರಿಗೆ ಮಂಗಳೂರಿನಲ್ಲಿ ಸಾರ್ವಜನಿಕ ನುಡಿನಮನ
Previous Articleಶ್ರೀಮತಿ ಐರಿನ್ ಪಿಂಟೋ ರವರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ
Next Article ಡಾ. ಎಂ. ಪ್ರಭಾಕರ ಜೋಶಿಗೆ “ಆನಂದ ಸಮಾಜ ಭೂಷಣ” ಪ್ರಶಸ್ತಿ