ತೆಕ್ಕಟ್ಟೆ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ವಾರ್ಷಿಕೋತ್ಸವವು ದಿನಾಂಕ 22 ಫೆಬ್ರವರಿ 2026ರಂದು ಕೊಮೆ ಹೆಗ್ಡೆಕೆರೆ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆಯಿತು.
ಕಲಾವಿದದ್ವಯರಿಗೆ ಯಕ್ಷ ತುರಾಯಿ ಇಡುವುದರ ಮೂಲಕ ಕೊಮೆ ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಕಲಾ ಚಟುವಟಿಕೆಯಿಂದ ನಿರಂತರ ತೊಡಗಿಸಿಕೊಂಡ ಸಂಸ್ಥೆ ಯಶಸ್ವೀ ಕಲಾವೃಂದ. ವಾರ್ಷಿಕೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಪನ್ನಗೊಳಿಸುತ್ತಾ ಬಹಳ ಎತ್ತರಕ್ಕೇರಿದೆ. ಕಲಾ ಚಟುವಟಿಕೆಯಿಂದಲೇ ಊರ ಹಬ್ಬವನ್ನಾಗಿಸುವ ಧ್ಯೇಯ ಯಶಸ್ಸು ತಂದಿದೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮನಸ್ಥಿತಿ ಕಲಾಸಕ್ತಿರಿಗೆ ಇನ್ನಷ್ಟು ಬರಬೇಕು” ಎಂದು ಹೇಳಿದರು.
ಶ್ರೀಪರ್ಣ ಯಕ್ಷ ಬಳಗ ಮಿಥುನ್ ದೇವಾಡಿಗ ಮಾತನಾಡಿ “ರಂಗಕಲೆಯನ್ನು ಪ್ರೇಕ್ಷಕರಿದ್ದು ಪ್ರೋತ್ಸಾಹಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮವನ್ನು ಪೂರ್ಣ ಸವಿಯುವುದಕ್ಕೆ ಸಾಧ್ಯವಿಲ್ಲ. ರಂಗದ ಮುಂಬಾಗದಲ್ಲಿದ್ದು ಕಾರ್ಯಕ್ರಮ ವೀಕ್ಷಿಸುವುದರಲ್ಲೇ ನಿಜವಾದ ಸ್ವಾದ ಸಿಗಲು ಸಾಧ್ಯ” ಎಂದರು.
ಶ್ರೀಪರ್ಣ ತಂಡದ ನಿರ್ದೇಶಕ ಅಮಿತ್ ಬಿ. ನೇರಳಕಟ್ಟೆ, ಮೋಹನಚಂದ್ರ ಪಂಜಿಗಾರು, ಗೋಪಾಲ ಪೂಜಾರಿ ಕುಂದಾಪುರ, ಗಣೇಶ್ ಕೊಮೆ ಉಪಸ್ಥಿತರಿದ್ದರು. ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀಪರ್ಣ ಯಕ್ಷ ಬಳಗ ತೆಕ್ಕಟ್ಟೆ ಇವರಿಂದ ‘ವೀರಮಣಿ ಕಾಳಗ’ ಯಕ್ಷಗಾನ ರಂಗ ಪ್ರಸ್ತುತಿಗೊಂಡಿತು.
