ಹಾಸನ : ಮಾಣಿಕ್ಯ ಪ್ರಕಾಶನವು ದಿನಾಂಕ 11 ಅಕ್ಟೋಬರ್ 2026ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಸನದ ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ “ಕಳೆದ ಒಂದು ದಶಕಕ್ಕೂ ಅಧಿಕಕಾಲ ನಿರಂತರವಾಗಿ ಹಾಸನದ ಮಾಣಿಕ್ಯ ಪ್ರಕಾಶನ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಸತ್ವಯುತ ಕೃತಿಗಳನ್ನು ಪಾರದರ್ಶಕವಾಗಿ ಗುರುತಿಸಿ ನಗದು ಸಹಿತ ದತ್ತಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಅಕಾಡೆಮಿಗಳು ಮಾಡದ ಕಾರ್ಯಗಳನ್ನು ಮಾಣಿಕ್ಯ ಪ್ರಕಾಶನ ಮಾಡುತ್ತಿದೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯನ್ನು ಹಂಚಲು ಎನ್ನುವಂತೆ ಸಹೃದಯ ಮನಸ್ಸು ಇರುವ ದತ್ತಿ ದಾನಿಗಳು ಉದಾರ ಮನಸ್ಸಿನಿಂದ ದತ್ತಿ ನೀಡಿ ಪ್ರಶಸ್ತಿ ರೂಪದಲ್ಲಿ ಉತ್ತಮ ಕೃತಿಗಳಿಗನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ. ದತ್ತಿ ಪ್ರಶಸ್ತಿಗಳು ಕೇವಲ ಒಂದು ಗೌರವದ ಸಂಕೇತವಲ್ಲ. ಇದು ಸಾಧಕರ ಶ್ರಮವನ್ನು ಗುರುತಿಸುವ ಜೊತೆಗೆ, ಮುಂದಿನ ಪೀಳಿಗೆಗೆ ಪ್ರೇರಣೆ ನೀಡುವ ಸತ್ಕಾರ್ಯ. ದತ್ತಿ ನಿಧಿಯನ್ನು ಸ್ಥಾಪಿಸಿದ ದಾನಿಗಳ ಆಶಯ ಮತ್ತು ಶ್ರೇಷ್ಠ ಚಿಂತನೆಗಳನ್ನು ಜೀವಂತವಾಗಿಡುವುದು ಇಂತಹ ಸಮಾರಂಭಗಳ ಮುಖ್ಯ ಉದ್ದೇಶವಾಗಿದೆ. ಸಮಾಜಕ್ಕಾಗಿ ಶ್ರಮಿಸಿದವರನ್ನು ನೆನೆಯುವುದು ನಮ್ಮ ಕರ್ತವ್ಯ. ಇಂದು ಪ್ರಶಸ್ತಿ ಪಡೆದಿರುವ ಸಾಧಕರು ತಮ್ಮದೇ ಆದ ವಿಶಿಷ್ಟ ಕೊಡುಗೆಯ ಮೂಲಕ ನಮ್ಮ ಸಮಾಜ ಹಾಗೂ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಅರ್ಹ ಸಾಧಕರಿಗೆ ಈ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಂದು ನಾವು ರೀಲ್ಸ್, ಸ್ಕ್ರಾಲಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಮನುಷ್ಯನ ಗಮನದ ಅವಧಿ ಕ್ಷಣಕ್ಷಣಕ್ಕೂ ಕಡಿಮೆಯಾಗುತ್ತಿದೆ. ಇಂತಹ ಕಾಲದಲ್ಲೂ ನಾವೆಲ್ಲರೂ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಇಲ್ಲಿ ಒಂದೆಡೆ ನೆರೆದಿರುವುದು ಸಣ್ಣ ವಿಷಯವಲ್ಲ. ಇದು ಇಂದಿಗೂ ನಮಗೆ ಅಕ್ಷರದ ಮೇಲಿರುವ ಪ್ರೀತಿ ಮತ್ತು ಜೀವಂತಿಕೆಯನ್ನು ತೋರಿಸುತ್ತದೆ. ಇಂದು ನೀಡುತ್ತಿರುವ ದತ್ತಿ ಪ್ರಶಸ್ತಿಯು ಕೇವಲ ಒಬ್ಬ ಸಾಧಕನಿಗೆ ಸಂದ ಗೌರವವಲ್ಲ. ಇದು ಕಷ್ಟಪಟ್ಟು ಅಕ್ಷರ ಕೃಷಿ ಮಾಡಿದ ಜೀವಕ್ಕೆ ಸಮಾಜ ಸಲ್ಲಿಸುತ್ತಿರುವ ಕೃತಜ್ಞತೆ. ಇಂದಿನ ಪುರಸ್ಕೃತರ ಬರಹಗಳು ನಮ್ಮ ಸಮಾಜದ ಕನ್ನಡಿಯಾಗಿವೆ. ನಿಮ್ಮ ಲೇಖನಿ ಇನ್ನು ಹರಿತವಾಗಲಿ, ನಿಮ್ಮ ಆಲೋಚನೆಗಳು ಸಮಾಜಕ್ಕೆ ದಾರಿದೀಪವಾಗಲಿ ಸಾಹಿತ್ಯ ಎಂದರೆ ಕೇವಲ ಕಾಗದದ ಮೇಲಿನ ಪದಗಳಲ್ಲ.ಅದು ಮನುಷ್ಯನ ಒಳಗಣ್ಣನ್ನು ತೆರೆಸುವ ಶಕ್ತಿ. ವಿಜ್ಞಾನ ಮತ್ತು ತಂತ್ರಜ್ಞಾನ ನಮಗೆ ಹೇಗೆ ಬದುಕಬೇಕು ಎಂದು ಸೌಕರ್ಯಗಳನ್ನು ಕೊಡಬಹುದು. ಆದರೆ ಸಾಹಿತ್ಯ ಮತ್ತು ಕಲೆಗಳು ನಾವು ಏಕೆ ಬದುಕಬೇಕು, ಹೇಗೆ ಮನುಷ್ಯರಾಗಿರಬೇಕು ಎಂಬುದನ್ನು ಕಲಿಸಿಕೊಡುತ್ತವೆ. ಸಮಾಜದಲ್ಲಿ ಸೌಹಾರ್ದತೆ ಮತ್ತು ಕರುಣೆ ಮಾಯವಾಗುತ್ತಿರುವಾಗ, ಅದನ್ನು ಮರಳಿ ತರುವ ಶಕ್ತಿ ಕೇವಲ ಸಾಹಿತ್ಯಕ್ಕೆ ಮಾತ್ರ ಇದೆ.ಇಂದಿನ ತಂತ್ರಜ್ಞಾನದ ಯುಗದಲ್ಲಿ, ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ನಾವೆಲ್ಲರೂ ಮಾಹಿತಿಯ ಮಹಾಪೂರದಲ್ಲಿದ್ದೇವೆ, ಆದರೆ ಜ್ಞಾನದ ದಾರಿದ್ರ್ಯ ದಲ್ಲಿದ್ದೇವೆ. ಕೇವಲ ಸ್ಕ್ರೀನ್ ನೋಡುವುದರಿಂದ ಜ್ಞಾನ ಸಿಗುವುದಿಲ್ಲ, ಪುಸ್ತಕದ ಪುಟಗಳನ್ನು ತಿರುವಿ ಆಳವಾಗಿ ಓದಿದಾಗ ಮಾತ್ರ ಜ್ಞಾನ ದಕ್ಕುತ್ತದೆ. ಸಾಹಿತ್ಯದ ಎಲ್ಲಾ ಪ್ರಕಾರಗಳೂ ಮನುಷ್ಯನನ್ನು ಒಳಗಿನಿಂದ ಸಂಸ್ಕಾರವಂತನನ್ನಾಗಿ ಮಾಡುತ್ತವೆ. ಸಾಹಿತ್ಯ ಎಂದರೆ ಕೇವಲ ಮನರಂಜನೆಯಲ್ಲ, ಅದು ಸಮಾಜದ ಆತ್ಮಸಾಕ್ಷಿ. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಕೇವಲ ಗ್ಯಾಜೆಟ್‌ಗಳನ್ನು ಕೊಡುವ ಬದಲು, ಕಥೆ, ಕವನ, ನಾಟಕಗಳ ಪುಸ್ತಕಗಳನ್ನು ಪರಿಚಯಿಸಬೇಕು. ವೈವಿಧ್ಯಮಯ ಓದು ಮಕ್ಕಳ ಆಲೋಚನಾ ಶಕ್ತಿಯನ್ನು ವಿಸ್ತರಿಸುತ್ತದೆ. ನಾವು ಸಾಹಿತ್ಯವನ್ನು ಕೇವಲ ವೇದಿಕೆಗಳಿಗೆ ಸೀಮಿತಗೊಳಿಸಬಾರದು. ನಮ್ಮ ಮನೆಗಳಲ್ಲಿ ಮಕ್ಕಳಿಗೆ ಮೊಬೈಲ್ ಜೊತೆಗೆ ಕಥೆ ಪುಸ್ತಕಗಳನ್ನು ಕೊಡುವ ಹವ್ಯಾಸ ಬೆಳೆಸಬೇಕು. ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತರಬೇಕು. ಹಿರಿಯರ, ಸಾಹಿತಿಗಳ ಮೌಲ್ಯಯುತ, ವೈಚಾರಿಕ ಭಾಷಣಗಳು ಮಕ್ಕಳ ಕಿವಿಗೆ ಬೀಳಬೇಕು. ಮಕ್ಕಳು ಮೌಲ್ಯಗಳನ್ನು ಕಲಿಯಬೇಕು.ಹೆತ್ತವರನ್ನು ಗೌರವಿಸಬೇಕು. ಹಿರಿಯರು ವೃದ್ಧಾಶ್ರಮಗಳಲ್ಲಿ ಇರದೆ ಮನೆಯಲ್ಲಿ ಕಿರಿಯರ ಆರೈಕೆಯಲ್ಲಿ ನೆಮ್ಮದಿಯಿಂದ ಇರುವ ವಾತಾವರಣ ಕಲ್ಪಿಸಬೇಕು” ಎಂದು ಅಭಿಪ್ರಾಯಪಟ್ಟರು.

ಉಡುಪಿಯ ಹಿರಿಯ ಸಾಹಿತಿ ಪ್ರಭಾವತಿ ಶೆಡ್ತಿ ಆಶಯ ನುಡಿಗಳನ್ನಾಡಿ “ಮಾಣಿಕ್ಯ ಪ್ರಕಾಶನ ಮುಂಚಿನಿಂದಲೂ ಪ್ರಶಸ್ತಿ ಆಯ್ಕೆ ವಿಷಯದಲ್ಲಿ ಉತ್ಕೃಷ್ಠ ಕೃತಿಗಳನ್ನು ಗುರುತಿಸುವಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿರುವುದಕ್ಕೆ. ಈ ಸಾಲಿನಲ್ಲಿ 350ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿರುವುದು ಸಾಕ್ಷಿಯಾಗಿದೆ. ದತ್ತಿ ಪುರಸ್ಕೃತ ಕೃತಿ ಕತೃಗಳನ್ನು ಹಾಗೂ ದತ್ತಿ ದಾನಿಗಳನ್ನು ಮಾಣಿಕ್ಯ ಪ್ರಕಾಶನ ತುಂಬಾ ಗೌರವದಿಂದ ನಡೆಸಿಕೊಳ್ಳುತ್ತಿದೆ” ಎಂದರು.

ವೇದಿಕೆಯಲ್ಲಿ ದತ್ತಿ ದಾನಿಗಳಾದ ಡಾ. ಅಮರೇಶ್ ಪಾಟೀಲ, ಡಾ. ವಿಶ್ವೇಶ್ವರ ಎನ್.ಮೇಟಿ, ಸಿ.ಎನ್. ನೀಲಾವತಿ, ಶಿವಲೀಲಾ ಹುನಸಗಿ, ಫ್ಲಾವಿಯಾ ಅಲ್ಬುಕರ್ಕ್, ಸೈಯದ್ ಮುಹಿಬುಲ್ಲ ಖಾದ್ರಿ, ಸುರೇಶ್ ಪಿ.ಡಬ್ಲೂ.ಡಿ, ಡಿ.ಸುಜಲಾದೇವಿ, ದೇಸು ಆಲೂರು, ಹರಿಣಿ ಆರ್ ಮುಂತಾದವರು ಹಾಜರಿದ್ದರು.
ಲಲಿತ ಪ್ರಬಂಧ ಪ್ರಕಾರಕ್ಕೆ ಕೊಡಮಾಡುವ ಪ್ರಸಿದ್ಧ ಸಾಹಿತಿ ಎನ್. ಶೈಲಜಾ ಹಾಸನ ದತ್ತಿ ಪ್ರಬಂಧ ಮಾಣಿಕ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಸುಚಿತ್ರಾ ಹೆಗಡೆಯವರ “ಮಿಂಚುಹುಳದ ದಾರಿ” ಹಾಗೂ ಬೆಳಗಾವಿಯ ಜ್ಯೋತಿ ಬದಾಮಿಯವರ “ಕುಂಬಳಕಾಯಿ ಕಳ್ಳ ಅಂದ್ರೆ” ಕೃತಿಗಳು; ಕಾವ್ಯ ಪ್ರಕಾರಕ್ಕೆ ಕೊಡಮಾಡುವ ದಿ. ಸಿ.ಪಿ. ನಾರಾಯಣಚಾರ್ಯ ಸ್ಮಾರಕ ದತ್ತಿ ಕಾವ್ಯ ಮಾಣಿಕ್ಯ ಪ್ರಶಸ್ತಿಗೆ ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಅವರ “ರಿಯಾಯಿತಿ ದರದ ಬುದ್ಧ”, ಬೆಳಗಾವಿಯ ಶೋಭಾ ನಾಯಕರವರ “ಅರ್ಧ ಮುಖಗಳ ಶಹರು”, ಕೊಪ್ಪಳದ ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ “ನಾಕು ತಾವಿನ ತಿರುವು”, ಉತ್ತರ ಕನ್ನಡದ ವನರಾಗಶರ್ಮರವರ “ಕೊಳಲನೇಕೆ ನುಡಿಸದಿರುವೆ” ಕೃತಿಗಳು; ಸಂಶೋಧನಾ ವಿಭಾಗಕ್ಕೆ ಕೊಡಮಾಡುವ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ ಸಂಶೋಧನಾ ಮಾಣಿಕ್ಯ ಪ್ರಶಸ್ತಿಗೆ ಮುಂಬಯಿಯ ಡಾ. ದುರ್ಗಪ್ಪ ಕೋಟಿಯವರ್ ಅವರ “ಮುಂಬಯಿ ಕನ್ನಡ ಗದ್ಯ ವಾಹಿನಿ”, ರಾಯಚೂರಿನ ಈರಣ್ಣ ಬೆಂಗಾಲಿಯವರ “ನಮ್ಮ ರಾಯಚೂರು” ಕೃತಿಗಳು’ ವಚನ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ದೊಡ್ಡಚಂದಪ್ಪ ತಳ್ಳಿ ಪಾಟೀಲ ಸ್ಮಾರಕ ದತ್ತಿ ವಚನ ಮಾಣಿಕ್ಯ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಡಾ. ಪುಷ್ಪಾವತಿ ಶಲವಡಿಮಠರವರ “ಅನುಭಾವ ದೀಪ್ತಿ”, ಕೊಪ್ಪಳ ಜಿಲ್ಲೆಯ ಗೀತಾ ಮಲ್ಲನಗೌಡರವರ “ವಚನ ಸಿರಿ” ಕೃತಿಗಳು’ ನಾಟಕ ವಿಭಾಗಕ್ಕೆ ಕೊಡಮಾಡುವ ಪ್ರಭಾವತಿ ಶೆಡ್ತಿ ದತ್ತಿ ನಾಟಕ ಮಾಣಿಕ್ಯ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ವಿನುತಾ ಹಂಚಿನಮನಿ ಅವರ “ಅಪರಾಜಿತೆಯರು” ಕೃತಿ; ಕಾದಂಬರಿ ವಿಭಾಗಕ್ಕೆ ಕೊಡಮಾಡುವ ದಿ. ಫೆಲಿಕ್ಸ್ ಅಲ್ಬುಕರ್ಕ್ ಮಡಂತ್ಯಾರ್ ಸ್ಮಾರಕ ದತ್ತಿ ಕಾದಂಬರಿ ಮಾಣಿಕ್ಯ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ರಂಜಿತಾ ವಿಕ್ರಮ ಮಹಾಜನರವರ “ಅವಳೇ ನನ್ನ..”, ಹಾವೇರಿ ಜಿಲ್ಲೆಯ ರವೀಂದ್ರ ಮುದ್ದಿಯವರ “ಗಾಡ್ ಈಸ್ ನಾಟ್ ರೀಚಬಲ್” ಕೃತಿಗಳು’ ಗಜಲ್ ವಿಭಾಗಕ್ಕೆ ಕೊಡಮಾಡುವ ದಿ. ಫಾತಿಮಾ ಭೀ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ ಗಜಲ್ ಮಾಣಿಕ್ಯ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಡಾ. ಲಕ್ಷಿö್ಮÃಕಾಂತ್ ಮಿರಜಕರ ಅವರ “ಖಾಲಿ ಜೋಳಿಗೆಯ ಫಕೀರ”, ಧಾರವಾಡ ಜಿಲ್ಲೆಯ ಡಾ. ರೇಣುಕಾತಾಯಿ ಸಂತ ಬಾ ಅವರ “ದಿಲ್‌ಕಶ್ ಗಜಲ್” ಕೃತಿಗಳು’ ಕಥಾ ವಿಭಾಗಕ್ಕೆ ಕೊಡಮಾಡುವ ಕೊಣನೂರು ಅಣ್ಣಯ್ಯ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಎಂ. ಡಿ. ಚಿತ್ತರಗಿ ಅವರ “ಚಟ್ಟದ ಬಿಕ್ಕು”, ಗದಗ ಜಿಲ್ಲೆಯ ಡಾ. ಉಮೇಶ ತಿಮ್ಮಾಪುರ ಅವರ “ಕಗ್ಗಲ್ಲ ಕ್ರಾಸ್” ಕೃತಿಗಳು; ಚುಟುಕು ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ಕೆ. ವೈ. ಕಂದಕೂರ ದತ್ತಿ ಚುಟುಕು ಮಾಣಿಕ್ಯ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ನಂದಾದೀಪ ಅವರ “ರಾತ್ರಿ ಸುರಿದ ಮಲ್ಲಿಗೆ”, ಕೊಪ್ಪಳ ಜಿಲ್ಲೆಯ ಜಯಶ್ರೀ ಹಕ್ಕಂಡಿಯವರ “ಮಿಣುಕು ದೀಪಗಳು” ಕೃತಿಗಳು; ವಿಮರ್ಶಾ ವಿಭಾಗಕ್ಕೆ ಕೊಡಮಾಡುವ ಕುಂದೂರು ಜಯಪದ್ಮ ಧರಣೇಂದ್ರರಾಜ್ ದತ್ತಿ ವಿಮರ್ಶಾ ಮಾಣಿಕ್ಯ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಡಾ. ಜಿ.ಎಸ್. ಅಶೋಕ ಅವರ “ಡಾ. ಜಿ.ಎಸ್.ಶಿವರುದ್ರಪ್ಪ ಮತ್ತು ಚನ್ನವೀರ ಕಣವಿಯವರ ಕಾವ್ಯದಲ್ಲಿನ ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ”, ದಕ್ಷಿಣ ಕನ್ನಡ ಜಿಲ್ಲೆಯ ಹರೀಶ ಟಿ.ಜಿ. ಒಡ್ಡಿನಬೈಲು ಅವರ “ಹೊಳೆದದ್ದೇ ತಾರೆ” ಕೃತಿಗಳು; ಮಕ್ಕಳ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ರಾಮಣ್ಣ ಸುಬ್ಬಣ್ಣ ಹುಣಸಗಿ ದತ್ತಿ ಶಿಶು ಮಾಣಿಕ್ಯ ಪ್ರಶಸ್ತಿಗೆ ಹಾವೇರಿ ಜಿಲ್ಲೆಯ ಕೃಪಾ ಬಿ.ಎಂ. ಅವರ “ಮಕ್ಕಳ ಮ್ಯಾಜಿಕ್”, ಹಾಸನ ಜಿಲ್ಲೆಯ ಮಮತಾ ಅರಸೀಕೆರೆ ಅವರ “ಗೂಡು ಸೇರಿದ ಹಕ್ಕಿಗಳು” ಕೃತಿಗಳು; ಬಿಡಿ ಲೇಖನಗಳ ವಿಭಾಗಕ್ಕೆ ಕೊಡಮಾಡುವ ದಿ. ರಾಮಸ್ವಾಮಿ ಎಚ್. ಶ್ರೀಮತಿ ರಂಗಲಕ್ಷಿö್ಮÃ ದತ್ತಿ ಲೇಖನ ಮಾಣಿಕ್ಯ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಗಜಾನನ ಭಟ್ಟ ಅವರ “ಕಣದಂಗ”, ದಾವಣಗೆರೆ ಜಿಲ್ಲೆಯ ಎನ್.ಟಿ. ರ್ರಿ ಸ್ವಾಮಿ ಅವರ “ಸಾಧನೆಗೆ ಹಾದಿ ನೂರು” ಕೃತಿಗಳು; ಹಾಸ್ಯ ಸಾಹಿತ್ಯ ವಿಭಾಗಕ್ಕೆ ಕೊಡಮಾಡುವ ದಿ. ಕರಿಯಯ್ಯ, ದಿ. ದೇವಮ್ಮ ಸ್ಮಾರಕ ದತ್ತಿ ಹಾಸ್ಯ ಮಾಣಿಕ್ಯ ಪ್ರಶಸ್ತಿಗೆ ರಾಯಚೂರು ಜಿಲ್ಲೆಯ ಪಿ. ವೆಂಕಟೇಶ ಬಾಗಲವಾಡ ಅವರ “ನಿಮಗ ತಿಳಿಯೋದಿಲ್ಲ ಬಿಡ್ರಿ”, ಹಾಸನ ಜಿಲ್ಲೆಯ ಸುಮಾರಮೇಶ್ ಅವರ “ಚೆಲ್ಲಿದರು ಮಲ್ಲಿಗೆಯ” ಕೃತಿಗಳು ಭಾಜನವಾದವು. ಬೇಲೂರು ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

